ChatGPT Image Oct 3, 2026, 08_41_04 PM-modified
GREATER BENGALURU NEWS 9
RTI Activist

Greater Bengaluru News9 : ಬೆಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ನೌಕರರನ್ನೇ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಕೋಲಾರ ಮೂಲದ ಆರ್‌ಟಿಐ ಕಾರ್ಯಕರ್ತ ಮುರಳಿ (45) ಕೊನೆಗೂ ವಿಧಾನಸೌಧ ಪೊಲೀಸರ ಅತಿಥಿಯಾಗಿದ್ದಾನೆ. ಲೋಕಾಯುಕ್ತ ಕಚೇರಿಯ ಹೆಸರಿನಲ್ಲಿ ಅಸಲಿ ತರಹದ ನಕಲಿ ಲೆಟರ್‌ಹೆಡ್ ಹಾಗೂ ನಮೂನೆಗಳನ್ನು ಸಿದ್ಧಪಡಿಸುತ್ತಿದ್ದ ಈ ವಂಚಕ, ನೌಕರರಿಗೆ ತೀವ್ರ ಮಾನಸಿಕ ಹಿಂಸೆ ನೀಡಿ ಹಣಕಾಸು ಬೇಡಿಕೆ ಇಡುತ್ತಿದ್ದ ಕೃತ್ಯ ಬೆಳಕಿಗೆ ಬಂದಿದೆ.

ಆರೋಪಿ ಮುರಳಿ ಕೇವಲ ಸುಳ್ಳು ಹೇಳುವುದಷ್ಟೇ ಅಲ್ಲದೆ, ಈಗಾಗಲೇ ಲೋಕಾಯುಕ್ತದಲ್ಲಿ ಸಲ್ಲಿಕೆಯಾಗಿದ್ದ ಅಸಲಿ ದೂರುಗಳ ಮೂಲ ದಾಖಲೆಗಳನ್ನು ತನ್ನ ಕೈಚಳಕದಿಂದ ಬದಲಾಯಿಸುತ್ತಿದ್ದ. ದೂರುಗಳಲ್ಲಿನ ಹೆಸರು, ವಿಳಾಸ ಹಾಗೂ ಇತರೆ ವಿವರಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ತಿರುಚಿ, ಆಯಾ ಸರ್ಕಾರಿ ಅಧಿಕಾರಿಗಳ ವಿರುದ್ಧವೇ ಹೊಸದಾಗಿ ಭ್ರಷ್ಟಾಚಾರದ ಗಂಭೀರ ದೂರು ದಾಖಲಾಗಿದೆ ಎಂಬ ಭ್ರಮೆಯನ್ನು ಹುಟ್ಟಿಸುವ ನಕಲಿ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ನಿಸ್ಸೀಮನಾಗಿದ್ದನು.

ಹೀಗೆ ಸಿದ್ಧಪಡಿಸಿದ ನಕಲಿ ದೂರುಗಳ ಪ್ರತಿಯನ್ನು ನೇರವಾಗಿ ಆಯಾ ಸರ್ಕಾರಿ ಅಧಿಕಾರಿಗಳ ಕಚೇರಿ ಅಥವಾ ಮನೆ ವಿಳಾಸಕ್ಕೆ ಕಳುಹಿಸುವುದು ಈತನ ಕೃತ್ಯದ ಮುಂದಿನ ಹಂತವಾಗಿತ್ತು. ಕೆಲ ದಿನಗಳು ಕಳೆದ ನಂತರ ಅಧಿಕಾರಿಗಳನ್ನು ಖುದ್ದಾಗಿ ಸಂಪರ್ಕಿಸುತ್ತಿದ್ದ ಈ ನಟನಾ ಚತುರ, ನಿಮ್ಮ ಮೇಲಿನ ದೂರು ಇತ್ಯರ್ಥಪಡಿಸಲು ಅಥವಾ ವಾಪಸ್ ಪಡೆಯಲು ದೊಡ್ಡ ಮಟ್ಟದ ಸೆಟಲ್‌ಮೆಂಟ್ ಮಾಡಿಕೊಳ್ಳಬೇಕೆಂದು ಹೆದರಿಸುತ್ತಿದ್ದ. ಪ್ರಕರಣದ ಗಂಭೀರತೆ ನೋಡಿ ಕಂಗಾಲಾಗುತ್ತಿದ್ದ ಅಧಿಕಾರಿಗಳಿಂದ 3 ಸಾವಿರದಿಂದ ಹಿಡಿದು ಬರೋಬ್ಬರಿ 50 ಸಾವಿರ ರೂಪಾಯಿವರೆಗೆ ಹಣವನ್ನು ಕಿತ್ತುಕೊಳ್ಳುತ್ತಿದ್ದ.

ಅಷ್ಟೇ ಅಲ್ಲದೆ, ತಾನು ಅರಣ್ಯ ಇಲಾಖೆಯ ಅಧಿಕಾರಿಯೆಂದು ಸಾರ್ವಜನಿಕರನ್ನು ಮತ್ತು ಅಧಿಕಾರಿಗಳನ್ನು ನಂಬಿಸಲು ಒಂದು ನಕಲಿ ಗುರುತಿನ ಚೀಟಿಯನ್ನೂ ಸಹ ಈತ ಜೊತೆಗಿಟ್ಟುಕೊಂಡಿದ್ದ. ಇತ್ತೀಚೆಗೆ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರಿಗೆ ಕಳುಹಿಸಲಾದ ನಕಲಿ ಲೋಕಾಯುಕ್ತ ದೂರಿನ ಪ್ರತಿ ದೊಡ್ಡ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಎಚ್ಚೆತ್ತ ಆ ಅಧಿಕಾರಿ ನೇರವಾಗಿ ಲೋಕಾಯುಕ್ತ ಕಚೇರಿಗೆ ತೆರಳಿ ಪರಿಶೀಲಿಸಿದಾಗ, ತಮ್ಮ ಹೆಸರಿನಲ್ಲಿ ಯಾವುದೇ ದೂರು ದಾಖಲೇ ಆಗಿಲ್ಲ ಎಂಬ ಸತ್ಯ ಹೊರಬಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು.

ಸಾರ್ವಜನಿಕರ ದಾರಿತಪ್ಪಿಸಲು ಮುರಳಿ ಬಳಸುತ್ತಿದ್ದ ಬ್ಯಾಂಕ್ ಖಾತೆಗಳ ಬಗ್ಗೆಯೂ ಪೊಲೀಸರು ಬಿಗಿ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಈ ವಂಚನೆಯ ಹಣ ನೇರವಾಗಿ ಈತನ ಕೈ ಸೇರದಂತೆ ಕೆಲವು ಖಾತೆಗಳನ್ನು ಮೂರನೇ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಿ ಬಳಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಖಾತೆದಾರರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ವಂಚನೆಯ ಜಾಲದಲ್ಲಿ ಇವರ ಪಾತ್ರ ಎಷ್ಟು ಎಂಬುದರ ಬಗ್ಗೆ ವಿಧಾನಸೌಧ ಠಾಣೆಯ ತನಿಖಾಧಿಕಾರಿಗಳು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.

ಈ ಆರ್‌ಟಿಐ ಕಮಿಷನ್ ದಂಧೆಕೋರ ಕೇವಲ ಒಬ್ಬಿಬ್ಬರಿಗೆ ಮಾತ್ರ ವಂಚಿಸಿಲ್ಲದೆ, ರಾಜ್ಯದ ನಾನಾ ಭಾಗಗಳ ಹಲವಾರು ಸರ್ಕಾರಿ ಅಧಿಕಾರಿಗಳನ್ನು ಇದೇ ರೀತಿ ಟಾರ್ಗೆಟ್ ಮಾಡಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಯ ಹಿಂದಿನ ಹಣಕಾಸು ವ್ಯವಹಾರಗಳು, ನಕಲಿ ದಾಖಲೆ ಮುದ್ರಿಸಿದ ಮೂಲ ಹಾಗೂ ಈ ಕೃತ್ಯದಲ್ಲಿ ತೆರೆಮರೆಯಲ್ಲಿ ಕೈಜೋಡಿಸಿರುವ ಇTರೆ ಸಂಚುಕೋರರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ತನಿಖೆಯಿಂದ ಇನ್ನೂ ಅನೇಕ ಆಘಾತಕಾರಿ ಸಂಗತಿಗಳು ಹೊರಬರುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *