ChatGPT Image Oct 3, 2026, 08_41_04 PM-modified
GREATER BENGALURU NEWS 9
gruha jyothi

Greater Bengaluru News9 : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಉಚಿತ ವಿದ್ಯುತ್ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಲಕ್ಷಾಂತರ ಗ್ರಾಹಕರಿಗೆ ಇದೀಗ ಬೆಸ್ಕಾಂ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಅರ್ಹ ಫಲಾನುಭವಿಗಳನ್ನು ಮರು ಪರಿಶೀಲಿಸುವ ಕಟ್ಟುನಿಟ್ಟಿನ ಪ್ರಕ್ರಿಯೆ ಆರಂಭವಾಗಿದ್ದು, ಸುಮಾರು 16 ಲಕ್ಷ ಫಲಾನುಭವಿಗಳು ಈ ಯೋಜನೆಯಿಂದ ಬಹುತೇಕ ಹೊರಗುಳಿಯುವ ಭೀತಿ ಎದುರಾಗಿದೆ.

ಬೆಸ್ಕಾಂ ಸಿಬ್ಬಂದಿಗೆ ಸಿಗದ ಫಲಾನುಭವಿಗಳು
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಈ ಯೋಜನೆಯ ದುರುಪಯೋಗ ತಡೆಯಲು ಮತ್ತು ಅರ್ಹರಿಗೆ ಮಾತ್ರ ಸೌಲಭ್ಯ ತಲುಪಿಸಲು ಇಂಧನ ಇಲಾಖೆಯು ಮರು ಪರಿಶೀಲನಾ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 69 ಲಕ್ಷ ಫಲಾನುಭವಿಗಳಿದ್ದು, ಈ ಪೈಕಿ 16 ಲಕ್ಷ ಮಂದಿಯ ನಿಖರ ಮಾಹಿತಿ ಹಾಗೂ ದಾಖಲೆಗಳು ಇನ್ನು ಬೆಸ್ಕಾಂ ಕೈಸೇರಿಲ್ಲ. ಮೀಟರ್ ರೀಡರ್‌ಗಳು ಹಾಗೂ ಸಿಬ್ಬಂದಿಗಳು ಮೂರಕ್ಕೂ ಹೆಚ್ಚು ಬಾರಿ ಮನೆಗಳಿಗೆ ಭೇಟಿ ನೀಡಿದರೂ ಫಲಾನುಭವಿಗಳು ಸಿಗದಿರುವುದು ಪ್ರಮುಖ ಸಮಸ್ಯೆಯಾಗಿದೆ. ಬಹುತೇಕ ಮನೆಗಳಿಗೆ ಬೀಗ ಹಾಕಿರುವುದು ಅಥವಾ ಬಾಡಿಗೆದಾರರು ಮನೆ ಖಾಲಿ ಮಾಡಿ ಬೇರೆಡೆ ತೆರಳಿರುವುದು ಕಂಡುಬಂದಿದೆ.

ಮಾಹಿತಿ ನೀಡಲು ಹಿಂದೇಟು!
ಮತ್ತೊಂದೆಡೆ, ಕೆಲ ಫಲಾನುಭವಿಗಳು ಸ್ವತಃ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಪ್ರಮುಖವಾಗಿ ಆದಾಯ ತೆರಿಗೆ (IT) ಪಾವತಿದಾರರು ಹಾಗೂ ಹೊರರಾಜ್ಯದ ಮತದಾರರ ಪಟ್ಟಿಯಲ್ಲಿರುವವರು ದಾಖಲೆ ನೀಡಲು ಮುಂಜಾಗ್ರತಾ ಕ್ರಮವಾಗಿ ಮುಂದೆ ಬರುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಅಕ್ಟೋಬರ್ 31 ಕೊನೆಯ ಅವಕಾಶ
ತಮ್ಮ ದಾಖಲೆಗಳನ್ನು ಸಲ್ಲಿಸದ ಗ್ರಾಹಕರಿಗೆ ಬೆಸ್ಕಾಂ ಕೊನೆಯ ಅವಕಾಶವನ್ನು ನೀಡಿದೆ. ಅಕ್ಟೋಬರ್ 31ರ ಒಳಗಾಗಿ ಹತ್ತಿರದ ಬೆಸ್ಕಾಂ ಉಪ ವಿಭಾಗೀಯ ಕಚೇರಿಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿಯನ್ನು ಭರ್ತಿ ಮಾಡಬೇಕಿದೆ. ಒಂದು ವೇಳೆ ಈ ಅಂತಿಮ ಗಡುವಿನ ಒಳಗೂ ಮಾಹಿತಿ ನೀಡದಿದ್ದರೆ, ಅಂತಹವರ ಪ್ರತ್ಯೇಕ ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಪರಿಶೀಲನೆಯಲ್ಲಿ ಭಾಗಿಯಾಗದ ಗ್ರಾಹಕರನ್ನು ಗೃಹ ಜ್ಯೋತಿ ಯೋಜನೆಯಿಂದ ಶಾಶ್ವತವಾಗಿ ಹೊರಗಿಡಲು ಇಲಾಖೆ ತೀರ್ಮಾನಿಸಿದೆ.

Leave a Reply

Your email address will not be published. Required fields are marked *