ChatGPT Image Oct 3, 2026, 08_41_04 PM-modified
GREATER BENGALURU NEWS 9
GBA

Greater Bengaluru News9 : ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ನಾಗರಿಕರಿಗೆ ಆನ್‌ಲೈನ್‌ ಮೂಲಕ ಒದಗಿಸುವ ಸೇವೆಗಳಿಗೆ ‘ ಸಾಫ್ಟ್‌ವೇರ್‌ ಶುಲ್ಕ ‘ ವಿಧಿಸಲು ಆದೇಶ ಹೊರಡಿಸಲಾಗಿದೆ. ಇದಕ್ಕೆ ಪ್ರತಿಪಕ್ಷ ಬಿಜೆಪಿ, ಸಾರ್ವಜನಿಕರು ಹಾಗೂ ಸಂಘ- ಸಂಸ್ಥೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಆಸ್ತಿ ತೆರಿಗೆ ಸೇವೆಗಳಿಗೆ ವಸತಿ ಸ್ವತ್ತುಗಳಿಗೆ 200 ರೂ., ವಸತಿಯೇತರ ಹಾಗೂ ಮಿಶ್ರ ಬಳಕೆ ಆಸ್ತಿಗಳಿಗೆ 1000 ರೂ. ತಂತ್ರಾಂಶ ಶುಲ್ಕ ವಿಧಿಸಲಾಗಿದೆ. ಅಲ್ಲದೇ ಬಿ-ಖಾತಾದಿಂದ ಎ- ಖಾತಾ ಪರಿವರ್ತನೆಗೆ ವಸತಿ ಆಸ್ತಿಗೆ 2 ಸಾವಿರ ರೂ., ವಸತಿಯೇತರ ಸ್ವತ್ತಿಗೆ 10 ಸಾವಿರ ರೂ. ಶುಲ್ಕ ವಸೂಲಿ ಮಾಡಲು ನಿರ್ಧರಿಸಲಾಗಿದೆ.

ಈ ಶುಲ್ಕವನ್ನು ತಂತ್ರಾಂಶ ಅಭಿವೃದ್ಧಿ ಮತ್ತು ನಿರ್ವಹಣೆ, ಕ್ಲೌಡ್‌ ಮೂಲ ಸೌಕರ್ಯ, ಹೋಸ್ಟಿಂಗ್‌, ಸೈಬರ್‌ ಭದ್ರತೆ, ಡೇಟಾ ನಿರ್ವಹಣೆ, ಜಿಐಎಸ್‌ ವ್ಯವಸ್ಥೆ ಹಾಗೂ ಡಿಜಿಟಲ್‌ ಸೇವಾ ವಿತರಣಾ ವ್ಯವಸ್ಥೆ, ನಾಗರಿಕ ಸೇವಾ ವೇದಿಕೆಗಳು, ಹಾರ್ಡ್‌ವೇರ್‌, ನೆಟ್‌ವರ್ಕ್ ಮೂಲಸೌಕರ್ಯ ಸೇರಿದಂತೆ ಇನ್ನಿತರೆ ಉದ್ದೇಶಗಳಿಗೆ ಬಳಸಲಾಗುವುದು ಎಂದು ಹೇಳಲಾಗಿದೆ. ಸೇವೆಯನ್ನು ಪಡೆಯುವ ಸಂದರ್ಭದಲ್ಲಿ ಶುಲ್ಕವನ್ನು ಎಲೆಕ್ಟ್ರಾನಿಕ್‌ ರೂಪದಲ್ಲಿ ಸಂಗ್ರಹಿಸಲಾಗುವುದು. ಸಂಗ್ರಹಿತ ಮೊತ್ತವನ್ನು ಪ್ರತ್ಯೇಕ ಲೆಕ್ಕದಲ್ಲಿ ದಾಖಲಿಸಿ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ ರವಾನಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

”ಖಜಾನೆ ಖಾಲಿ ಮಾಡಿಕೊಂಡು ದಿವಾಳಿಯಾಗಿರುವ ಸರಕಾರವು, ನಗರದ ಆಸ್ತಿ ಮಾಲೀಕರಿಗೆ ಸಾಫ್ಟ್‌ವೇರ್‌ ಶುಲ್ಕ ವಿಧಿಸಿದ್ದು, ಇದು ಲೂಟಿಗೆ ಹೊಸ ಅಡ್ಡದಾರಿಯಾಗಿದೆ. ಜನರು ತಮ್ಮ ಆಸ್ತಿಗೆ ಖಾತೆ ಪಡೆಯಲು ಈಗಾಗಲೇ ಇರುವ ತೆರಿಗೆ, ಶುಲ್ಕದ ಜತೆಗೆ ಹೊಸದಾಗಿ ಸಾಫ್ಟ್‌ವೇರ್‌ ಶುಲ್ಕ ಕಟ್ಟಬೇಕಿದೆ. ಆಸ್ತಿ ತೆರಿಗೆ, ಖಾತಾ ಸೇವೆ, ದಾಖಲೆಗಳಿಗೂ ಶುಲ್ಕ ಕಟ್ಟಬೇಕು. ಇದೀಗ ಸಾಫ್ಟ್‌ವೇರ್‌ ಅಭಿವೃದ್ಧಿ, ನಿರ್ವಹಣೆಯ ವೆಚ್ಚವನ್ನೂ ಆಸ್ತಿ ಮಾಲೀಕರ ಜೇಬಿನಿಂದಲೇ ವಸೂಲಿ ಮಾಡುವ ವಿನೂತನ ಹಗಲು ದರೋಡೆ ಶುರು ಮಾಡಲಾಗಿದೆ. ಆಡಳಿತ ನಡೆಸಲು ಯೋಗ್ಯತೆ ಇಲ್ಲದೆ, ಉಚಿತಗಳ ನಾಟಕವಾಡಿ ರಾಜ್ಯವನ್ನು ದಿವಾಳಿಯಾಗಿಸಿರುವ ಕಾಂಗ್ರೆಸ್‌ ಸರಕಾರವು, ಸಾಫ್ಟ್‌ವೇರ್‌ ಶುಲ್ಕ ವಸೂಲಿ ಮಾಡಲು ಹೊರಟಿರುವುದು ಖಂಡನೀಯ,” ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹರಿಹಾಯ್ದಿದ್ದಾರೆ.

”ಸಾಫ್ಟ್‌ವೇರ್‌ ಅಭಿವೃದ್ಧಿ ಸರಕಾರದ ಹೊಣೆ. ಅದಕ್ಕೆ ಈಗಾಗಲೇ ಜನ ಸಾಕಷ್ಟು ತೆರಿಗೆ ಕಟ್ಟುತ್ತಿದ್ದಾರೆ. ಸಾಫ್ಟ್‌ವೇರ್‌ ಅಭಿವೃದ್ಧಿ ನಿರ್ವಹಣೆ ನೆಪದಲ್ಲಿ ಪ್ರತಿ ಸೇವೆಗೆ ಸಾವಿರಾರು ರೂ. ವಸೂಲಿ ಮಾಡುವುದು ಯಾವ ಸೀಮೆಯ ಆಡಳಿತ. ಡಿಜಿಟಲ್‌ ಆಡಳಿತವೆಂದರೆ ಜನರಿಗೆ ಉತ್ತಮ ಸೇವೆ ನೀಡುವುದೇ ಹೊರತು, ಸಾಫ್ಟ್‌ವೇರ್‌ ಹೆಸರಲ್ಲಿಜನರನ್ನು ದೋಚುವುದಲ್ಲ. ಕೂಡಲೇ ಸಾಫ್ಟ್‌ವೇರ್‌ ಶುಲ್ಕ ವಿಧಿಸುವ ಆದೇಶವನ್ನು ಹಿಂಪಡೆಯಬೇಕು,” ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *