Greater Bengaluru News9 : ಉದ್ಯಾನವನ ಹಾಗೂ ಖಾಲಿ ಜಾಗ, ನಾಗರಿಕ ಸೌಲಭ್ಯಗಳಿಗಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ನಿವೇಶನಗಳನ್ನ ಸೃಷ್ಟಿಸಿ, ಖಾಸಗಿ ವ್ಯಕ್ತಿಗಳ ಹೆಸರಿಗೆ ಇ-ಸ್ವತ್ತು ಖಾತೆಗಳನ್ನು ವಿತರಿಸಿದ ಆರೋಪದ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಎ. ಭಾಗ್ಯಲಕ್ಷ್ಮಿ ಅವರನ್ನು ಅಮಾನತುಗೊಳಿಸಲಾಗಿದೆ.
ಬಾಗೇಪಲ್ಲಿ ವಕೀಲ ಎನ್. ನಾಗಭೂಷಣ್ ಅವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಅನುಮೋದಿತ ನಕ್ಷೆಯಲ್ಲಿ ಕೇವಲ 17 ನಿವೇಶನಗಳಿಗೆ ಅವಕಾಶವಿದ್ದರೂ, ಪಾರ್ಕ್ಗೆ (Park) ಮೀಸಲಿಟ್ಟ ಜಾಗದಲ್ಲಿ ಹೆಚ್ಚುವರಿಯಾಗಿ 6 ನಿವೇಶನಗಳನ್ನ ಸೃಷ್ಟಿಸಿ ಇ-ಸ್ವತ್ತು ವಿತರಿಸಿರುವುದು ಪತ್ತೆಯಾಗಿದೆ.
ಅಲ್ಲದೇ, ಅಗತ್ಯ ದಾಖಲೆಗಳನ್ನ ಪರಿಶೀಲಿಸದೇ ಸುಮಾರು 14 ಇ-ಸ್ವತ್ತುಗಳಿಗೆ ಮ್ಯುಟೇಷನ್ ಮಾಡಿರುವುದು ಹಾಗೂ ಭೂ ಪರಿವರ್ತನೆ ಆದೇಶ, ಅನುಮೋದಿತ ಲೇಔಟ್ ನಕ್ಷೆ ಇಲ್ಲದೆ ಇ-ಸ್ವತ್ತು ವಿತರಿಸಿರುವ ಲೋಪಗಳೂ ತನಿಖೆಯಲ್ಲಿ ಬೆಳಕಿಗೆ ಬಂದಿವೆ.
ಈ ಕುರಿತು ಕಾರಣ ಕೇಳಿ ನೋಟಿಸ್ ನೀಡಲಾಗಿದ್ದರೂ, ಪಿಡಿಒ ಸಲ್ಲಿಸಿದ ಸಮಜಾಯಿಷಿ ಸಮಂಜಸವಾಗಿಲ್ಲ ಎಂದು ಪರಿಗಣಿಸಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ ನವೀನ್ ಭಟ್ ಅವರು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಿದ್ದಾರೆ.
ಅಮಾನತು ಅವಧಿಯಲ್ಲಿ ಭಾಗ್ಯಲಕ್ಷ್ಮಿ ಅವರ ಲೀನ್ ಅನ್ನು ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು ಗ್ರಾಮ ಪಂಚಾಯಿತಿಗೆ ವರ್ಗಾಯಿಸಲಾಗಿದೆ.

