Greater Bengaluru News9 : ಬೆಂಗಳೂರು ಮಹಾನಗರದಲ್ಲಿ ಆಸ್ತಿ ನೋಂದಣಿ ಹಾಗೂ ಖಾತಾ ಬದಲಾವಣೆಗಾಗಿ ಕಚೇರಿಗಳಿಗೆ ಅಲೆಯುತ್ತಿರುವ ಸಾರ್ವಜನಿಕರಿಗೆ ‘ಕಾವೇರಿ 2.0’ ತಂತ್ರಾಂಶವು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವ್ಯಾಪ್ತಿಯಲ್ಲಿ ಇಲಾಖೆಯ ಸರ್ವರ್ನಲ್ಲಿ ಎದುರಾಗಿರುವ ತಾಂತ್ರಿಕ ದೋಷದಿಂದಾಗಿ ನಾಗರಿಕರು ತಮ್ಮ ದಿನನಿತ್ಯದ ಕೆಲಸಗಳಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಫ್ಟ್ವೇರ್ನಲ್ಲಿ ಉದ್ಭವಿಸಿರುವ ತಾಂತ್ರಿಕ ಅಡೆತಡೆಗಳಿಂದಾಗಿ ಕಳೆದ ಕೆಲ ದಿನಗಳಿಂದ ಪ್ರಮುಖ ಸೇವೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿವೆ. ಹೊಸದಾಗಿ ಆಸ್ತಿ ಖರೀದಿಸಿದವರು ಖಾತೆ ಮಾಡಿಸಲು ಹರಸಾಹಸಪಡುತ್ತಿದ್ದರೆ, ಆಸ್ತಿ ವಿಭಜನೆ ಹಾಗೂ ಈಗಾಗಲೇ ಅರ್ಜಿ ಸಲ್ಲಿಸಿ ಕಾಯುತ್ತಿರುವ ಸಾವಿರಾರು ಕಡತಗಳ ಅನುಮೋದನೆ ಪ್ರಕ್ರಿಯೆಯು ತಂತ್ರಾಂಶದ ಕೈಚಳಕದಿಂದಾಗಿ ಸಂಪೂರ್ಣವಾಗಿ ನೆನೆಗುದಿಗೆ ಬಿದ್ದಿದೆ.
ಕಂದಾಯ ಕಚೇರಿಗಳಿಗೆ ಎಡಬಿಡದೆ ಅಲೆದಾಡುತ್ತಿದ್ದರೂ “ಸರ್ವರ್ ಡೌನ್ ಇದೆ, ಸಾಫ್ಟ್ವೇರ್ ಕೆಲಸ ಮಾಡುತ್ತಿಲ್ಲ” ಎಂಬ ಒಂದೇ ಉತ್ತರ ಅಧಿಕಾರಿಗಳಿಂದ ಸಿಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅನಗತ್ಯ ವಿಳಂಬದಿಂದಾಗಿ ಸಾರ್ವಜನಿಕರ ಅಮೂಲ್ಯ ಸಮಯ ಹಾಗೂ ಹಣ ಎರಡೂ ವ್ಯರ್ಥವಾಗುತ್ತಿದ್ದು, ನಾಗರಿಕರು ನಿರಾಶೆಯಿಂದ ಹಿಂತಿರುಗುವಂತಾಗಿದೆ.
ಈ ತಕ್ಷಣದ ಸಮಸ್ಯೆಯಿಂದ ಸಾರ್ವಜನಿಕರನ್ನು ಪಾರು ಮಾಡಲು ಕಂದಾಯ ಇಲಾಖೆ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತುರ್ತಾಗಿ ಎಚ್ಚೆತ್ತುಕೊಳ್ಳಬೇಕಿದೆ. ‘ಕಾವೇರಿ 2.0’ ತಂತ್ರಾಂಶದ ತಾಂತ್ರಿಕ ದೋಷವನ್ನು ಶೀಘ್ರವಾಗಿ ಸರಿಪಡಿಸಿ, ಹೊಸ ಖಾತೆ ನೋಂದಣಿ ಹಾಗೂ ಅನುಮೋದನೆ ಪ್ರಕ್ರಿಯೆಗಳನ್ನು ಸರಳಗೊಳಿಸುವ ಮೂಲಕ ಜನರ ಅಲೆದಾಟಕ್ಕೆ ತೆರೆಎಳೆಯಬೇಕು ಎಂಬುದು ಸಾರ್ವಜನಿಕರ ಬಲವಾದ ಒತ್ತಾಯವಾಗಿದೆ.

