Greater Bengaluru News9 : ರಾಜ್ಯದಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿದ್ಯುತ್ ಸರಬರಾಜು ಕಂಪನಿಗಳ ಇಂಜಿನಿಯರ್ಗಳ ವಿರುದ್ಧ ಲೋಕಾಯುಕ್ತ ಇಲಾಖೆ ಉರುಳು ಬಿಗಿದಿದೆ. ಕಲಬುರಗಿಯ ಜೆಸ್ಕಾಂ (GESCOM) ಹಾಗೂ ಹುಬ್ಬಳ್ಳಿಯ ಹೆಸ್ಕಾಂ (HESCOM) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳ (AEE) ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ.
ಕಲಬುರಗಿಯ ಮಹಾಲಕ್ಷ್ಮಿ ಲೇಔಟ್ ಮತ್ತು ಖಾದ್ರಿ ಚೌಕ್ನಲ್ಲಿರುವ ಜೆಸ್ಕಾಂ ಎಇಇ ರಾಜೇಶ್ವರಿ ಬಬಲಾದ ಅವರ ನಿವಾಸಗಳು ಹಾಗೂ ಅವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜೇಶ್ವರಿ ಅವರು ಬೆಳಿಗ್ಗೆ ವಾಕಿಂಗ್ಗೆ ತೆರಳಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಮನೆಗೆ ಆಗಮಿಸಿ ಶೋಧ ಕಾರ್ಯ ಆರಂಭಿಸಿದ್ದು, ಅವರು ಮರಳುವಷ್ಟರಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿದಿತ್ತು.
ಇದೇ ರೀತಿಯಾಗಿ, ಹುಬ್ಬಳ್ಳಿಯ ಅಕ್ಷಯ ಕಾಲೋನಿಯಲ್ಲಿರುವ ಹೆಸ್ಕಾಂ ಎಇಇ ಕಿರಣಕುಮಾರ್ ಬೈಂದೂರ್ ಅವರ ನಿವಾಸ, ಗೋಪನಕೊಪ್ಪದಲ್ಲಿರುವ ಹೆಸ್ಕಾಂ ಕಚೇರಿ ಹಾಗೂ ಧಾರವಾಡದಲ್ಲಿರುವ ಅವರ ಸಹೋದರನ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕಿರಣಕುಮಾರ್ ಅವರ ಪತ್ನಿ ಪ್ರೀತಿ ಕೂಡ ಹೆಸ್ಕಾಂನಲ್ಲಿ ಇಂಜಿನಿಯರ್ ಆಗಿದ್ದು, ತಬೀಬ್ ಲ್ಯಾಂಡ್ ಪ್ರದೇಶದಲ್ಲಿರುವ ಅವರ ನಿವಾಸದ ಮೇಲೂ ದಾಳಿ ನಡೆದಿದೆ. ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಡಿವೈಎಸ್ಪಿ ಬಸವರಾಜ್ ಬುದ್ನಿ ಸೇರಿದಂತೆ ವಿಶೇಷ ಅಧಿಕಾರಿಗಳ ತಂಡವು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುನ್ನಡೆಸಿದೆ.
ಉಭಯ ಪ್ರಕರಣಗಳಲ್ಲಿಯೂ ಅಧಿಕಾರಿಗಳು ನಿಗದಿತ ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ-ಪಾಸ್ತಿ ಹಾಗೂ ಹಣಕಾಸು ವ್ಯವಹಾರಗಳನ್ನು ಹೊಂದಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಇದರ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಪತ್ತೆಯಾಗಿರುವ ಆಸ್ತಿ ವಿವರಗಳು, ಅಧಿಕೃತ ದಾಖಲೆಗಳು ಮತ್ತು ಬ್ಯಾಂಕ್ ಖಾತೆಗಳ ಕುರಿತು ಕೂಲಂಕುಷ ತನಿಖೆ ಹಾಗೂ ಪರಿಶೀಲನೆ ಮುಂದುವರಿದಿದೆ.

