ChatGPT Image Oct 3, 2026, 08_41_04 PM-modified
GREATER BENGALURU NEWS 9
Chikkanna

Greater Bengaluru News9 : ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯ ವಿಚಾರಣೆ ವೇಳೆ ನಟ ಚಿಕ್ಕಣ್ಣ ತೀವ್ರ ಆತಂಕಕ್ಕೆ ಒಳಗಾದ ಘಟನೆ ನಡೆದಿದೆ. ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳನ್ನು ಗುರುತಿಸಿದ ಚಿಕ್ಕಣ್ಣ, ತನಗೆ ಟೆನ್ಷನ್ ಆಗುತ್ತಿದ್ದು, ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹೀಗಾಗಿ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯ ಚಿಕ್ಕಣ್ಣ ಅವರ ಸಾಕ್ಷ್ಯ ವಿಚಾರಣೆಯನ್ನು ಮುಂದೂಡಿದೆ.

ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡುವ ವೇಳೆ ಚಿಕ್ಕಣ್ಣ ಅವರಿಗೆ ಮೊದಲು ತಮ್ಮ ಮೊಬೈಲ್ ಸಂಖ್ಯೆ ತಿಳಿಸುವಂತೆ ಕೇಳಲಾಗಿದೆ. ಬಳಿಕ ನಟ ದರ್ಶನ್ ಪರಿಚಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದರ್ಶನ್ ಕಳೆದ 10ರಿಂದ 15 ವರ್ಷಗಳಿಂದ ಪರಿಚಯವಿದ್ದು, ಅವರೊಂದಿಗೆ ಮೂರು ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂದು ತಿಳಿಸಿದ್ದಾರೆ.

ನ್ಯಾಯಾಲಯದಲ್ಲಿ ಹಾಜರಿದ್ದ ದರ್ಶನ್ ಅವರನ್ನು ಕಪ್ಪು ಶರ್ಟ್ ಧರಿಸಿದ್ದಾರೆ ಎಂದು ಗುರುತಿಸಿದ ಚಿಕ್ಕಣ್ಣ, ಪವಿತ್ರಾ ಗೌಡ ಕೂಡ ಕಳೆದ ಎರಡು ಮೂರು ವರ್ಷಗಳಿಂದ ಪರಿಚಯವಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, 14ನೇ ಆರೋಪಿ ಪ್ರದೂಷ್ ಕಳೆದ ಮೂರು ನಾಲ್ಕು ವರ್ಷಗಳಿಂದ ಪರಿಚಯವಿರುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಸ್ಟೋನಿ ಬ್ರೂಕ್ ಹೋಟೆಲ್‌ಗೆ ತೆರಳಿದ್ದ ವಿಚಾರವಾಗಿ ನ್ಯಾಯಾಲಯ ಪ್ರಶ್ನಿಸಿದಾಗ, ತಾವು ಊಟಕ್ಕೆ ಹೋಗಿದ್ದು ನಿಜ. ಆದರೆ ಯಾವ ದಿನ ಹೋಗಿದ್ದೆ ಎಂಬುದು ನೆನಪಿಲ್ಲ ಎಂದು ಚಿಕ್ಕಣ್ಣ ಉತ್ತರಿಸಿದ್ದಾರೆ. ಮಧ್ಯಾಹ್ನ ಸುಮಾರು 1:30ರಿಂದ 3 ಗಂಟೆಯೊಳಗೆ ಹೋಟೆಲ್‌ಗೆ ತೆರಳಿದ್ದೆ. ಆದರೆ ನಿಖರ ಸಮಯ ನೆನಪಿಲ್ಲ ಎಂದು ತಿಳಿಸಿದ್ದಾರೆ.

ಹೋಟೆಲ್‌ಗೆ ಒಬ್ಬರೇ ಹೋಗಿದ್ದಾಗಿ ಹೇಳಿದ ಚಿಕ್ಕಣ್ಣ, ಅಲ್ಲಿ ದರ್ಶನ್, ಪ್ರದೂಷ್ ಸೇರಿದಂತೆ ಇನ್ನೂ ಮೂವರು ಅಥವಾ ನಾಲ್ವರು ಇದ್ದರು. ಆದರೆ ಟೆನ್ಷನ್‌ನಿಂದಾಗಿ ಉಳಿದವರ ಹೆಸರುಗಳು ನೆನಪಿಗೆ ಬರುತ್ತಿಲ್ಲ ಎಂದು ಹೇಳಿದ್ದಾರೆ. ಹೋಟೆಲ್‌ನಲ್ಲಿ ಸಿನಿಮಾ ವಿಚಾರವಾಗಿ ಮಾತನಾಡಿದ್ದೆವು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಘಟನೆ ನಡೆದಿಲ್ಲ ಎಂದು ಸಾಕ್ಷ್ಯ ನೀಡಿದ್ದಾರೆ.

ನ್ಯಾಯಾಲಯದಲ್ಲಿ ಹಾಜರಿದ್ದ ಆರೋಪಿಗಳ ಪೈಕಿ ವಿನಯ್ ಹಾಗೂ ಪವನ್ ಪರಿಚಯವಿರುವುದಾಗಿ ಚಿಕ್ಕಣ್ಣ ತಿಳಿಸಿದ್ದಾರೆ. ಅಲ್ಲದೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಲಕ್ಷ್ಮಣ್, ನಾಗು ಅಲಿಯಾಸ್ ನಾಗರಾಜ್ ಸೇರಿದಂತೆ ದರ್ಶನ್, ಪವಿತ್ರಾ ಗೌಡ ಹಾಗೂ ಪ್ರದೂಷ್ ಅವರನ್ನು ಗುರುತಿಸಿದ್ದಾರೆ.

ಸಾಕ್ಷ್ಯ ವಿಚಾರಣೆ ಮುಂದುವರಿದ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಬಂದಿರುವ ಕಾರಣದ ಬಗ್ಗೆ ಪ್ರಶ್ನಿಸಿದಾಗ ಚಿಕ್ಕಣ್ಣ ಮತ್ತೆ ಟೆನ್ಷನ್ ಆಗುತ್ತಿದೆ ಎಂದು ಹೇಳಿದ್ದಾರೆ. ಅಗತ್ಯವಿದ್ದರೆ ನ್ಯಾಯಾಲಯದಲ್ಲಿರುವ ಜನರ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಆದರೂ ಚಿಕ್ಕಣ್ಣ ಆತಂಕ ವ್ಯಕ್ತಪಡಿಸಿದ್ದರಿಂದ ನ್ಯಾಯಾಲಯ 15 ನಿಮಿಷಗಳ ಕಾಲ ವಿಶ್ರಾಂತಿ ನೀಡಿದೆ. ಆದರೆ ವಿಶ್ರಾಂತಿಯ ಬಳಿಕವೂ ಟೆನ್ಷನ್ ಕಡಿಮೆಯಾಗಿಲ್ಲ, ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಚಿಕ್ಕಣ್ಣ ತಿಳಿಸಿದ ಹಿನ್ನೆಲೆಯಲ್ಲಿ 59ನೇ ಸಿಸಿಎಚ್ ನ್ಯಾಯಾಲಯ ಅವರ ಮುಂದಿನ ಸಾಕ್ಷ್ಯ ವಿಚಾರಣೆಯನ್ನು ಮುಂದೂಡಿದೆ.

Leave a Reply

Your email address will not be published. Required fields are marked *