Greater Bengaluru News9 : ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಹೆಲಿಕಾಪ್ಟರ್ ಪತನಗೊಂಡಿದ್ದು, ಪೈಲಟ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಐವರು ಕರ್ನಾಟಕದವರಾಗಿದ್ದು, ಬೆಂಗಳೂರಿನ ಸಿಸಿಬಿ ಇನ್ಸ್ಪೆಕ್ಟರ್ ಹಾಗೂ ನಾಲ್ವರು ವಕೀಲರು ಸೇರಿದ್ದಾರೆ.
ಟ್ರಾನ್ಸ್ ಭಾರತ್ ಕಂಪನಿಗೆ ಸೇರಿದ VT-HCX ನೋಂದಣಿ ಸಂಖ್ಯೆಯ ಹೆಲಿಕಾಪ್ಟರ್ ಇಂದು ಮಧ್ಯಾಹ್ನ ಹವಾಮಾನ ವೈಪರೀತ್ಯದಿಂದ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ ಎಂದು ಹೇಳಲಾಗಿದೆ. ಹೆಲಿಕಾಪ್ಟರ್ ಪೈಲಟ್ ಹಿಮಾಂಶು ಹಾಗೂ ಬೆಂಗಳೂರು ಮೂಲದ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಬೆಂಗಳೂರು ಮೂಲದ ಪ್ರತಾಪ್, ಅರುಣ್ ಸಾಲಂಕೆ, ಶಂಕರ್ ಗೌಡ, ಕೆ. ಸುಧೀರ್ ಹಾಗೂ ಹೆಚ್.ಎಸ್. ನಟರಾಜ್ ಎಂದು ಗುರುತಿಸಲಾಗಿದೆ.
ಹೆಲಿಕಾಪ್ಟರ್ ದುರಂತದಲ್ಲಿ ಐವರು ಕನ್ನಡಿಗರ ಸಾವು
ಬೆಂಗಳೂರಿನ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಲಂಕೆ ಹಾಗೂ ವಕೀಲರಾದ ಸುಧೀರ್, ಶಂಕರ್ ಗೌಡ, ಹೆಚ್.ಎಸ್. ನಟರಾಜ್ ಮತ್ತು ಪ್ರತಾಪ್ ಅವರು ಉತ್ತರಾಖಂಡ ಪ್ರವಾಸಕ್ಕೆ ತೆರಳಿದ್ದರು.
ಸ್ನೇಹಿತರೆಲ್ಲರೂ ಚಾರ್ಧಾಮ್ ಯಾತ್ರೆಯ ಭಾಗವಾಗಿ ಬದರಿನಾಥ ಧಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದ ವೇಳೆ ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಹೆಲಿಕಾಪ್ಟರ್ ಪತನಗೊಂಡಿದೆ. ಈ ದುರಂತದಲ್ಲಿ ಐವರು ಪ್ರಯಾಣಿಕರು ಹಾಗೂ ಪೈಲಟ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ರಜೆ ಪಡೆದು ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಸಿಸಿಬಿ ಇನ್ಸ್ಪೆಕ್ಟರ್
ಅರುಣ್ ಸಾಲಂಕೆ ಅವರು ಬೆಂಗಳೂರು ಸಿಸಿಬಿಯಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಜೆ ಪಡೆದುಕೊಂಡು ತಮ್ಮ ಸ್ನೇಹಿತರೊಂದಿಗೆ ಉತ್ತರಾಖಂಡದ ಚಾರ್ಧಾಮ್ ಪ್ರವಾಸಕ್ಕೆ ತೆರಳಿದ್ದರು. ಆದರೆ ಪ್ರವಾಸ ಮುಗಿಸಿ ಹಿಂತಿರುಗುವ ಸಂದರ್ಭದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅರುಣ್ ಸಾಲಂಕೆ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಮಧ್ಯಾಹ್ನ 1:14ಕ್ಕೆ ಬದರಿನಾಥದಿಂದ ಹೊರಟಿದ್ದ ಹೆಲಿಕಾಪ್ಟರ್
ಘಟನೆ ಕುರಿತು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (UCADA) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಜೈನ್ ಪ್ರತಿಕ್ರಿಯಿಸಿದ್ದಾರೆ.
ಇಂದು ಮಧ್ಯಾಹ್ನ 1:14ಕ್ಕೆ ಬದರಿನಾಥದಿಂದ ಸಹಸ್ತ್ರಧಾರಾ ಹೆಲಿಪೋರ್ಟ್ಗೆ ಹೆಲಿಕಾಪ್ಟರ್ ಹೊರಟಿತ್ತು. ಜೋಶಿಮಠ ಕಣಿವೆಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ಹೆಲಿಕಾಪ್ಟರ್ನ ಚಲನವಲನಗಳನ್ನು ಗಮನಿಸಲು ಬಳಸುತ್ತಿದ್ದ ಟ್ರ್ಯಾಕಿಂಗ್ ಸಿಸ್ಟಮ್ನಿಂದ ಇದ್ದಕ್ಕಿದ್ದಂತೆ ಸಂಪರ್ಕ ಕಡಿತಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಹೆಲಿಕಾಪ್ಟರ್ನಲ್ಲಿ ಪೈಲಟ್ ಸೇರಿ ಆರು ಮಂದಿ ಪ್ರಯಾಣ
ಹೆಲಿಕಾಪ್ಟರ್ನಲ್ಲಿ ಒಬ್ಬ ಪೈಲಟ್ ಹಾಗೂ ಐವರು ಪ್ರಯಾಣಿಕರು ಸೇರಿದಂತೆ ಒಟ್ಟು ಆರು ಮಂದಿ ಇದ್ದರು ಎಂದು ಪ್ರತೀಕ್ ಜೈನ್ ಮಾಹಿತಿ ನೀಡಿದ್ದಾರೆ. ಐವರು ಪ್ರಯಾಣಿಕರು ಬೆಂಗಳೂರು ಮೂಲದವರು ಎಂದು ವರದಿಯಾಗಿದ್ದು, ಅವರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹೆಲಿಕಾಪ್ಟರ್ ಪತನಗೊಂಡಿರುವ ಬಗ್ಗೆ ವರದಿಗಳು ಬಂದಿದ್ದರೂ, ಅದರ ನಿಖರ ಸ್ಥಳವನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ ಎಂದು ಅವರು ಹೇಳಿದ್ದಾರೆ.

