Greater Bengaluru News9: ರಾಜ್ಯದಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಪರಿಷ್ಕೃತ ದರ ಜಾರಿಯಾಗಿದ್ದು, ಬೆಲೆ ಏರಿಕೆಯ ಪ್ರಮಾಣ ಗ್ರಾಹಕರಲ್ಲಿ ಗೊಂದಲ ಮೂಡಿಸಿದೆ.
ಸರ್ಕಾರ ಲೀಟರ್ಗೆ ₹8 ದರ ಹೆಚ್ಚಳ ಘೋಷಿಸಿದ್ದರೂ, ನಂದಿನಿಯ ಕೆಲವು ಪ್ರೀಮಿಯಂ ಹಾಲಿನ ದರ ₹12ರಷ್ಟು ಹೆಚ್ಚಾಗಿದೆ. ಇನ್ನು ಮೊಸರಿನ ದರ ಲೀಟರ್ಗೆ ₹14 ಏರಿಕೆಯಾಗಿದೆ. ಹಾಗಾದರೆ ಸರ್ಕಾರ ಘೋಷಿಸಿದ ₹8 ಹೆಚ್ಚಳಕ್ಕೂ, ಕೆಲವು ಉತ್ಪನ್ನಗಳ ದರ ಏರಿಕೆಗೂ ವ್ಯತ್ಯಾಸವೇಕೆ ಎಂಬ ಪ್ರಶ್ನೆ ಗ್ರಾಹಕರಲ್ಲಿ ಮೂಡಿದೆ.
ಸರ್ಕಾರದ ವಿವರಣೆಯ ಪ್ರಕಾರ, ಹಾಲಿನಲ್ಲಿರುವ ಫ್ಯಾಟ್ ಮತ್ತು ಎಸ್ಎನ್ಎಫ್ ಪ್ರಮಾಣದ ಆಧಾರದ ಮೇಲೆ ದರ ನಿಗದಿಪಡಿಸಲಾಗುತ್ತದೆ. ಹೀಗಾಗಿ ಎಲ್ಲ ಬಗೆಯ ಹಾಲಿಗೂ ಒಂದೇ ರೀತಿಯ ದರ ಹೆಚ್ಚಳ ಅನ್ವಯವಾಗುವುದಿಲ್ಲ.
ಫ್ಯಾಟ್ ಪ್ರಮಾಣ ಹೆಚ್ಚಿದ್ದರೆ ದರವೂ ಹೆಚ್ಚು!
ಸಾಮಾನ್ಯವಾಗಿ ಶೇ.3ರಷ್ಟು ಫ್ಯಾಟ್ ಹೊಂದಿರುವ ನಂದಿನಿ ನೀಲಿ ಪ್ಯಾಕೆಟ್ ಹಾಲಿನ ದರ ಲೀಟರ್ಗೆ ₹8 ಹೆಚ್ಚಳವಾಗಿದೆ. ಆದರೆ ಶೇ.4.5ರಿಂದ 6ರಷ್ಟು ಫ್ಯಾಟ್ ಹೊಂದಿರುವ ಶುಭಂ ಮತ್ತು ಸಮೃದ್ಧಿ ಹಾಲಿನ ದರ ಲೀಟರ್ಗೆ ರೂ. 12 ಏರಿಕೆಯಾಗಿದೆ.
ಶುಭಂ ಮತ್ತು ಸಮೃದ್ಧಿ ಹಾಲಿನಲ್ಲಿ ಸಾಮಾನ್ಯ ಹಾಲಿಗಿಂತ ಜಿಡ್ಡಿನ ಅಂಶ ಹೆಚ್ಚಿರುವುದರಿಂದ ಅವುಗಳ ಮೂಲ ದರವೂ ಹೆಚ್ಚಿನ ಮಟ್ಟದಲ್ಲಿತ್ತು. ಇದೀಗ ದರ ಪರಿಷ್ಕರಣೆಯಲ್ಲಿಯೂ ಈ ವ್ಯತ್ಯಾಸ ಮುಂದುವರಿದಿದೆ. ಹಾಲಿನ ಗುಣಮಟ್ಟ, ಫ್ಯಾಟ್ ಮತ್ತು ಎಸ್ಎನ್ಎಫ್ ಪ್ರಮಾಣವನ್ನು ಆಧರಿಸಿ ಬೆಲೆ ನಿಗದಿಪಡಿಸಲಾಗುತ್ತದೆ ಎಂಬುದು ಸರ್ಕಾರದ ಸಮರ್ಥನೆಯಾಗಿದೆ.
ಗ್ರಾಹಕರಿಗೆ ಹೆಚ್ಚುವರಿ ಹೊರೆ; ಬಿಜೆಪಿ ಆಕ್ರೋಶ
ಒಂದೆಡೆ ಹಾಲಿನ ದರ ಏರಿಕೆಯಿಂದ ಗ್ರಾಹಕರಿಗೆ ಹೆಚ್ಚುವರಿ ಹೊರೆ ಬಿದ್ದಿದ್ದರೆ, ಮತ್ತೊಂದೆಡೆ ಮೊಸರಿನ ದರ ಲೀಟರ್ಗೆ ರೂ. 14 ಹೆಚ್ಚಳವಾಗಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಾಜಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ರೈತರ ಹೆಸರಿನಲ್ಲಿ ಸರ್ಕಾರ ಗ್ರಾಹಕರ ಜೇಬಿಗೆ ಕೈಹಾಕುತ್ತಿದೆ ಎಂದು ಆರೋಪಿಸಿದ್ದಾರೆ. ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಬೃಹತ್ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

