ChatGPT Image Oct 3, 2026, 08_41_04 PM-modified
GREATER BENGALURU NEWS 9
Farmer

Greater Bengaluru News9: ಮಳೆಯ ಕೊರತೆ ಹಾಗೂ ತೀವ್ರ ಬರಗಾಲದಿಂದ ನಲಗುತ್ತಿರುವ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ರೈತರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ, ಭಾರತೀಯ ಕಿಸಾನ್ ಸಂಘದ ವತಿಯಿಂದ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ಮಹತ್ವದ ಮನವಿ ಸಲ್ಲಿಸಲಾಗಿದೆ. ತಾಲ್ಲೂಕಿನ ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಆಗ್ರಹಿಸಿ ತಹಶೀಲ್ದಾರರ ಮುಖಾಂತರ ಈ ಮನವಿ ಪತ್ರವನ್ನು ನೀಡಲಾಗಿದೆ.

ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯಿಂದಾಗಿ ರಾಮದುರ್ಗ ತಾಲ್ಲೂಕಿನ ಕೃಷಿಕರು ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಹಾಗೂ ಮುಗ್ಗಟ್ಟಿಗೆ ಒಳಗಾಗಿದ್ದಾರೆ. ತಾಲ್ಲೂಕಿನ ರೈತರ ಹೋರಾಟದ ಫಲವಾಗಿ ರಾಮದುರ್ಗ ತಾಲ್ಲೂಕನ್ನು ಬರಗಾಲ ಪ್ರದೇಶವೆಂದು ಕೊನೆಯ ಕ್ಷಣದಲ್ಲಿ ಸರ್ಕಾರ ಘೋಷಿಸಿದೆಯಾದರೂ, ಇದುವರೆಗೂ ರೈತರಿಗೆ ಸರ್ಕಾರದಿಂದ ಯಾವುದೇ ರೀತಿಯ ಆರ್ಥಿಕ ನೆರವು ದೊರೆತಿಲ್ಲದಿರುವುದು ಅತ್ಯಂತ ವಿಪಾದನೀಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ, ಬರಗಾಲದ ಪರಿಹಾರ ಧನವನ್ನು ತುರ್ತಾಗಿ ಪ್ರತಿ ಎಕರೆಗೆ ರೂ. 50,000/- ರಂತೆ ರೈತರಿಗೆ ತಲುಪಿಸಬೇಕು ಎಂದು ಭಾರತೀಯ ಕಿಸಾನ್ ಸಂಘವು ಬಲವಾಗಿ ಆಗ್ರಹಿಸಿದೆ.

ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆಗಳ ಕಾರ್ಯವೈಖರಿ ಹಾಗೂ ಬೆಲೆ ನಿಗದಿಯ ಕುರಿತು ಕಿಸಾನ್ ಸಂಘವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ಕಬ್ಬಿಗೆ ಪ್ರತಿ ಟನ್ನಿಗೆ ರೂ. 5,000/- ರಂತೆ ಬೆಲೆಯನ್ನು ಘೋಷಿಸುವವರೆಗೆ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವುದನ್ನು ಪ್ರಾರಂಭಿಸದಂತೆ ಮರು ಆದೇಶ ಹೊರಡಿಸಬೇಕೆಂದು ಒತ್ತಾಯಿಸಲಾಗಿದೆ. ಅಲ್ಲದೆ, ಮಹಾರಾಷ್ಟ್ರ, ಗುಜರಾತ್ ಮುಂತಾದ ಇತರ ರಾಜ್ಯಗಳು ಕಬ್ಬಿಗೆ ಎಸ್‌.ಎ.ಪಿ. (SAP) ಘೋಷಿಸಿದರೆ, ಕರ್ನಾಟಕ ಸರ್ಕಾರವೂ ಕೂಡ ಪ್ರತಿ ಟನ್ನಿಗೆ ರೂ. 800/- ರಂತೆ ಎಸ್‌.ಎ.ಪಿ.ಯನ್ನು ಘೋಷಿಸಬೇಕು ಎಂದು ಆಗ್ರಹಿಸಲಾಗಿದೆ. ಇದರೊಂದಿಗೆ, ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ತೂಕ ಮಾಡುವಾಗ ನಡೆಯುವ ಮೋಸವನ್ನು ಸಂಪೂರ್ಣವಾಗಿ ತಡೆಯಲು, ರೈತರಿಗೆ ತೂಕದ ಖಾತ್ರಿ ಪಡಿಸಲು ಕಾರ್ಖಾನೆಗಳ ಮುಂದೆ ಡಿಜಿಟಲ್ ತೂಕದ ಸೇತುವೆಗಳನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ತಾಲ್ಲೂಕಿನ ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಮಹತ್ವದ ಯೋಜನೆಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ಸಂಘವು ಆಗ್ರಹಿಸಿದೆ. ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಮಹಾದಾಯಿ ಯೋಜನೆಯ ಸಮಸ್ಯೆಯನ್ನು ಬಗೆಹರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಹಾಗೂ ತಾಲ್ಲೂಕಿನ ಅಮೋರ್ಣಾವಾದ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಕಾಲುವೆಗಳನ್ನು ನೀರು ಸರಾಗವಾಗಿ ಹರಿಯುವಂತೆ ಸ್ವಚ್ಛಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ. ಅಷ್ಟೇ ಅಲ್ಲದೆ, ನಗರ ವ್ಯಾಪ್ತಿಯಲ್ಲಿ ಬರಕ್ಕೆ ತುತ್ತಾಗಿರುವ ರೈತರನ್ನು ವಿ.ಬಿ.ಜಿ. ರಾಮಜಿ ಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ವೀರಭದ್ರೇಶ್ವರ ಹಾಗೂ ಬಸವೇಶ್ವರ ಏತ ನೀರಾವರಿ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಕೋರಲಾಗಿದೆ. ಇದರೊಂದಿಗೆ, ಕಿತ್ತೂರ ಗ್ರಾಮದ ಜವುಳ ಹಳ್ಳ ಜಾಕವೆಲ್ಲ ಏತ ನೀರಾವರಿ ಕಾಮಗಾರಿಗೆ ಮರು ಟೆಂಡರ್ ಕರೆದು ಶೀಘ್ರವೇ ಕಾಮಗಾರಿ ಆರಂಭಿಸಬೇಕು ಎಂದು ತಿಳಿಸಲಾಗಿದೆ.

ತಾಲ್ಲೂಕಿನಲ್ಲಿ ಬರಗಾಲವು ತೀವ್ರ ಸ್ವರೂಪ ಪಡೆಯುತ್ತಿರುವುದರಿಂದ ಕುಡಿಯುವ ನೀರು ಮತ್ತು ಜಾನುವಾರುಗಳ ಸಂರಕ್ಷಣೆಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ತಾಲ್ಲೂಕಿನ ಎಲ್ಲ ಗ್ರಾಮಗಳ ಕೆರೆಗಳನ್ನು ಕೂಡಲೇ ತುಂಬಿಸಬೇಕು ಮತ್ತು ಮಲಪ್ರಭಾ ನದಿಯ ತೀರದಲ್ಲಿರುವ ಎಲ್ಲ ಗ್ರಾಮಸ್ಥರಿಗೆ ಹಾಗೂ ದನಕರುಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಪ್ರತಿ 2 ತಿಂಗಳಿಗೊಮ್ಮೆ ನೀರು ಹರಿಸಬೇಕು ಎಂದು ಆಗ್ರಹಿಸಲಾಗಿದೆ. ಜಾನುವಾರುಗಳಿಗೆ ಬೇಕಾದ ಮೇವನ್ನು ಸಂಗ್ರಹಿಸಿ ಅವುಗಳ ರಕ್ಷಣೆಗಾಗಿ ವಿಶೇಷ ಸಂರಕ್ಷಣಾ ಕೇಂದ್ರಗಳನ್ನು ಸ್ಥಾಪಿಸಬೇಕು. ಜೊತೆಗೆ, ಗ್ರಾಮೀಣ ಪ್ರದೇಶದ ರಸ್ತೆಗಳು ಹಾಗೂ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ತಾಲ್ಲೂಕಿನ ಗೋಮಾಳ ಜಮೀನುಗಳ ರಕ್ಷಣೆಗೆ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಅತ್ಯಾವಶ್ಯಕವಾಗಿದೆ.

ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ರೈತರಿಗೆ ಹಗಲಿನ ವೇಳೆಯಲ್ಲಿಯೇ 3 ಫೇಸ್ ವಿದ್ಯುತ್ ಅನ್ನು ಕನಿಷ್ಠ 8 ಗಂಟೆಗಳ ಕಾಲ ಸತತವಾಗಿ ಪೂರೈಸಬೇಕು ಎಂದು ಕಿಸಾನ್ ಸಂಘವು ಒತ್ತಾಯಿಸಿದೆ. ಇದರೊಂದಿಗೆ, ಶಿವಪೇರೆ ಗ್ರಾಮದಲ್ಲಿ 6 ಎಕರೆ ತೋಟಗಾರಿಕೆ ಜಮೀನಿನಲ್ಲಿ ಹಾಗೂ ರಾಮದುರ್ಗದಲ್ಲಿ 2 ಎಕರೆ 20 ಗುಂಟೆ ಜಮೀನಿನಲ್ಲಿ ಹಿಂದೆ ನೀಡುತ್ತಿದ್ದ ಎಲ್ಲಾ ರೀತಿಯ ತೋಟಗಾರಿಕೆ ಸಸ್ಯಗಳ ವಿತರಣೆಯನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಲ್ಲಿಸಲಾಗಿದ್ದು, ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ. ಸದರಿ ಎರಡು ಜಮೀನುಗಳಲ್ಲಿ ತೋಟಗಾರಿಕೆ ಸಸ್ಯಗಳ ವಿತರಣೆಯನ್ನು ಶೀಘ್ರವಾಗಿ ಮರುಪ್ರಾರಂಭಿಸಬೇಕು ಎಂದು ಕೋರಲಾಗಿದೆ. ಈ ಎಲ್ಲ ಜ್ವಲಂತ ಸಮಸ್ಯೆಗಳನ್ನು ತಾಲ್ಲೂಕಿನ ರೈತರ ಹಿತದೃಷ್ಟಿಯಲ್ಲಿ ಅತಿ ಶೀಘ್ರದಲ್ಲಿ ಪರಿಹರಿಸಿಕೊಡುವಂತೆ ಭಾರತೀಯ ಕಿಸಾನ್ ಸಂಘವು ರಾಜ್ಯ ಸರ್ಕಾರವನ್ನು ಬಲವಾಗಿ ಆಗ್ರಹಿಸಿದೆ.

Leave a Reply

Your email address will not be published. Required fields are marked *