Greater Bengaluru News9 : ಬೆಂಗಳೂರಿನ ಬಾಗಲೂರು ಮುಖ್ಯ ರಸ್ತೆಯಲ್ಲಿರುವ ಪ್ರಸಿದ್ಧ ಅಮೆಜಾನ್ ಕಚೇರಿಯ ಮುಂಭಾಗದ ಜನನಿಬಿಡ ಫುಟ್ಪಾತ್ನಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಇಡೀ ನಗರದ ನಿದ್ದೆಗೆಡಿಸಿದೆ. ಪಾದಚಾರಿಗಳು ನಿತ್ಯ ಓಡಾಡುವ ನಡಿಗೆ ಮಾರ್ಗದಲ್ಲೇ ಅಳವಡಿಸಲಾಗಿದ್ದ ವಿದ್ಯುತ್ ಟ್ರಾನ್ಸ್ಫಾರ್ಮರ್ ಬಾಕ್ಸ್ ಒಂದರಲ್ಲಿ ಸಂಭವಿಸಿದ ಭೀಕರ ಸ್ಫೋಟವು, ಕೇವಲ ಒಂದು ಅಪಘಾತವಾಗಿರದೆ ಸಾರ್ವಜನಿಕರ ಜೀವದೊಂದಿಗೆ ವ್ಯವಸ್ಥೆ ನಡೆಸುತ್ತಿರುವ ನಿರ್ಲಕ್ಷ್ಯದ ಮತ್ತೊಂದು ಕ್ರೂರ ಮುಖವನ್ನು ತೆರೆದಿಟ್ಟಿದೆ.
ಯಾವ ಕ್ಷಣದಲ್ಲಿ ಯಾವ ಅನಾಹುತ ಕಾದಿದೆಯೋ ಎಂಬ ಆತಂಕದ ನಡುವೆ ದಿನ ಕಳೆಯುವಂತಾಗಿರುವುದಕ್ಕೆ ಬಾಗಲೂರು ಮುಖ್ಯ ರಸ್ತೆಯ ಈ ದುರ್ಘಟನೆ ತಾಜಾ ಸಾಕ್ಷಿಯಾಗಿದೆ. ಅಮೆಜಾನ್ ಆಫೀಸ್ ಪಕ್ಕದ ಕಾಲ್ನಡಿಗೆ ಮಾರ್ಗದಲ್ಲಿ ಎಂದಿನಂತೆ ಸಾರ್ವಜನಿಕರು ಓಡಾಡುತ್ತಿದ್ದ ವೇಳೆಯೇ, ಅಲ್ಲಿನ ಟ್ರಾನ್ಸ್ಫಾರ್ಮರ್ ಒಂದೇ ಒಂದು ಕ್ಷಣದಲ್ಲಿ ಭೀಕರವಾಗಿ ಸ್ಪೋಟಗೊಂಡಿದೆ. ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಅದರ ಸಮೀಪದಲ್ಲೇ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಸ್ಫೋಟದ ರಭಸಕ್ಕೆ ದಂಗಾಗಿ ನೇರವಾಗಿ ನೆಲಕ್ಕೆ ಕುಸಿದು ಬಿದ್ದಿದ್ದಾರೆ.
ಈ ಅನಿರೀಕ್ಷಿತ ಸ್ಪೋಟದ ಸಂದರ್ಭದಲ್ಲಿ ಸಂಭವಿಸಿದ ಪ್ರಾಣಾಪಾಯದಿಂದ ಪಾದಚಾರಿಗಳು ಅದೃಷ್ಟವಶಾತ್ ಪಾರಾಗಿದ್ದಾರೆ. ಸ್ಪೋಟದ ಜ್ವಾಲೆ ಮತ್ತು ಶಾಖಕ್ಕೆ ಬಿದ್ದು ಗಾಯಗೊಂಡಿರುವ ವ್ಯಕ್ತಿಯ ಎರಡೂ ಕೈಗಳಿಗೆ ತೀವ್ರ ಸ್ವರೂಪದ ಸುಟ್ಟಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೋರ್ವ ಪಾದಚಾರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವೆಂಬಂತೆ, ಅದೇ ಮಾರ್ಗದಲ್ಲಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕೆಲವೇ ಸೆಕೆಂಡುಗಳ ವ್ಯತ್ಯಾಸದಲ್ಲಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿರುವುದು ನೆಮ್ಮದಿಯ ಸಂಗತಿಯಾಗಿದೆ.
ಈ ದುರ್ಘಟನೆಯ ಸಂಪೂರ್ಣ ಭೀಕರತೆಯು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ತಮ್ಮ ಮಕ್ಕಳನ್ನು ಶಾಲೆಗೆ ಬಿಡಲು ಅದೇ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಪೋಷಕರೊಬ್ಬರ ಕಾರಿನ ಡ್ಯಾಶ್ಬೋರ್ಡ್ ಕ್ಯಾಮರಾದಲ್ಲಿ (Dashcam) ಟ್ರಾನ್ಸ್ಫಾರ್ಮರ್ ಸ್ಪೋಟಗೊಂಡ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಸ್ಪೋಟಗೊಳ್ಳುತ್ತಿದ್ದಂತೆ ಪಾದಚಾರಿಗಳು ಜೀವ ಭಯದಿಂದ ರಸ್ತೆಗೆ ಜಿಗಿದು ಓಡಿಹೋಗುತ್ತಿರುವ ಹಾಗೂ ಗಾಯಾಳು ವ್ಯಕ್ತಿಯನ್ನು ಸ್ಥಳದಲ್ಲಿದ್ದ ಇತರರು ಧಾವಿಸಿ ಎತ್ತಿಕೊಳ್ಳುತ್ತಿರುವ ದೃಶ್ಯಗಳು ಎದೆ ನಡುಗಿಸುವಂತಿವೆ.
ಈ ಘಟನೆಯು ಕೆಲವು ವರ್ಷಗಳ ಹಿಂದೆ ಅಂದರೆ 2022ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ಮತ್ತೊಂದು ಭೀಕರ ಟ್ರಾನ್ಸ್ಫಾರ್ಮರ್ ಸ್ಪೋಟದ ದುರಂತವನ್ನು ಮರುಕಳಿಸುವಂತೆ ಮಾಡಿದೆ. ಅಂದು ನಡೆದ ಆ ದುರ್ಘಟನೆಯಲ್ಲಿ ತಂದೆ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ತನಿಖೆಯ ವೇಳೆ ಸ್ಪೋಟಕ್ಕೂ ಮುಂಚೆಯೇ ಬೆಸ್ಕಾಂಗೆ (BESCOM) ಸಾರ್ವಜನಿಕರಿಂದ ದೂರುಗಳು ಬಂದಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸಿರುವುದು ಬೆಳಕಿಗೆ ಬಂದಿತ್ತು. ಅಂದಿನ ಆ ದುರಂತದಿಂದಲೂ ಯಾವುದೇ ಪಾಠ ಕಲಿಯದ ಬೆಸ್ಕಾಂ ಅಧಿಕಾರಿಗಳು, ಇಂದಿಗೂ ಫುಟ್ಪಾತ್ಗಳ ಮೇಲೆ ಅಸುರಕ್ಷಿತವಾಗಿ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಿ ಜನರ ಪ್ರಾಣದ ಜತೆ ಆಟವಾಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ನಗರದ ಸ್ಮಾರ್ಟ್ ಸಿಟಿ ಕನಸಿನ ನಡುವೆ ಪಾದಚಾರಿಗಳಿಗೆ ಮೀಸಲಾದ ಕಾಲ್ನಡಿಗೆ ಮಾರ್ಗಗಳಲ್ಲಿ ಈ ರೀತಿಯ ಮಾರಕ ವಿದ್ಯುತ್ ಉಪಕರಣಗಳನ್ನು ನಿರ್ವಹಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಗಂಭೀರ ಪ್ರಶ್ನೆ ಈಗ ಎದ್ದಿದೆ. ಲಕ್ಷಾಂತರ ಉದ್ಯೋಗಿಗಳು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ನಿತ್ಯ ನಲಿದಾಡುವ ಜನನಿಬಿಡ ಪ್ರದೇಶದಲ್ಲೇ ಇಂತಹ ಬಾಂಬ್ ಸದೃಶ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಿರುವುದು ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತದೆ. ಸುರಕ್ಷತಾ ಮಾನದಂಡಗಳನ್ನು ಗಾಳಿಗೆ ತೂರಿರುವ ಇಲಾಖೆಯ ಈ ಬೇಜವಾಬ್ದಾರಿತನದಿಂದಾಗಿ ಮುಂಜುನೇ ವಾಕಿಂಗ್ ಬರುವವರು ಅಥವಾ ಆಫೀಸ್ಗೆ ಹೋಗುವವರು ಜೀವ ಕೈಯಲ್ಲಿ ಹಿಡಿದು ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ.
ಫುಟ್ಪಾತ್ಗಳಲ್ಲಿ ಇರಿಸಲಾದ ವಿದ್ಯುತ್ ಉಪಕರಣಗಳು ನೇರ ಸುರಕ್ಷತಾ ಅಪಾಯವನ್ನುಂಟುಮಾಡಿದರೆ ಅದಕ್ಕೆ ನೇರ ಹೊಣೆಗಾರರು ಯಾರು ಎಂಬ ಪ್ರಶ್ನೆಗೆ ಇಲಾಖೆಯಿಂದ ಇನ್ನೂ ಸ್ಪಷ್ಟ ಉತ್ತರವಿಲ್ಲ. ಬೆಸ್ಕಾಂನ ಇಂಜಿನಿಯರ್ಗಳು ಮತ್ತು ಮೇಲ್ವಿಚಾರಕರ ಈ ನಿರ್ಲಕ್ಷ್ಯ ಧೋರಣೆಗೆ ಅಮಾಯಕ ಸಾರ್ವಜನಿಕರು ಬಲಿಯಾಗುವ ಪರಿಸ್ಥಿತಿ ಬಂದೊದಗಿದೆ. ಇಲಾಖೆಯು ಇನ್ನು ಮುಂದೆಯಾದರೂ ಎಚ್ಚೆತ್ತುಕೊಂಡು, ನಗರದಾದ್ಯಂತ ಇರುವ ಎಲ್ಲಾ ಅಸುರಕ್ಷಿತ ಟ್ರಾನ್ಸ್ಫಾರ್ಮರ್ಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಅಥವಾ ಅದಕ್ಕೆ ಸೂಕ್ತ ರಕ್ಷಾ ಕವಚಗಳನ್ನು ಅಳವಡಿಸುವ ಮೂಲಕ ಇಂತಹ ಅನಾಹುತಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.

