Greater Bengaluru News9 : ನಂದಿನಿ ಹಾಲು ಖರೀದಿಸುವ ಗ್ರಾಹಕರಿಗೆ ಶಾಕಿಂಗ್ ಸುದ್ದಿ! ಈಗಾಗಲೇ ಹಾಲಿನ ದರ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಇದೀಗ ಮೊಸರಿನ ಬೆಲೆ ಏರಿಕೆಯೂ ಬಿಸಿ ಮುಟ್ಟಿಸಿದೆ. ನಂದಿನಿ ಹಾಲು ಮತ್ತು ಮೊಸರಿನ ಪರಿಷ್ಕೃತ ದರವನ್ನು ಕೆಎಂಎಫ್ ಪ್ರಕಟಿಸಿದ್ದು, ನವೆಂಬರ್ 1ರಿಂದಲೇ ಹೊಸ ಬೆಲೆಗಳು ಜಾರಿಗೆ ಬರಲಿವೆ.
ಹೌದು, ಇನ್ಮುಂದೆ ನಂದಿನಿ ಮೊಸರು ಖರೀದಿಸಲು ಗ್ರಾಹಕರು ಹೆಚ್ಚಿನ ಹಣ ನೀಡಬೇಕಿದೆ. ಈವರೆಗೆ 28 ರೂಪಾಯಿ ಇದ್ದ 500 ಗ್ರಾಂ ಮೊಸರಿನ ಪೊಟ್ಟಣದ ಬೆಲೆ 34 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಒಂದು ಕೆ.ಜಿ. ಮೊಸರಿನ ಬೆಲೆ 54 ರೂಪಾಯಿಯಿಂದ ಬರೋಬ್ಬರಿ 68 ರೂಪಾಯಿಗೆ ಹೆಚ್ಚಳವಾಗಿದೆ.
ಹಾಲಿನ ದರವೂ ಹೆಚ್ಚಳವಾಗಿದ್ದು, ಟೋನ್ಡ್ ಹಾಲು 46 ರೂಪಾಯಿಯಿಂದ 54 ರೂಪಾಯಿಗೆ ತಲುಪಿದೆ. ಹೋಮೋಜಿನೈಸ್ಡ್ ಟೋನ್ಡ್ ಹಾಲು 47 ರೂಪಾಯಿಯಿಂದ 56 ರೂಪಾಯಿಗೆ ಏರಿಕೆಯಾಗಿದೆ.
ಇನ್ನು ಹೋಮೋಜಿನೈಸ್ಡ್ ಹಸುವಿನ ಹಾಲು 50ರಿಂದ 58 ರೂಪಾಯಿಗೆ, ಸ್ಪೆಷಲ್ ಟೋನ್ಡ್ ಹಾಲು 52ರಿಂದ 64 ರೂಪಾಯಿಗೆ ಹಾಗೂ ಶುಭಂ ಹಾಲು 52ರಿಂದ 64 ರೂಪಾಯಿಗೆ ಹೆಚ್ಚಳವಾಗಿದೆ. ಹೋಮೋಜಿನೈಸ್ಡ್ ಶುಭಂ ಹಾಲಿನ ಬೆಲೆ 53ರಿಂದ 65 ರೂಪಾಯಿಗೆ ಏರಿಕೆಯಾಗಿದೆ.
ರೈತರ ಹಿತದೃಷ್ಟಿಯಿಂದ ದರ ಏರಿಕೆ: ಕೆಎಂಎಫ್ ಸಮರ್ಥನೆ
ಹಾಲು ಮತ್ತು ಮೊಸರಿನ ದರ ಹೆಚ್ಚಳಕ್ಕೆ ಕೆಎಂಎಫ್ ರೈತರ ಹಿತಾಸಕ್ತಿಯನ್ನು ಪ್ರಮುಖ ಕಾರಣವಾಗಿ ಮುಂದಿಟ್ಟಿದೆ. ರಾಜ್ಯದಲ್ಲಿ ಮಳೆ ಕೊರತೆಯಿಂದ ನೀರು ಮತ್ತು ಮೇವಿನ ಅಭಾವ ಉಂಟಾಗಿದ್ದು, ಜಾನುವಾರುಗಳ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಪಶುಗಳ ಔಷಧೋಪಚಾರ ಹಾಗೂ ಮೇವು ಖರೀದಿಗೆ ರೈತರು ಹೆಚ್ಚಿನ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿ 26.89 ಲಕ್ಷಕ್ಕೂ ಅಧಿಕ ಹೈನುಗಾರ ರೈತ ಸದಸ್ಯರಿದ್ದು, ಪ್ರತಿದಿನ ಸುಮಾರು 8.9 ಲಕ್ಷ ರೈತರು ಹಾಲು ಪೂರೈಸುತ್ತಿದ್ದಾರೆ. ರೈತರಿಗೆ ಪ್ರತಿದಿನ ಸರಾಸರಿ 28.60 ಕೋಟಿ ರೂಪಾಯಿ ಪಾವತಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಹಾಲು ಖರೀದಿ ದರವನ್ನು ಪ್ರತಿ ಲೀಟರ್ಗೆ 10ರಿಂದ 12 ರೂಪಾಯಿ ಹೆಚ್ಚಿಸುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಟೋನ್ಡ್ ಹಾಲಿನ ದರವನ್ನು ಪ್ರತಿ ಲೀಟರ್ಗೆ 8 ರೂಪಾಯಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಹೆಚ್ಚಳದಲ್ಲಿ 7 ರೂಪಾಯಿಯನ್ನು ಹಾಲು ಉತ್ಪಾದಕ ರೈತರಿಗೆ ನೀಡುವಂತೆ ಸೂಚಿಸಲಾಗಿದೆ.
ಇದರ ಜೊತೆಗೆ ಹಾಲಿನಲ್ಲಿರುವ ಜಿಡ್ಡಿನಾಂಶದ ಆಧಾರದ ಮೇಲೆ ನಂದಿನಿಯ ವಿವಿಧ ಮಾದರಿಯ ಹಾಲು ಮತ್ತು ಮೊಸರಿನ ಮಾರಾಟ ದರವನ್ನೂ ಪರಿಷ್ಕರಿಸಲಾಗಿದೆ. ಒಟ್ಟಿನಲ್ಲಿ ನವೆಂಬರ್ 1ರಿಂದ ನಂದಿನಿ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ.

