Greater Bengaluru News9 : ಬೆಸ್ಕಾಂ ವ್ಯಾಪ್ತಿಯಲ್ಲಿ ಗಣೇಶೋತ್ಸವ ಆಚರಣೆ ಮಾಡಲಿರುವ ಆಯೋಜಕರು, ಸಂಘ-ಸಂಸ್ಥೆಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಿಕೆ ಹಾಗೂ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅಗತ್ಯ ಸರಕ್ಷತಾ ಕ್ರಮಗಳನ್ನು ಪಾಲಿಸಲು ಕ್ಷೇತ್ರಾಧಿಕಾರಿಗಳಿಗೆ ಬೆಸ್ಕಾಂ(BESCOM) ಸೂಚನೆ ನೀಡಿದೆ.
ಬೆಸ್ಕಾಂ ಉಪ ವಿಭಾಗಾಧಿಕಾರಿಗಳು ಸ್ಥಳೀಯ ಪ್ರಾಧಿಕಾರಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಯಾವುದೇ ವಿಳಂಬ ಅನುಸರಿಸದೆ ಸುರಕ್ಷತಾ ಕ್ರಮಗಳನ್ನು ಖಾತರಿಪಡಿಸಿಕೊಂಡು ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲು ಸೂಚಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ತಿಳಿಸಿದ್ದಾರೆ.
ಸೂಚನೆ ಏನು?
ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ನೀಡಿದ ತಕ್ಷಣ ಸಂಬಂಧಪಟ್ಟ ಉಪ ವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ಗಳು ಪೆಂಡಾಲ್ ನಿರ್ಮಿಸಿರುವ ಸಮಾರಂಭ ಸ್ಥಳವನ್ನು ಪರಿಶೀಲಿಸಿ, ಸದರಿ ಸ್ಥಳವು ಸುರಕ್ಷತೆಯಿಂದ ಕೂಡಿದೆಯೇ ಎಂಬದನ್ನು ಖಾತ್ರಿ ಪಡಿಸಿಕೊಂಡು ವಿದ್ಯುತ್ ಸಂಪರ್ಕಕ್ಕೆ ನಿರಾಕ್ಷೇಪಣಾ ಪತ್ರ ನೀಡಬೇಕು.
ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವಾಗ ಬೇರೆ ಎಲ್ಲಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ ಬಂದಿದೆಯೇ ಎಂಬುದನ್ನು ಖಾತರಿಪಡಿಸಿಕೊಂಡು ಅರ್ಜಿಯನ್ನು ಸ್ವೀಕರಿಸಬೇಕು. ವೈರಿಂಗ್ ಅಳವಡಿಕೆಯು ಕೇಂದ್ರ ವಿದ್ಯುಚ್ಛಕ್ತಿ ಪ್ರಾಧಿಕಾರದ ಸುರಕ್ಷತಾ ನಿಯಾಮವಳಿಗೆ ಬದ್ಧವಾಗಿರಬೇಕು ಹಾಗೂ ವಿದ್ಯುತ್ ಪೂರೈಕೆಯಾಗುವ ಮೊದಲು ಅರ್ತ್ ಲೀಕೇಜ್ ಸರ್ಕ್ಯೂಟ್ ಬ್ರೇಕರ್ (ಇಎಲ್ಸಿಬಿ) ಅನ್ನು ಕಡ್ಡಾಯವಾಗಿ ಹೊಂದಿರಬೇಕು.

