Greater Bengaluru News9 : ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಸಮೀಪದ ಹುಣಸಮಾರನಹಳ್ಳಿಯಲ್ಲಿ ರೋಚಕ ಬೆಳವಣಿಗೆಯೊಂದು ನಡೆದಿದೆ. ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದ ಮೇರೆಗೆ ಮದ್ದಾವಣಪುರ ದೇವವೀರ ಸಂಸ್ಥಾನ ಮಠದ ದಯಾನಂದ ಸ್ವಾಮೀಜಿಯನ್ನು ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ. ಧರ್ಮದ ಹೆಸರಿನಲ್ಲಿ ಮೆರೆಯಬೇಕಿದ್ದ ಪೀಠಾಧಿಪತಿಯೊಬ್ಬರ ವಿರುದ್ಧ ಇಂತಹ ಅಕ್ಕಪಕ್ಕದ ಪ್ರದೇಶಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬಂಧಿತ ಆರೋಪಿಯನ್ನು ಶ್ರೀಗುರು ನಂಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಲಿಯಾಸ್ ದಯಾನಂದ ಸ್ವಾಮೀಜಿ (45) ಎಂದು ಗುರುತಿಸಲಾಗಿದೆ. ಇವರು ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಹೋಬಳಿಯ ಹುಣಸಮಾರನಹಳ್ಳಿಯಲ್ಲಿರುವ ಮದ್ದಾವಣಪುರ ದೇವವೀರ ಸಂಸ್ಥಾನ ಮಠಕ್ಕೆ ಸಂಬಂಧಪಟ್ಟವರಾಗಿದ್ದು, ಸ್ಥಳೀಯವಾಗಿ ಮಠದ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದರು.
ಸಂತ್ರಸ್ತ ಮಹಿಳೆಯು ನೀಡಿದ ನಿರ್ಣಾಯಕ ದೂರಿನ ಆಧಾರದ ಮೇರೆಗೆ ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ. ಸ್ವಾಮೀಜಿಯು ನಂಬಿಕೆದ್ರೋಹ ಎಸಗಿ ಮದುವೆಯಾಗುವ ಆಮಿಷವೊಡ್ಡಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ತಕ್ಷಣವೇ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದರು.
ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ಇಂದು ಬೆಳ್ಳಂಬೆಳಗ್ಗೆ ದಯಾನಂದ ಸ್ವಾಮೀಜಿಯನ್ನು ತಮ್ಮ ವಶಕ್ಕೆ ಪಡೆದು ಅಧಿಕೃತವಾಗಿ ಬಂಧಿಸಿದ್ದಾರೆ. ಹುಣಸಮಾರನಹಳ್ಳಿಯ ರಾಜರಾಜೇಶ್ವರಿ ನಗರದ 3ನೇ ಕ್ರಾಸ್‌ನಲ್ಲಿರುವ ಮದ್ದಾವಣಪುರ ದೇವವೀರ ಸಂಸ್ಥಾನ ಮಠದಲ್ಲೇ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಸ್ವಾಮೀಜಿಯ ಈ ಅಕ್ರಮ ಚಟುವಟಿಕೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸದ್ಯ ಪೊಲೀಸರ ವಶದಲ್ಲಿರುವ ಸ್ವಾಮೀಜಿಯನ್ನು ತನಿಖೆಗೆ ಒಳಪಡಿಸಲಾಗಿದೆ. ಮಹಿಳೆ ನೀಡಿರುವ ದೂರಿನಲ್ಲಿರುವ ಅಂಶಗಳು ಮತ್ತು ಆರೋಪಗಳ ಸಂಪೂರ್ಣ ಸತ್ಯಾಸತ್ಯತೆಗಳು ತನಿಖೆಯ ಬಳಿಕವಷ್ಟೇ ಹೊರಬರಬೇಕಿದೆ. ಕಾನೂನು ಕ್ರಮ ಕೈಗೊಂಡಿರುವ ಪೊಲೀಸರು ಮುಂದಿನ ಕಾನೂನು ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ.

