Greater Bengaluru News9 : ತಂತ್ರಜ್ಞಾನ ಮುಂದುವರಿದಂತೆ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಲು ಎಐ ಕ್ಯಾಮೆರಾಗಳ ಬಳಕೆ ಹೆಚ್ಚಾಗುತ್ತಿದೆ. ಆದರೆ ಬೆಂಗಳೂರಿನಲ್ಲಿ ಇದೇ ಎಐ ಕ್ಯಾಮೆರಾ ಮಾಡಿದ ವಿಚಿತ್ರ ಎಡವಟ್ಟು ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಸೌವಿಕ್ ದತ್ತಾ ಎಂಬುವವರು ಸ್ಕೂಟರ್‌ನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರು. ಅವರ ಬೆನ್ನಿಗೆ ಗಿಟಾರ್ ಬ್ಯಾಗ್ ಇತ್ತು. ಆದರೆ ಔಟರ್ ರಿಂಗ್ ರಸ್ತೆಯಲ್ಲಿದ್ದ ಎಐ ಟ್ರಾಫಿಕ್ ಕ್ಯಾಮೆರಾ, ಗಿಟಾರ್ ಬ್ಯಾಗ್ ಅನ್ನು ಹಿಂಬದಿ ಸವಾರ ಎಂದು ತಪ್ಪಾಗಿ ಗ್ರಹಿಸಿದೆ ಎನ್ನಲಾಗಿದೆ.
ಹೀಗಾಗಿ ಹಿಂಬದಿ ಸವಾರ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಸೌವಿಕ್ ಅವರ ಪತ್ನಿಯ ಸ್ಕೂಟರ್‌ಗೆ 500 ರೂಪಾಯಿ ದಂಡದ ಚಲನ್ ಬಂದಿದೆ.
ಚಲನ್‌ನೊಂದಿಗೆ ಬಂದಿದ್ದ ಫೋಟೋ ನೋಡಿದ ಬಳಿಕ ಸೌವಿಕ್ ದತ್ತಾ ಈ ವಿಚಾರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾವು ಒಬ್ಬರೇ ಸ್ಕೂಟರ್ ಚಲಾಯಿಸುತ್ತಿದ್ದರೂ ಗಿಟಾರ್ ಬ್ಯಾಗ್‌ನ ಕಾರಣಕ್ಕೆ ಹೆಲ್ಮೆಟ್ ರಹಿತ ಹಿಂಬದಿ ಸವಾರ ಎಂದು ಚಲನ್ ಬಂದಿರುವುದಾಗಿ ಅವರು ತಿಳಿಸಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಬೆಂಗಳೂರು ಸಂಚಾರ ಪೊಲೀಸರು ಕೂಡ ಸ್ಪಂದಿಸಿದ್ದಾರೆ. ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಪ್ರಕರಣವನ್ನು ಪರಿಶೀಲಿಸಿ ತಪ್ಪು ಚಲನ್ ಆಗಿದ್ದರೆ ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ.
ನಗರದಲ್ಲಿ 2022ರಿಂದ ಎಐ ಆಧಾರಿತ ಕ್ಯಾಮೆರಾಗಳನ್ನು ಬಳಸಲಾಗುತ್ತಿದ್ದು, ಕೆಲ ಸಂದರ್ಭಗಳಲ್ಲಿ ತಾಂತ್ರಿಕ ದೋಷಗಳಿಂದ ತಪ್ಪು ಚಲನ್‌ಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಇಂತಹ ದೂರುಗಳನ್ನು ಸಲ್ಲಿಸಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

