ChatGPT Image Oct 3, 2026, 08_41_04 PM-modified
GREATER BENGALURU NEWS 9
PG

Greater Bengaluru News9 : ಬೆಂಗಳೂರು ಮಹಾನಗರದಲ್ಲಿ ದಿನದಿಂದ ದಿನಕ್ಕೆ ಹುಟ್ಟಿಕೊಳ್ಳುತ್ತಿರುವ ಪೇಯಿಂಗ್‌‌ ಗೆಸ್ಟ್‌ (ಪಿಜಿ) ವಸತಿಗೃಹಗಳ ಹಾವೇರಿಗೆ ಕಡಿವಾಣ ಹಾಕಲು ಹೈಕೋರ್ಟ್‌ನಿಂದ ಕಟ್ಟುನಿಟ್ಟಿನ ಮಾರ್ಗಸೂಚಿಗಳು ಹೊರಬಿದ್ದ ಬೆನ್ನಲ್ಲೇ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಅಕ್ರಮ ಪಿಜಿಗಳ ವಿರುದ್ಧ ಸಮರ ಸಾರಿದೆ.

ಕಳೆದ ಎರಡು ವರ್ಷಗಳಿಂದ ಕೇವಲ ಎಚ್ಚರಿಕೆಗಳನ್ನು ಮಾತ್ರ ನೀಡುತ್ತಾ ಬಂದಿದ್ದ ಜಿಬಿಎ (ಹಿಂದಿನ ಬಿಬಿಎಂಪಿ), ಇದೀಗ ನ್ಯಾಯಾಲಯದ ನಿರ್ದೇಶನವನ್ನೇ ಪ್ರಮುಖ ಅಸ್ತ್ರವನ್ನಾಗಿಸಿ ಯಾವುದೇ ಮುಲಾಜಿಲ್ಲದೆ ಕಠಿಣ ಕಾರ್ಯಾಚರಣೆಗೆ ಅಣಿಯಾಗಿದೆ. ನಗರದ ವಿವಿಧೆಡೆ ನಡೆಸಲಾದ ಪ್ರಾಥಮಿಕ ಸಮೀಕ್ಷೆಗಳಲ್ಲಿ ನಿಯಮಗಳನ್ನು ಗಾಳಿಗೊರಚಿರುವುದು ಬಯಲಾಗಿದ್ದು, ಅಂದಾಜು ಶೇಕಡಾ 50ರಷ್ಟು ಪಿಜಿಗಳು ಯಾವುದೇ ಅಧಿಕೃತ ಪರವಾನಗಿಗಳಿಲ್ಲದೆ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ವ್ಯಾಪಾರ ಪರವಾನಗಿ, ನಿಯಮಬದ್ಧ ಕಟ್ಟಡ ನಕ್ಷೆ ಅನುಮೋದನೆ ಹಾಗೂ ಅಗ್ನಿ ಸುರಕ್ಷತಾ ದೃಢೀಕರಣ ಪತ್ರವಿಲ್ಲದೆ ಸಾವಿರಾರು ಪಿಜಿಗಳು ರಾಜಾರೋಷವಾಗಿ ಮುಂದುವರಿದಿದ್ದು, ಇಂತಹವುಗಳ ವಿರುದ್ಧ ಕಾನೂನು ರೀತಿಯ ನೋಟಿಸ್‌ ಪ್ರಕ್ರಿಯೆ ಚುರುಕುಗೊಂಡಿದೆ. ಅಕ್ರಮವಾಗಿ ನಡೆಸುತ್ತಿರುವ ಪಿಜಿಗಳ ವಿದ್ಯುತ್‌ ಹಾಗೂ ನೀರಿನ ಸಂಪರ್ಕವನ್ನು ಕಡಿತಗೊಳಿಸಿ, ಅಂತಿಮವಾಗಿ ವಸತಿಗೃಹಗಳಿಗೆ ಬೀಗಮುದ್ರೆ ಜಡಿಯಲು ಜಿಬಿಎ ನ್ಯಾಯಾಲಯಕ್ಕೆ ಸ್ಪಷ್ಟ ಭರವಸೆ ನೀಡಿದೆ.

ಈ ಕಠಿಣ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲು ಜಿಬಿಎ ಮುಖ್ಯ ಆಯುಕ್ತರು ಬೆಸ್ಕಾಂ, ಜಲಮಂಡಳಿ ಹಾಗೂ ನಗರ ಪೊಲೀಸ್‌ ಆಯುಕ್ತರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ಇಲಾಖೆಗಳ ಸಮನ್ವಯದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಪಿಜಿ ಮಾಲೀಕರಿಗೆ ಜಾರಿಗೊಳಿಸಲಿರುವ ನೋಟಿಸ್‌‌ಗಳಲ್ಲಿ ಕಟ್ಟಡ ತೆರವುಗೊಳಿಸಲು ಹಾಗೂ ನಿವಾಸಿಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ನ್ಯಾಯಾಲಯದ ಸೂಚನೆಯಂತೆ 15 ರಿಂದ 21 ದಿನಗಳ ಕಾಲಾವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ.

ವೈಟ್‌ಫೀಲ್ಡ್‌, ಮಹದೇವಪುರ, ಕೆ.ಆರ್‌.ಪುರ, ಇಂದಿರಾನಗರ ಮತ್ತು ಸಿ.ವಿ.ರಾಮನ್‌ ನಗರದಂತಹ ಐಟಿ ಕಾರಿಡಾರ್‌ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ತುಂಬಿರುವ ಪ್ರದೇಶಗಳಲ್ಲೇ ಅತಿ ಹೆಚ್ಚು ಅಕ್ರಮ ಪಿಜಿಗಳು ತಲೆಎತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.

ಮಾಲೀಕರು ಏಕಪಕ್ಷೀಯ ತಡೆಯಾಜ್ಞೆ ಪಡೆಯದಂತೆ ತಡೆಯಲು ಹೈಕೋರ್ಟ್ ಹಾಗೂ ಸಿವಿಲ್ ನ್ಯಾಯಾಲಯಗಳಲ್ಲಿ ಕೇವಿಯಟ್ ದಾಖಲಿಸಲು ನ್ಯಾಯಪೀಠ ನಿರ್ದೇಶಿಸಿದ್ದು, ಕರ್ತವ್ಯಲೋಪ ಎಸಗುವ ಅಧಿಕಾರಿಗಳೇ ನೇರ ಹೊಣೆಗಾರರಾಗಲಿದ್ದಾರೆ ಎಂಬ ಎಚ್ಚರಿಕೆಯೊಂದಿಗೆ ವಿಚಾರಣೆಯನ್ನು ಈ ತಿಂಗಳ 19ಕ್ಕೆ ಮುಂದೂಡಲಾಗಿದೆ.

Leave a Reply

Your email address will not be published. Required fields are marked *