Greater Bengaluru News9 : ಕರ್ನಾಟಕದ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಕೇವಲ ಪೊಲೀಸರ ತಪಾಸಣೆಯಿಂದ ತಪ್ಪಿಸಿಕೊಳ್ಳಲು ತಲೆಗೆ ಏರಿಸಿಕೊಳ್ಳುತ್ತಿದ್ದ ಅರೆಬರೆ ರಕ್ಷಣೆ ನೀಡುವ ‘ಹಾಫ್ ಹೆಲ್ಮೆಟ್’ಗಳ ಅಯುಸ್ಸು ಮುಗಿದಿದೆ. ಸವಾರರ ಜೀವ ಸುರಕ್ಷತೆಗೆ ಅತ್ಯಂತ ಹೆಚ್ಚಿನ ಮಹತ್ವ ನೀಡಿರುವ ಸಾರಿಗೆ ಇಲಾಖೆಯು, ರಾಜ್ಯಾದ್ಯಂತ ಎಲ್ಲಾ ರೀತಿಯ ಹಾಫ್ ಹೆಲ್ಮೆಟ್ಗಳ ಬಳಕೆಯನ್ನು ನಿಷೇಧಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇನ್ಮುಂದೆ ರಸ್ತೆಗೆ ಇಳಿಯುವ ಪ್ರತಿಯೊಬ್ಬ ಸವಾರರೂ ಕೂಡ ಕಡ್ಡಾಯವಾಗಿ ಸರ್ಕಾರದ ಸುರಕ್ಷತಾ ಮಾನದಂಡಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಮಾರುಕಟ್ಟೆಯಲ್ಲಿ ಸಿಗುವ ಕೇವಲ ಹೆಸರಿಗಷ್ಟೇ ಇರುವ ಕಳಪೆ ಗುಣಮಟ್ಟದ ಹೆಲ್ಮೆಟ್ಗಳಿಗೆ ಬ್ರೇಕ್ ಹಾಕಲು ಮುಂದಾಗಿರುವ ಸಲಾಖೆ, ಐಎಸ್ಐ (ISI) ಅಥವಾ ಬಿಐಎಸ್ (BIS) ಮುದ್ರೆ ಇಲ್ಲದ ಹೆಲ್ಮೆಟ್ ಧರಿಸಿದರೆ ನೇರವಾಗಿ 500 ರೂ. ದಂಡ ವಿಧಿಸುವುದಾಗಿ ಎಚ್ಚರಿಸಿದೆ. ಈ ಕಠಿಣ ನಿಯಮವು ಬೈಕ್ ಓಡಿಸುವ ಚಾಲಕರಿಗೆ ಮಾತ್ರವಲ್ಲದೆ, ಹಿಂಬದಿಯಲ್ಲಿ ಕುಳಿತುಕೊಳ್ಳುವವರಿಗೂ ಸಮಾನವಾಗಿ ಅನ್ವಯಿಸಲಿದೆ. ಒಂದು ವೇಳೆ ಇಬ್ಬರೂ ನಿಯಮ ಉಲ್ಲಂಘಿಸಿದರೆ ಇಲಾಖೆಯ ದಂಡದ ಬಿಸಿ ಇಬ್ಬರ ಜೇಬಿಗೂ ಗಟ್ಟಿಯಾಗಿಯೇ ತಟ್ಟಲಿದೆ.
ಕೇವಲ ಗ್ರಾಹಕರನ್ನು ಮಾತ್ರವಲ್ಲದೆ, ಮಾರುಕಟ್ಟೆಯಲ್ಲಿ ಇಂತಹ ಕಳಪೆಮಟ್ಟದ ಹಾಫ್ ಹೆಲ್ಮೆಟ್ಗಳನ್ನು ಉತ್ಪಾದಿಸುವ ಕಂಪನಿಗಳು ಹಾಗೂ ಅಂಗಡಿಗಳಲ್ಲಿ ಮಾರಾಟ ಮಾಡುವವರ ಮೇಲೂ ಕಠಿಣ ಕಾನೂನು ಕ್ರಮ ಜರುಗಿಸಲು ಇಲಾಖೆ ಸಜ್ಜಾಗಿದೆ. ಸವಾರರು ಇದೇ ತಾಪತ್ರಯವನ್ನು ಮುಂದುವರಿಸಿ ಪದೇ ಪದೇ ಸಿಕ್ಕಿಬಿದ್ದರೆ, ದಂಡದ ಮೊತ್ತವು ದುಪ್ಪಟ್ಟಾಗಿ 1,000 ರೂ.ಗೆ ಏರಿಕೆಯಾಗಲಿದೆ. ಅಷ್ಟೇ ಅಲ್ಲದೆ, ಮುಂದಿನ ಮೂರು ತಿಂಗಳ ಕಾಲ ನಿಮ್ಮ ಚಾಲನಾ ಪರವಾನಗಿ (DL) ಕೂಡ ಅಧಿಕೃತವಾಗಿ ಅಮಾನತುಗೊಳ್ಳುವ ದೊಡ್ಡ ಆಪಾಯ ಎದುರಾಗಲಿದೆ.
ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಮುಂದಾಗಿರುವ ಪೊಲೀಸರು ಇತರೆ ತಪ್ಪುಗಳಿಗೂ ದೊಡ್ಡ ಮೊತ್ತದ ದಂಡ ವಿಧಿಸುತ್ತಿದ್ದಾರೆ. ವಾಹನ ಚಾಲನೆ ವೇಳೆ ಮೊಬೈಲ್ ಫೋನ್ ಬಳಸಿದರೆ 1,500 ರಿಂದ 5,000 ರೂ.ವರೆಗೆ, ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸದಿದ್ದರೆ 1,000 ರೂ.ವರೆಗೆ ದಂಡ ಕಟ್ಟಬೇಕಾಗುತ್ತದೆ. ಸಿಗ್ನಲ್ ಜಂಪ್ ಮಾಡುವವರು, ಟ್ರಿಪಲ್ ರೈಡಿಂಗ್ ಮಾಡುವವರು ಹಾಗೂ ಅತಿವೇಗವಾಗಿ ವಾಹನ ಚಾಯಿಸುವ ಸವಾರರು ಸಾವಿರಾರು ರೂಪಾಯಿಗಳ ದಂಡದ ಸುಳಿಗೆ ಸಿಲುಕಿಕೊಳ್ಳಬೇಕಾದ ಎಚ್ಚರಿಕೆಯನ್ನು ಇಲಾಖೆ ನೀಡಿದೆ.
ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಮಹಾಪರಾಧಗಳಾದ ಕುಡಿದು ವಾಹನ ಚಾಲನೆ ಮಾಡುವವರಿಗೆ (Drink & Drive) ಮೊದಲ ಬಾರಿಗೆ ಬಿದ್ದರೆ 10,000 ರೂ. ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆ ಕಾದಿದೆ. ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿಯೆಂದರೆ, ಮನೆಯ ಅಪ್ರಾಪ್ತ ವಯಸ್ಕ ಮಕ್ಕಳಿಗೆ ವಾಹನಗಳನ್ನು ಚಲಾಯಿಸಲು ನೀಡುವ ಪೋಷಕರು ಇನ್ಮುಂದೆ ಜಾಗರೂಕರಾಗಿರಬೇಕು; ಮಕ್ಕಳು ಸಿಕ್ಕಿಬಿದ್ದರೆ ಪೋಷಕರ ಮೇಲೆಯೇ ನೇರವಾಗಿ 25,000 ರೂ. ದಂಡ ಮತ್ತು ಗಂಭೀರ ಕಾನೂನು ಕ್ರಮ ಜರುಗಿಸಲಾಗುತ್ತದೆ. ದಂಡದ ಭಯಕ್ಕಿಂತ ಪ್ರತಿಯೊಬ್ಬರ ಪ್ರಾಣ ರಕ್ಷಣೆಯೇ ಮುಖ್ಯ ಎಂಬುದನ್ನು ಸಾರಿಗೆ ಇಲಾಖೆ ಜಾಗೃತಿ ಮೂಲಕ ಮನವರಿಕೆ ಮಾಡಿಕೊಡುತ್ತಿದೆ.

