Greater Bengaluru News9 : 400 ಕೆವಿ ಹೈಟೆನ್ಷನ್ ವಿದ್ಯುತ್ ಮಾರ್ಗದಲ್ಲಿ ಸಿಲುಕಿಕೊಂಡು ಅಪಾಯದಲ್ಲಿದ್ದ ಕಪ್ಪು ಗಿಡುಗವೊಂದನ್ನು ಕೆಪಿಟಿಸಿಎಲ್‌ನ ವಿಶೇಷ ಲೈವ್‌ಲೈನ್ ನಿರ್ವಹಣಾ ವಾಹನದ ನೆರವಿನಿಂದ ಸುರಕ್ಷಿತವಾಗಿ ಬಚಾವ್ ಮಾಡುವಲ್ಲಿ ಬೆಸ್ಕಾಂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ವಿದ್ಯುತ್ ಪೂರೈಕೆಗೆ ಅಡ್ಡಿಯಾಗದಂತೆ ನಿರ್ವಹಣಾ ಕಾರ್ಯ ನಡೆಸಲು ಬಳಸುವ ಈ ವಾಹನ, ಪಕ್ಷಿಯ ರಕ್ಷಣಾ ಕಾರ್ಯಾಚರಣೆಗೆ ಸಹಕಾರಿಯಾಗಿದೆ. ಬನ್ನೇರುಘಟ್ಟ ಸಮೀಪದ ಕೃಷಿ ಭೂಮಿಯ ಬಳಿ 90 ಅಡಿಗೂ ಹೆಚ್ಚು ಎತ್ತರದಲ್ಲಿರುವ ವಿದ್ಯುತ್ ಲೈನ್‌ನಲ್ಲಿ ಕಪ್ಪು ಗಿಡುಗ ಸೋಮವಾರ ಮಧ್ಯಾಹ್ನದಿಂದ ಸಿಲುಕಿಕೊಂಡಿತ್ತು. ಗುರುವಾರ ಪಕ್ಷಿಯನ್ನು ರಕ್ಷಿಸುವಂತೆ ಏವಿಯನ್ ಆ್ಯಂಡ್ ರೆಪ್ಟೈಲ್ ರಿಹ್ಯಾಬಿಲಿಟೇಷನ್ ಸೆಂಟರ್ (ಎಆರ್‌ಆರ್‌ಸಿ)ಗೆ ಕರೆ ಬಂದಿತ್ತು.
400 ಕೆವಿ ವಿದ್ಯುತ್ ಮಾರ್ಗದಲ್ಲಿ ಪಕ್ಷಿ ಸಿಲುಕಿದ್ದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಾಗಿತ್ತು. ಪಕ್ಷಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲು ಎಆರ್‌ಆರ್‌ಸಿ ತಂಡ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು. ಆರಂಭದಲ್ಲಿ ರಾತ್ರಿ ವೇಳೆ ಮಾತ್ರ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲು ಸಾಧ್ಯ ಎಂದು ತಿಳಿಸಲಾಗಿತ್ತು. ಈ ಮಾರ್ಗದಿಂದ ಬೆಂಗಳೂರಿನ ಸುಮಾರು 10 ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿದ್ದರಿಂದ ಹಗಲಿನಲ್ಲಿ ವಿದ್ಯುತ್ ಸ್ಥಗಿತಗೊಳಿಸುವುದು ಕಷ್ಟವಾಗಿತ್ತು. ಈ ನಡುವೆ, ಪಕ್ಷಿಯ ರಕ್ಷಣೆಗೆ ವಿಳಂಬವಾದರೆ ಮತ್ತಷ್ಟು ಹಾನಿಯಾಗಬಹುದು ಎಂಬ ಆತಂಕ ರಕ್ಷಣಾ ತಂಡದಲ್ಲಿತ್ತು. ಪಕ್ಷಿಯ ರಕ್ಷಣೆಗೆ ಸಾರ್ವಜನಿಕರು ಸ್ವತಃ ಪ್ರಯತ್ನಿಸುವ ಸಾಧ್ಯತೆಯ ಬಗ್ಗೆಯೂ ತಂಡ ಕಳವಳ ವ್ಯಕ್ತಪಡಿಸಿತ್ತು.
ಇದಕ್ಕೆ ಪರ್ಯಾಯವಾಗಿ ಕೆಪಿಟಿಸಿಎಲ್‌ನ ಲೈವ್‌ಲೈನ್ ನಿರ್ವಹಣಾ ವಾಹನವನ್ನು ಬಳಸುವ ಆಲೋಚನೆ ಮೂಡಿತು. ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸದೆ ನಿರ್ವಹಣಾ ಕಾರ್ಯ ನಡೆಸಲು ಬ್ರೆಜಿಲ್‌ನಿಂದ ಈ ವಾಹನವನ್ನು ಆಮದು ಮಾಡಿಕೊಳ್ಳಲಾಗಿದೆ. ವಾಹನದಲ್ಲಿರುವ ಇನ್ಸುಲೇಟೆಡ್ ಏರಿಯಲ್ ವರ್ಕ್ ಪ್ಲಾಟ್‌ಫಾರ್ಮ್ ಮೂಲಕ ಪಕ್ಷಿ ಸಿಲುಕಿದ್ದ ಎತ್ತರವನ್ನು ತಲುಪಲು ಸಾಧ್ಯವಾಯಿತು ಎಂದು ರಕ್ಷಣಾ ತಂಡ ತಿಳಿಸಿದೆ. ಸಾಮಾನ್ಯವಾಗಿ ವಿದ್ಯುತ್ ಮಾರ್ಗಗಳ ನಿರ್ವಹಣೆಗೆ ಬಳಸುವ ವಿಶೇಷ ವಾಹನ, ಈ ಬಾರಿ ಅಪಾಯದಲ್ಲಿದ್ದ ಪಕ್ಷಿಯ ಜೀವ ಉಳಿಸುವ ಕಾರ್ಯಕ್ಕೆ ನೆರವಾಗಿದೆ.

