ChatGPT Image Oct 3, 2026, 08_41_04 PM-modified
GREATER BENGALURU NEWS 9
E khata

Greater Bengaluru News9 : ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 5 ನಗರ ಪಾಲಿಕೆಗಳ ಆಸ್ತಿಗಳ ಮಾಲೀಕರಿಗೆ ಗುಡ್‌ನ್ಯೂಸ್ ನೀಡಲಾಗಿದೆ. ನಗರದ 140 ಕೇಂದ್ರಗಳಲ್ಲಿ ಇ-ಖಾತಾ ಅರ್ಜಿ ಸೇವೆ ಕಲ್ಪಿಸಲಾಗಿದೆ. ಮನೆ ಬಾಗಿಲಿಗೆ ಜನಸೇವಕ ಸೇವೆ ಲಭ್ಯವಾಗಲಿದೆ. ತಾತ್ಕಾಲಿಕವಾಗಿ ಅಭಿಯಾನ ಮಾಡಿ ಕೈ ಬಿಟ್ಟಿದ್ದ ಜಿಬಿಎ ಇನ್ನು ಮುಂದೆ ಪ್ರತಿ ಶನಿವಾರ ‘ಇ-ಖಾತಾ ಮೇಳ’ (E Khata Mela) ಪುನರಾರಂಭಿಸುವುದಾಗಿ ತಿಳಿಸಿದೆ.

ಹೌದು, ಅಕ್ಟೋಬರ್ 31ರಿಂದ ಪ್ರತಿ ಶನಿವಾರ ‘ಇ-ಖಾತಾ ಮೇಳ’ ಪುನರಾರಂಭಿಸುವ ಮೂಲಕ ಪ್ರತಿ ಶನಿವಾರ ಖಾತಾಗಳಿಗೆ ಸಂಬಂಧಿಸಿದ ಸೇವೆಯನ್ನು ಪಡೆಯಬಹುದು. ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಸಹಾಯಕ ಕಂದಾಯ ಅಧಿಕಾರಿ(ಎಆರ್‌ಒ) ಕಚೇರಿಗಳು ಸೇರಿದಂತೆ ಆಯಾ ನಗರ ಪಾಲಿಕೆಗಳ ಆಯುಕ್ತರು ಹಾಗೂ ಜಂಟಿ ಆಯುಕ್ತರು ಗುರುತಿಸುವ ಸ್ಥಳಗಳಲ್ಲಿ ‘ಇ-ಖಾತಾ ಮೇಳ’ ನಡೆಯಲಿದೆ ಎಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರ ನಿರ್ದೇಶನ ಮೇರೆಗೆ ಮೇಳವನ್ನು ಪುನರಾರಂಭಿಸಲಾಗುತ್ತಿ‍ದೆ. ನಾಗರಿಕರು ಇ-ಖಾತಾಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಸುಲಭವಾಗಿ ಪಡೆಯಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹಿಂದೆ ನೂರು ದಿನಗಳ ಖಾತಾ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಅದು ನಿರೀಕ್ಷಿತ ಜನರನ್ನು ತಲುಪಲಿಲ್ಲ. ಹೀಗಾಗಿ ಪ್ರತಿ ಶನಿವಾರ ‘ಇ-ಖಾತಾ ಮೇಲೆ’ ಆಯೋಜಿಸಲಾಗುತ್ತಿದೆ.

ಎಲ್ಲಿ ಇ-ಖಾತಾ ಮೇಳ ನಡೆಯುತ್ತೆ?
ವ್ಯವಸ್ಥಿತ ಮೇಳಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಆಯಾ ನಗರ ಪಾಲಿಕೆಗಳ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಈಗಾಗಲೇ ಸೂಚಿಸಲಾಗಿದೆ. ಮೇಳ ನಡೆಯುವ ಸ್ಥಳಗಳ ವಿವರಗಳನ್ನು ಜಿಬಿಎಯ ಅಧಿಕೃತ ವೆಬ್‌ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುವುದು. ನಾಗರಿಕರು ಈ ಮಾಹಿತಿಯನ್ನು ಗಮನಿಸಿ, ಮೇಳದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.

ನಾಗರಿಕರೇ ಸ್ವತಃ ಇ-ಖಾತಾಗೆ ಅರ್ಜಿ ಸಲ್ಲಿಸಿ
ಇ-ಖಾತಾ ಸೇವೆಗಳನ್ನು ಪಡೆಯುವ ಕುರಿತು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿ ನೀಡುವ ವಿಡಿಯೋಗಳನ್ನು ಕೆಳಗಿನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಯೂಟ್ಯೂಬ್ ಚಾನೆಲ್ https://youtube.com/@revenuebmp?si=8Jh4AVM18g-stdgf ಮೂಲಕ ನಾಗರಿಕರು ಈ ವಿಡಿಯೋಗಳನ್ನು ವೀಕ್ಷಿಸುವ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ತಿಳಿಯಬಹುದು. ಬಳಿಕ ನೀವು ಜಿಬಿಎ ಇ-ಆಸ್ತಿ ಪೋರ್ಟಲ್‌ಗೆ (https://GBAeAasthi.Karnataka.gov.in) ಭೇಟಿ ನೀಡಿ ಸ್ವತಃ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ನಿಮ್ಮ ಮನೆ ಬಾಗಿಲಿಗೆ ಜನಸೇವಕ
ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು, ಹೊಸ ಖಾತಾ ಮಾಡಿಸಿಕೊಳ್ಳಲು ಅಥವಾ ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತಿಸಿಕೊಳ್ಳಲು ತೊಂದರೆಯಾಗುತ್ತಿದ್ದರೆ, ನಾಗರಿಕರು ಜನಸೇವಕ ಸೇವೆಯನ್ನು ಬಳಸಿಕೊಳ್ಳಬಹುದು. ಜನಸೇವಕರು ಮನೆ ಬಾಗಿಲಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ನೆರವು ನೀಡಲಿದ್ದಾರೆ.

ಈ ಸೇವೆ ಪಡೆಯಲು ಇಲ್ಲಿನ ಅಧಿಕೃತ ವೆಬ್‌ಸೈಟ್ (https://www.janasevaka.karnataka.gov.in/SlotBooking) ಮೂಲಕ ಸ್ಲಾಟ್ ಬುಕ್ ಮಾಡಿಕೊಳ್ಳಬಹುದು ಅಥವಾ ದೂರವಾಣಿ ಸಂಖ್ಯೆಗಳಿಗೆ (080-42474411 / 8904085030) ಕರೆ ಮಾಡಬಹುದು.

ಬೆಂಗಳೂರು ಒನ್ 140 ಕೇಂದ್ರಗಳಲ್ಲೂ ಇ-ಖಾತಾ ಸೇವೆ
ಜಿಬಿಎ ವ್ಯಾಪ್ತಿಯ 140 ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಇ-ಖಾತಾಗೆ ಅರ್ಜಿ ಸಲ್ಲಿಸುವ ಸೌಲಭ್ಯ ಕಲ್ಪಿಸಲಾಗಿದೆ. ನಾಗರಿಕರು ತಮ್ಮ ಸಮೀಪದ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ, ₹45 ಶುಲ್ಕ ಪಾವತಿಸುವ ಮೂಲಕ ಇ-ಖಾತಾಗೆ ಅರ್ಜಿ ಸಲ್ಲಿಸಬಹುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *