Greater Bengaluru News9 : ಕರ್ನಾಟಕದಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾವು ಮತ್ತೆ ಮುನ್ನೆಲೆಗೆ ಬಂದಿದೆ. ಇಂದು ನಡೆದ ಅತ್ಯಂತ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ, ನನೆಗುದಿಗೆ ಬಿದ್ದಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸುವ ಕುರಿತು ಗಂಭೀರವಾಗಿ ಮಂಥನ ನಡೆಸಲಾಗಿದೆ. ಈ ಬಾರಿ ಆಡಳಿತಾರೂಢ ಸರ್ಕಾರವು ವಿಳಂಬ ಧೋರಣೆಗೆ ತಿಲಾಂಜಲಿ ಇಟ್ಟು, ಮುಂಬರುವ ಜನವರಿ ಮೊದಲ ವಾರದಲ್ಲೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಉತ್ಸುಕತೆ ತೋರಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಹಲವು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೆ ಆಡಳಿತ ಯಂತ್ರದ ಹಿಡಿತದಲ್ಲೇ ಕಾಲಕಳೆಯುತ್ತಿರುವ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಜೀವತುಂಬಲು ಸರ್ಕಾರ ಈಗ ರಣತಂತ್ರ ರೂಪಿಸುತ್ತಿದೆ. ಸಂಪುಟ ಸಭೆಯಲ್ಲಿ ಬಂದಿರುವ ಅನಧಿಕೃತ ಒಲವಿನಂತೆ, ಜನವರಿ ಮೊದಲ ವಾರದಲ್ಲಿ ಮತದಾನ ನಡೆಸುವ ಸಾಧ್ಯತೆಗಳ ಬಗ್ಗೆ ಸ್ಪಷ್ಟ ರೂಪುರೇಷೆಗಳು ಸಿದ್ಧವಾಗುತ್ತಿವೆ. ಆಡಳಿತಾತ್ಮಕ ತೊಡಕುಗಳು ಹಾಗೂ ಕಾನೂನು ಹೋರಾಟಗಳಿಂದ ವರ್ಷಗಟ್ಟಲೆ ಮುಂದೂಡಲ್ಪಟ್ಟಿದ್ದ ಈ ಪ್ರಕ್ರಿಯೆಗೆ ಈಗ ಹಸಿರು ನಿಶಾನೆ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ.
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕಣದ ಕಾವು ತಣ್ಣಗಾಗುತ್ತಿದ್ದಂತೆ, ರಾಜ್ಯ ಸರ್ಕಾರವು ಮುಂದಿನ ಹಂತದ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಮೇಲ್ಮಟ್ಟದ ಸ್ಥಳೀಯ ಸಂಸ್ಥೆಗಳ ಸಮರ ಮುಗಿದ ಬೆನ್ನಲ್ಲೇ, ತಳಮಟ್ಟದ ಆಡಳಿತವಾದ ಗ್ರಾಮ ಪಂಚಾಯಿತಿ ಚುನಾವಣೆಗಳನ್ನೂ ಕೈಗೆತ್ತಿಕೊಳ್ಳಲು ಸಚಿವ ಸಂಪುಟದಲ್ಲಿ ಒಲವು ವ್ಯಕ್ತವಾಗಿದೆ. ಒಂದೇ ಬಾರಿಗೆ ಇಡೀ ವ್ಯವಸ್ಥೆಯನ್ನು ಒಟ್ಟಿಗೆ ಒತ್ತಡಕ್ಕೆ ಸಿಲುಕಿಸದೆ, ಹಂತ-ಹಂತವಾಗಿ ರಾಜ್ಯದ ಎಲ್ಲಾ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಯಶಸ್ವಿಯಾಗಿ ಮುಗಿಸುವುದು ಸರ್ಕಾರದ ಪ್ರಮುಖ ಯೋಜನೆಯಾಗಿದೆ.
ಸಂಪುಟ ಸಭೆಯ ಈ ಅನಿರೀಕ್ಷಿತ ಬೆಳವಣಿಗೆಯಿಂದ ರಾಜ್ಯದ ರಾಜಕೀಯ ಪಕ್ಷಗಳಲ್ಲಿ ಈಗಿನಿಂದಲೇ ಚುನಾವಣಾ ರಣರೋಮಾಂಚನ ಆರಂಭವಾಗಿದೆ. ಹಳ್ಳಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿರುವ ಈ ಚುನಾವಣಾ ದಿನಾಂಕವು ಅಧಿಕೃತವಾಗಿ ಘೋಷಣೆಯಾಗುತ್ತದೆಯೇ ಮತ್ತು ಅಂದುಕೊಂಡಂತೆ ಜನವರಿಯಲ್ಲಿಯೇ ಮತದಾನದ ಪರ್ವ ಜರುಗಲಿದೆಯೇ ಎಂಬ ಕುತೂಹಲ ಸದ್ಯ ರಾಜ್ಯದ ಮೂಲೆಮೂಲೆಗಳಲ್ಲಿ ಗರಿಗೆದರಿದೆ.

