Greater Bengaluru News9 : ರೈತರ ಬದುಕಿಗೆ ಉತ್ತೇಜನ ನೀಡುವ, ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಹಾಗೂ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವ ಮಹತ್ವದ ಆಶಯದೊಂದಿಗೆ ಮಲ್ಲೇಶ್ವರಂನ ಐತಿಹಾಸಿಕ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿರುವ 10ನೇ ವರ್ಷದ ರೈತ ಸ್ನೇಹಿ ಕಡಲೆಕಾಯಿ ಪರಿಷೆಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾದ ಶ್ರೀ ಟಿ.ಎ. ಶರವಣ ಅವರು ಉದ್ಘಾಟನೆ ನೆರವೇರಿಸುವ ಮೂಲಕ ಅದ್ಧೂರಿ ಚಾಲನೆ ನೀಡಿದರು.
ಕಾಡುಮಲ್ಲೇಶ್ವರ ಗೆಳೆಯರ ಬಳಗದ ಸಹಯೋಗದಲ್ಲಿ ನವೆಂಬರ್ 28ರಿಂದ 30ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಈ ಪರಿಷೆ ರೈತರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಪಾಲಿಗೆ ವಿಶೇಷ ಆಕರ್ಷಣೆಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ಎ. ಶರವಣ ಅವರು, ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಉತ್ತಮ ಬೆಲೆ ದೊರೆಯುವಂತೆ ಇಂತಹ ಪರಿಷೆಗಳು ಮಹತ್ವದ ವೇದಿಕೆಯಾಗಿವೆ. ರೈತರು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿರುವುದು ಅತ್ಯಂತ ಶ್ಲಾಘನೀಯ. ರೈತರ ಪರಿಶ್ರಮಕ್ಕೆ ಗೌರವ ನೀಡುವುದರ ಜೊತೆಗೆ ನಮ್ಮ ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಿ ಬೆಳೆಸುವ ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೂ ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಈ ಬಾರಿಯ ಪರಿಷೆಯ ಪ್ರಮುಖ ಆಕರ್ಷಣೆಯಾಗಿರುವ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ಶರವಣ ಅವರು ಶ್ಲಾಘಿಸಿದರು. ಪರಿಸರ ಸಂರಕ್ಷಣೆಯ ಉದ್ದೇಶದಿಂದ ಸುಮಾರು 3 ಲಕ್ಷ ಕಾಗದದ ಚೀಲಗಳನ್ನು ವಿತರಿಸುವ ಯೋಜನೆ ರೂಪಿಸಿರುವುದು ಮಾದರಿಯಾಗಿದೆ. ಪ್ರತಿಯೊಂದು ಅಂಗಡಿಯ ಮೂಲಕ ಗ್ರಾಹಕರಿಗೆ ಕಾಗದದ ಚೀಲಗಳನ್ನು ಒದಗಿಸುವ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಆಶಿಸಿದರು.
ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಮಾತನಾಡಿ, ಈ ವರ್ಷದ ಪರಿಷೆಯಲ್ಲಿ ಸುಮಾರು 600 ಮಳಿಗೆಗಳನ್ನು ರೈತರು ಮತ್ತು ವ್ಯಾಪಾರಿಗಳಿಗೆ ಉಚಿತವಾಗಿ ಒದಗಿಸಲಾಗಿದೆ. ಕರ್ನಾಟಕದಲ್ಲಿ ಬರ ಪರಿಸ್ಥಿತಿಯಿಂದ ಕಡಲೆಕಾಯಿ ಇಳುವರಿ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಿಂದಲೂ ರೈತರು ಆಗಮಿಸಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದಾರೆ. ಮೂರು ದಿನಗಳ ಕಾಲ ಪ್ರತಿದಿನ 2 ಲಕ್ಷಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆಯಿದೆ ಎಂದರು.
ಸಾರ್ವಜನಿಕರ ಸುರಕ್ಷತೆಗಾಗಿ 100ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 500 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಉಚಿತ ಕುಡಿಯುವ ನೀರು, ಪ್ರಸಾದ ವಿತರಣೆ, ಸಾರ್ವಜನಿಕ ಶೌಚಾಲಯ ಹಾಗೂ ಸುಗಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 2026ರ ‘ಹುಣ್ಣಿಮೆ ಹಾಡು ರಾಜ್ಯೋತ್ಸವ ವಾರ್ಷಿಕ ಪ್ರಶಸ್ತಿ’ಯನ್ನು ಉಡುಪಿಯ ಮಾನವೀಯ ಸೇವಾಕರ್ತೆ ವನಜ ಪಿ. ಪೂರ್ಣಾರ್ತಿ ಬಿಟ್ಪಾಡಿ ಅವರಿಗೆ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ. ಅನಾಥ ಹಾಗೂ ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ದಶಕಗಳಿಂದ ಸಲ್ಲಿಸುತ್ತಿರುವ ಅವರ ಅಮೂಲ್ಯ ಮಾನವೀಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಕಾಡುಮಲ್ಲೇಶ್ವರ ಗೆಳೆಯರ ಬಳಗದ ಸಂಚಾಲಕ ಅನೂಪ್ ಅಯ್ಯಂಗಾರ್ ಮಾತನಾಡಿ, ದೇವಾಲಯದ ಆವರಣದಲ್ಲಿ ಬೆಳೆದಿರುವ ಬಿದಿರನ್ನು ಬಳಸಿ ಪರಿಸರ ಸ್ನೇಹಿ ವೇದಿಕೆ, ಅಲಂಕಾರ ಹಾಗೂ ಬಿದಿರಿನ ಬುಟ್ಟಿಗಳನ್ನು ನಿರ್ಮಿಸಲಾಗಿದೆ. ಮಕ್ಕಳಿಂದ ತಯಾರಿಸಲಾದ ಬಿದಿರಿನ ಉಡುಗೊರೆಗಳನ್ನು ಗಣ್ಯರಿಗೆ ನೀಡಲಾಗುತ್ತಿದೆ. ರೈತರನ್ನು ಪ್ರೋತ್ಸಾಹಿಸುವುದು, ಪರಿಸರ ಉಳಿಸುವುದು ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ಉದ್ದೇಶವಾಗಿದೆ ಎಂದರು.
ನವೆಂಬರ್ 30ರಂದು ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿಯ ಬೃಹತ್ ರಥೋತ್ಸವ ನಡೆಯಲಿದ್ದು, ನೂರಾರು ಕಲಾತಂಡಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಅದ್ಧೂರಿ ಮೆರವಣಿಗೆ ಜರುಗಲಿದೆ. ಇದೇ ಸಂದರ್ಭದಲ್ಲಿ ಅನ್ನದಾಸೋಹ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು.
ಈ ಸಂದರ್ಭದಲ್ಲಿ ಕಾಡುಮಲ್ಲೇಶ್ವರ ಬಳಗದ ಮುಖಂಡರಾದ ಚಂದ್ರಶೇಖರ್ ನಾಯ್ಡು, ಡಾ. ಲೀಲಾ ಸಂಪಿಗೆ, ಎನ್. ಶ್ರೀನಿವಾಸ್, ಪಿ.ಜಿ. ಮನು, ದೇವಾಲಯದ ಅರ್ಚಕರಾದ ಗಂಗಾಧರ್ ದೀಕ್ಷಿತ್, ಶಶಿಧರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ರೈತರನ್ನು ಬೆಂಬಲಿಸುವುದು ನಮ್ಮೆಲ್ಲರ ಜವಾಬ್ದಾರಿ. ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ, ಪರಿಸರ ಸ್ನೇಹಿ ಪರಿಷೆಯಲ್ಲಿ ಪಾಲ್ಗೊಳ್ಳುವ ಮೂಲಕ ರೈತರ ಶ್ರಮಕ್ಕೆ ಬೆಂಬಲ ನೀಡಬೇಕು ಎಂದು ಶಾಸಕ ಟಿ.ಎ. ಶರವಣ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

