Greater Bengaluru Nerws9 : ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕಲೆ, ಸಂಸ್ಕೃತಿ, ಜನಜೀವನ ಹಾಗೂ ಪರಂಪರೆಯ ಸೊಗಡನ್ನು ಬಿಂಬಿಸುವ ಸಲುವಾಗಿ ಐತಿಹಾಸಿಕ ‘ಬೆಂಗಳೂರು ಜಾತ್ರೆ’ಯನ್ನು ಆಯೋಜಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಡಿಸೆಂಬರ್ 4 ರಿಂದ ಡಿಸೆಂಬರ್ 13 ರವರೆಗೆ ಒಟ್ಟು 10 ದಿನಗಳ ಕಾಲ ಈ ಬೃಹತ್ ಸಾಂಸ್ಕೃತಿಕ ಉತ್ಸವವು ಬೆಂಗಳೂರಿನಲ್ಲಿ ಅತ್ಯಂತ ಅದ್ದೂರಿಯಾಗಿ ಜರುಗಲಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಶನಿವಾರ ಘೋಷಿಸಿದರು.
ತಂತ್ರಜ್ಞಾನ ಮತ್ತು ಆರ್ಥಿಕತೆಯಲ್ಲಿ ದೇಶದಲ್ಲೇ ಅತ್ಯಂತ ಡೈನಾಮಿಕ್ ನಗರವಾಗಿ ಬೆಳೆದಿರುವ ಬೆಂಗಳೂರು, ಕೇವಲ ಐಟಿ ಹಬ್ ಮಾತ್ರವಲ್ಲದೆ ಸಾಂಸ್ಕೃತಿಕವಾಗಿ ಕೂಡ ಶ್ರೀಮಂತವಾಗಿದೆ. ಯುವಜನತೆ ಮತ್ತು ನಾಗರಿಕರಿಗೆ ಅತ್ಯುತ್ತಮ ನಗರಿ ಅನುಭವವನ್ನು ನೀಡುವುದರ ಜೊತೆಗೆ, ರಾಜ್ಯದ ಜನಜೀವನ ಹಾಗೂ ಕಲೆ-ಸಂಸ್ಕೃತಿಯ ಮುಖಗಳನ್ನು ಒಂದುಗೂಡಿಸುವ ಸದುದ್ದೇಶದಿಂದ ಈ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಹತ್ತು ದಿನಗಳ ಸಾಂಸ್ಕೃತಿಕ ಉತ್ಸವದಲ್ಲಿ ರಾಜ್ಯದ ವಿಭಿನ್ನ ಕಲಾ ಪ್ರಕಾರಗಳು, ಜನಪದ ನೃತ್ಯಗಳು, ಆಚಾರ-ವಿಚಾರಗಳು ಹಾಗೂ ಭಾವನೆಗಳನ್ನು ಒಗ್ಗೂಡಿಸಿ ಪ್ರದರ್ಶಿಸಲಾಗುತ್ತದೆ. ಸರ್ಕಾರದ ಎಲ್ಲಾ ಅಂಗಸಂಸ್ಥೆಗಳು ಹಾಗೂ ವಿವಿಧ ನಾಗರಿಕ ಸಂಘ ಸಂಸ್ಥೆಗಳು ಕೈಜೋಡಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದೊಡ್ಡ ಮಟ್ಟದಲ್ಲಿ ಯೋಜನೆ ರೂಪಿಸುತ್ತಿವೆ.
ಬೆಂಗಳೂರು ನಗರದ ಜನರಿಗಾಗಿ ಮತ್ತು ಬೆಂಗಳೂರಿನವರೇ ವತಿಯಿಂದ ಆಯೋಜಿಸಲ್ಪಡುವ ಈ ಜಾತ್ರೆಯಲ್ಲಿ ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತು ಮುಖ್ಯವಾಗಿದೆ. ಮುಖ್ಯಮಂತ್ರಿಗಳ ಆಶಯದಂತೆ, ರಾಜ್ಯದ ಸಾಂಸ್ಕೃತಿಕ ದ್ಯೋತಕಗಳನ್ನು ಪ್ರತಿಬಿಂಬಿಸುವ ಈ ಕಾರ್ಯಕ್ರಮವು ಕೇವಲ ರಾಜಧಾನಿಯಷ್ಟೇ ಅಲ್ಲದೆ ಇಡೀ ರಾಜ್ಯದ ಜನತೆಯ ಮಹೋತ್ಸವವಾಗಿ ಹೊರಹೊಮ್ಮಲಿದೆ.
ಈ ಜಾತ್ರೆಯು ಸಾರ್ವಜನಿಕರ ಸಹಭಾಗಿತ್ವದಲ್ಲಿ ಯಶಸ್ವಿಯಾಗಿ ನೆರವೇರಲಿದೆ ಎಂದು ನಿರೀಕ್ಷಿಸಲಾಗಿದೆ. ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕೈಜೋಡಿಸುವ ಮೂಲಕ ಈ ಐತಿಹಾಸಿಕ ಬೆಂಗಳೂರು ಜಾತ್ರೆಯು ಕನ್ನಡಿಗರ ಹೆಮ್ಮೆಯ ಸಂಕೇತವಾಗಿ ಮೂಡಿಬರಲಿದೆ.
ಜಾತ್ರೆಯಲ್ಲಿ ಯಾವೆಲ್ಲಾ ಕಾರ್ಯಕ್ರಮಗಳು?
ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳಲ್ಲೂ ಕಾರ್ಯಕ್ರಮಗಳು ನಡೆಯಲಿವೆ. ಸರ್ಕಾರಿ ಕಚೇರಿ, ಶಿಕ್ಷಣ ಸಂಸ್ಥೆ, ಉದ್ಯಾನ, ರಸ್ತೆಗಳಲ್ಲಿ ಕಾರ್ಯಕ್ರಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಜಾನಪದ ಕಲೆಗಳ ಪ್ರದರ್ಶನ, ನಮ್ಮ ರಸ್ತೆ, ನಮ್ಮ ಬಡಾವಣೆ, ನಮ್ಮ ಸಂಸ್ಥೆ, ನಮ್ಮ ಕಲೆ ಹೀಗೆ ಎಲ್ಲರ ಜಾತ್ರೆ. ಜಿಬಿಎ, ಬಿಡಿಎ, ಕನ್ನಡ-ಸಂಸ್ಕೃತಿ ಇಲಾಖೆ ಸೇರಿ ಹಣ ಹಾಕಿ ಮಾಡಲಾಗುತ್ತೆ.
ಕನ್ನಡ-ಸಾಂಸ್ಕೃತಿಕ ಇಲಾಖೆಯಿಂದಲೇ 5 ಕೋಟಿ ಹಣ ಮೀಸಲಿದೆ. ಈ ರೀತಿ ಕಾರ್ಯಕ್ರಮದಿಂದ ಬೆಂಗಳೂರಿಗೆ ಹೆಚ್ಚು ಪ್ರವಾಸಿಗರು ಬರುತ್ತಾರೆ. ಇದು ಬೆಂಗಳೂರಿನ ಆರ್ಥಿಕ ಪ್ರಗತಿಗೂ ಸಹಕಾರವಾಗುತ್ತೆ. ಖಾಸಗಿ ಸಂಸ್ಥೆ ಬೆಂಗಳೂರು ಹಬ್ಬ ಆಯೋಜನೆ ಮಾಡುತ್ತಾ ಇತ್ತು. ಇದೀಗ ರಾಜ್ಯ ಸರ್ಕಾರವೇ ಕಾರ್ಯಕ್ರಮ ಮಾಡಲು ಮುಂದಾಗಿದೆ. 15 ರಿಂದ 20 ಕೋಟಿ ರೂ. ವೆಚ್ಚದಲ್ಲಿ ‘ಬೆಂಗಳೂರು ಜಾತ್ರೆ’ ಆಚರಣೆಗೆ ನಿರ್ಧರಿಸಲಾಗಿದೆ.

