Greater Bengaluru News9: ಬೆಂಗಳೂರಿನ ಬೇಗೂರಿನ ಅಂಜಿನಪ್ಪ ಪೆಟ್ರೋಲ್ ಬಂಕ್ ಬಳಿ ವಿದ್ಯುತ್ ದುರಸ್ತಿ ಕಾರ್ಯದ ವೇಳೆ ನೆಲಮಂಗಲ ಉಪವಿಭಾಗದ ಲೈನ್ಮ್ಯಾನ್ ಅನಿಲ್ ಅವರಿಗೆ ವಿದ್ಯುತ್ ಶಾಕ್ ತಗುಲಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ದುರ್ಘಟನೆ ವ್ಯವಸ್ಥೆಯ ಕಣ್ಣು ಕುರುಡುತನ ಹಾಗೂ ಬೆಸ್ಕಾಂನ (BESCOM) ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ. ಕರ್ತವ್ಯದ ಮೇಲಿದ್ದ ಸಿಬ್ಬಂದಿಯೊಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿರುವುದು ಕೇವಲ ಆಕಸ್ಮಿಕ ದುರ್ಘಟನೆಯಲ್ಲ; ಬದಲಿಗೆ ಇಲಾಖೆಯ ಸತತ ನಿರ್ಲಕ್ಷ್ಯದಿಂದ ಸೃಷ್ಟಿಯಾದ ಮಾನವ ನಿರ್ಮಿತ ದುರಂತ. ಪ್ರಾಣವನ್ನೇ ಪಣಕ್ಕಿಟ್ಟು ಹಗಲಿರುಳು ಶ್ರಮಿಸುವ ನೌಕರರಿಗೆ ಕನಿಷ್ಠ ಸುರಕ್ಷತಾ ಸಾಧನಗಳನ್ನೂ ನೀಡದೆ ಕತ್ತಲಲ್ಲಿ ಕೈಯಾಡಿಸುವಂತೆ ಮಾಡುತ್ತಿರುವ ಅಧಿಕಾರಿಗಳ ಧೋರಣೆ ಅತ್ಯಂತ ಖಂಡನೀಯ.
ಪ್ರಪಂಚ ತಂತ್ರಜ್ಞಾನ ಹಾಗೂ ಆಧುನಿಕತೆಯಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ವಿದ್ಯುತ್ ಮಾರ್ಗಗಳನ್ನು ಸರಿಪಡಿಸುವ ಕೆಳಹಂತದ ಸಿಬ್ಬಂದಿಗೆ ಮಾತ್ರ ಆಧುನಿಕ ರಕ್ಷಣಾ ಪರಿಕರಗಳಾಗಲಿ, ಸುರಕ್ಷಿತ ವಾತಾವರಣವಾಗಲಿ ಸಿಗುತ್ತಿಲ್ಲದಿರುವುದು ವ್ಯವಸ್ಥೆಯ ದಿವಾಳಿತನವನ್ನು ತೋರಿಸುತ್ತದೆ. ಲೈನ್ಮ್ಯಾನ್ಗಳ ಜೀವಕ್ಕೆ ಇಲ್ಲಿ ಯಾವುದೇ ಬೆಲೆ ಇಲ್ಲವೇ? ಇಂತಹ ಜೀವಹಾನಿ ಹಾಗೂ ಆಘಾತಕಾರಿ ಘಟನೆಗಳು ಆಗಾಗ ಮರುಕಳಿಸುತ್ತಿದ್ದರೂ, ಇಲಾಖೆಯ ಮೇಲ್ವಿಚಾರಣೆ ನಡೆಸಬೇಕಾದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಮತ್ತು ಬೆಸ್ಕಾಂ ಮಾತ್ರ ಕಣ್ಮುಚ್ಚಿ ಕುಳಿತಿದೆ. ಕೇವಲ ಕಾಗದದ ಮೇಲಿನ ನಿಯಮಗಳೇ ಹೊರತು, ಮೈದಾನದಲ್ಲಿ ಕೆಲಸ ಮಾಡುವವರಿಗೆ ಯಾವುದೇ ಮುಂಜಾಗ್ರತಾ ಕ್ರಮಗಳು ದೊರೆಯುತ್ತಿಲ್ಲದಿರುವುದು ಆಡಳಿತ ಯಂತ್ರದ ಸಂಪೂರ್ಣ ವೈಫಲ್ಯ.
ಇದುವರೆಗೂ ಕರ್ನಾಟಕದಲ್ಲಿ ವರ್ಷಕ್ಕೆ 150ಕ್ಕೂ ಹೆಚ್ಚು ಲೈನ್ ಮ್ಯಾನ್ಗಳು ವಿದ್ಯುತ್ ಶಾಕ್ನಿಂದ ಸಾವಿಗೀಡಾಗುತ್ತಿದ್ದರೂ ಅದಕ್ಕೆ ಕಾರಣರಾದ ಯಾವೊಬ್ಬ ಇಂಜಿನಿಯರ್ ವಿರುದ್ಧವೂ ಯಾವುದೇ ಕ್ರಮ ಜರಗದೇ ಇರುವುದು ನಿಜಕ್ಕೂ ದುರಾದೃಷ್ಠ. ಲೈನ್ ಕ್ಲಿಯರೆನ್ಸ್ ಕೊಡುವ ಎಂಜಿನಿಯರ್ಗಳೇ ಇಂತಹ ಘಟನೆಗಳಿಗೆ ನೇರ ಕಾರಣ. ಹೀಗಾಗಿ ಇಂತವರ ವಿರುದ್ಧ ಅಗತ್ಯ ಕ್ರಮ ಜರುಗಿಸಿ, ಮುಂದೆ ಇಂತಹ ಘಟನೆಗಳನ್ನು ತಡೆಯಬೇಕಿದೆ.
ಅಮಾಯಕ ಸಿಬ್ಬಂದಿಯ ಪ್ರಾಣ ಮತ್ತು ಅವರ ರಕ್ಷಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕಾದ ಬೆಸ್ಕಾಂ ಅಧಿಕಾರಿಗಳು ಮಾತ್ರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಗುತ್ತಿಗೆ ಹಾಗೂ ಹೊರಗುತ್ತಿಗೆ ಪದ್ಧತಿಯ ಹೆಸರಿನಲ್ಲಿ ಅಥವಾ ಕೇವಲ ಅಸಡ್ಡೆಯಿಂದ ನೌಕರರ ಜೀವದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ. ಇಂದು ಅನಿಲ್ ಅವರಂತಹ ನೂರಾರು ಸಿಬ್ಬಂದಿ ಸುರಕ್ಷತೆಯಿಲ್ಲದೆ ಅಸುನೀಗುತ್ತಿದ್ದರೆ, ಅವರನ್ನು ನಂಬಿ ಬದುಕುತ್ತಿರುವ ಕುಟುಂಬಗಳ ಕಣ್ಣೀರಿಗೆ ಯಾರು ಉತ್ತರ ಕೊಡಬೇಕು? ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂಬಂತೆ, ಅಧಿಕಾರಿಗಳ ಈ ಮೌನ ಹಾಗೂ ನಿರ್ಲಕ್ಷ್ಯವೇ ಇಂತಹ ಘಟನೆಗಳಿಗೆ ನೇರ ಕಾರಣವಾಗಿದೆ.

ಇನ್ನು ಮುಂದೆ ಇಂತಹ ಪ್ರಾಣಹಾನಿಗಳನ್ನು ಸಹಿಸಲು ಸಾಧ್ಯವಿಲ್ಲ. ಬೆಸ್ಕಾಂ ಹಾಗೂ KERC ಇಲಾಖೆಗಳು ಕೇವಲ ಸಾಂತ್ವನ ಅಥವಾ ಪರಿಹಾರದ ಘೋಷಣೆಗಳಿಗೆ ಸೀಮಿತಗೊಳ್ಳದೆ, ತಕ್ಷಣವೇ ಎಚ್ಚೆತ್ತುಕೊಂಡು ಎಲ್ಲಾ ಲೈನ್ಮ್ಯಾನ್ಗಳಿಗೆ ಅತ್ಯಾಧುನಿಕ ಸುರಕ್ಷತಾ ಸಾಧನಗಳನ್ನು ಕಡ್ಡಾಯವಾಗಿ ಒದಗಿಸಬೇಕು. ದುರಸ್ತಿ ಕಾರ್ಯದ ಸಮಯದಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸುವ ಹಂತದಲ್ಲಿ ಆಗುವ ತಾಂತ್ರಿಕ ಹಾಗೂ ಮಾನವ ದೋಷಗಳನ್ನು ತಡೆಯಲು ಕಠಿಣ ಸುರಕ್ಷತಾ ಶಿಷ್ಟಾಚಾರಗಳನ್ನು (Safety Protocols) ಜಾರಿಗೆ ತರಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಮೂಲಕ ಗಾಯಾಳು ಸಿಬ್ಬಂದಿಗೆ ಹಾಗೂ ಅವರ ಕುಟುಂಬಕ್ಕೆ ತುರ್ತು ನ್ಯಾಯ ಒದಗಿಸುವುದು ಇಲಾಖೆಯ ಆದ್ಯತೆಯಾಗಬೇಕು.
ಇದೆಲ್ಲಕ್ಕಿಂತ ಹೆಚ್ಚಾಗಿ, ಬಡ ಸಿಬ್ಬಂದಿಯ ರಕ್ತದ ಮೇಲೆ ಕಟ್ಟಿದ ವ್ಯವಸ್ಥೆ ಇನ್ನಾದರೂ ತನ್ನ ಮೊಂಡುತನವನ್ನು ಬಿಡಬೇಕು. ಅನಿಲ್ ಅವರ ಪ್ರಾಣದೊಂದಿಗೆ ಆಟವಾಡಿರುವ ಸಂಬಂಧಪಟ್ಟ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಿ, ತನಿಖೆಗೆ ಒಳಪಡಿಸಬೇಕು. ಪ್ರಾಣಾಪಾಯದಿಂದ ಹೋರಾಡುತ್ತಿರುವ ಅನಿಲ್ ಅವರಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ನೀಡುವುದರ ಜೊತೆಗೆ ಅವರ ಕುಟುಂಬಕ್ಕೆ ಧೈರ್ಯ ತುಂಬುವ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ಮತ್ತು ಬೆಸ್ಕಾಂ ಹೊರಬೇಕು. ಇನ್ನಷ್ಟು ಜೀವಗಳು ಬಲಿಯಾಗುವ ಮುನ್ನ, ಈ ವ್ಯವಸ್ಥೆ ತನ್ನ ನಿದ್ರೆಯಿಂದ ಎದ್ದು ಕಠಿಣ ಕ್ರಮಗಳನ್ನು ಕೈಗೊಳ್ಳದಿದ್ದರೆ, ಜನಪ್ರತಿಭಟನೆಗಳ ಬಿಸಿ ಎದುರಿಸಬೇಕಾದೀತು ಎಚ್ಚರ.

