ChatGPT Image Oct 3, 2026, 08_41_04 PM-modified
GREATER BENGALURU NEWS 9
BDA President

Greater Bengaluru News9 : ಸಾಮಾನ್ಯವಾಗಿ ಅಧಿಕಾರಿಗಳು ಹಾಗೂ ಗಣ್ಯರು ಕುಳಿತುಕೊಳ್ಳುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರ ಕುರ್ಚಿಯಲ್ಲಿ ಬುಧವಾರ ವಿಭಿನ್ನ ವ್ಯಕ್ತಿಯೊಬ್ಬರು ಕುಳಿತು ಎಲ್ಲರ ಗಮನ ಸೆಳೆದರು. ದೃಷ್ಟಿಹೀನ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ‘ಜ್ಯೋತಿ ಸೇವಾ ಸ್ಕೂಲ್ ಫಾರ್ ದಿ ಬ್ಲೈಂಡ್’ನ ವಿದ್ಯಾರ್ಥಿ ರಾಹುಲ್‌ಗೆ ಸಾಂಕೇತಿಕವಾಗಿ ಒಂದು ದಿನದ ಮಟ್ಟಿಗೆ ಬಿಡಿಎ ಅಧ್ಯಕ್ಷನ ಸ್ಥಾನವನ್ನು ನೀಡಲಾಯಿತು. ಬಾಲಕ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತ ಕ್ಷಣ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಈ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದರು.

ದೃಷ್ಟಿಹೀನ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಯೊಂದಿಗೆ ಇನ್ನಷ್ಟು ಹತ್ತಿರವಾಗಿಸುವ ಉದ್ದೇಶದಿಂದ ಶಾಲೆಯ ಮಕ್ಕಳನ್ನು ಬಿಡಿಎ ಕಚೇರಿಗೆ ಆಹ್ವಾನಿಸಲಾಗಿತ್ತು. ಕಚೇರಿಗೆ ಆಗಮಿಸಿದ ವಿದ್ಯಾರ್ಥಿಗಳೊಂದಿಗೆ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಆತ್ಮೀಯವಾಗಿ ಮಾತನಾಡಿ, ಅವರ ಆಸಕ್ತಿ, ಕನಸುಗಳು ಹಾಗೂ ಭವಿಷ್ಯದ ಗುರಿಗಳ ಕುರಿತು ವಿಚಾರಿಸಿದರು. ಮಕ್ಕಳೊಂದಿಗೆ ಕೆಲಕಾಲ ಬೆರೆತು ಅವರ ಉತ್ಸಾಹವನ್ನು ಗಮನಿಸಿದ ಬಳಿಕ ರಾಹುಲ್‌ಗೆ ತಮ್ಮ ಅಧಿಕೃತ ಆಸನದಲ್ಲಿ ಕುಳಿತುಕೊಳ್ಳುವ ಅವಕಾಶ ಕಲ್ಪಿಸಿದರು. ಅಧಿಕಾರದ ಕುರ್ಚಿಯಲ್ಲಿದ್ದ ಬಾಲಕನ ಮುಖದಲ್ಲಿನ ಸಂತಸ ಹಾಗೂ ಆತ್ಮವಿಶ್ವಾಸದ ಕ್ಷಣವೇ ಇಡೀ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.

ಈ ಸಂದರ್ಭದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಎನ್.ಎ. ಹ್ಯಾರಿಸ್, ದೃಷ್ಟಿ ಇಲ್ಲ ಎಂಬ ಕಾರಣಕ್ಕೆ ಯಾವುದೇ ಮಗು ತನ್ನ ಸಾಮರ್ಥ್ಯವನ್ನು ಕಡಿಮೆ ಎಂದು ಭಾವಿಸಬಾರದು ಎಂದು ತಿಳಿಸಿದರು. ಶಿಕ್ಷಣ, ಪರಿಶ್ರಮ ಮತ್ತು ಆತ್ಮವಿಶ್ವಾಸದ ಮೂಲಕ ಸಮಾಜದ ಯಾವುದೇ ಉನ್ನತ ಸ್ಥಾನವನ್ನು ತಲುಪಲು ಸಾಧ್ಯವಿದೆ ಎಂಬ ಸಂದೇಶವನ್ನು ಅವರು ನೀಡಿದರು. ಸರ್ಕಾರದ ಜೊತೆಗೆ ಸಮಾಜವೂ ಇಂತಹ ಮಕ್ಕಳ ಬೆನ್ನಿಗೆ ನಿಲ್ಲಬೇಕು. ಇತರ ಮಕ್ಕಳಿಗೆ ಸಿಗುವಂತೆಯೇ ಸಮಾನ ಅವಕಾಶಗಳು ಮತ್ತು ಪ್ರೋತ್ಸಾಹ ದೊರೆತರೆ ದೃಷ್ಟಿಹೀನ ವಿದ್ಯಾರ್ಥಿಗಳು ಕೂಡ ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ದೊಡ್ಡ ಮಟ್ಟದಲ್ಲಿ ತೋರಿಸಬಲ್ಲರು ಎಂದು ಹ್ಯಾರಿಸ್ ಮಕ್ಕಳಲ್ಲಿ ಧೈರ್ಯ ತುಂಬಿದರು.

ಬಿಡಿಎ ಆಯುಕ್ತ ಮೇಜರ್ ಪಿ. ಮಣಿವಣ್ಣನ್ ಮಾತನಾಡಿ, ಮಕ್ಕಳನ್ನು ಕಚೇರಿಗೆ ಕರೆತರುವ ಉದ್ದೇಶ ಕೇವಲ ಅವರಿಗೆ ಒಂದು ದಿನದ ಅನುಭವ ನೀಡುವುದಲ್ಲ, ಅವರಲ್ಲಿ ದೊಡ್ಡ ಕನಸು ಕಾಣುವ ಮನೋಭಾವ ಬೆಳೆಸುವುದಾಗಿದೆ ಎಂದು ಹೇಳಿದರು. ಭವಿಷ್ಯದಲ್ಲಿ ಈ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಬೆಳವಣಿಗೆಗೆ ಅಗತ್ಯವಿರುವ ಸಹಕಾರ ನೀಡುವ ನಿಟ್ಟಿನಲ್ಲಿ ಬಿಡಿಎ ಮುಂದೆಯೂ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ರಾಹುಲ್ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತ ಈ ಸಾಂಕೇತಿಕ ಘಟನೆ, ಅವಕಾಶ ಸಿಕ್ಕಾಗ ಸಾಮರ್ಥ್ಯಕ್ಕೆ ಯಾವುದೇ ಮಿತಿ ಇರುವುದಿಲ್ಲ ಎಂಬ ಸಂದೇಶವನ್ನು ಸಾರಿದ್ದು, ದೃಷ್ಟಿಹೀನ ಮಕ್ಕಳಿಗೂ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಸಮಾನ ಅವಕಾಶ ಕಲ್ಪಿಸಬೇಕೆಂಬ ಆಶಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

Leave a Reply

Your email address will not be published. Required fields are marked *