Greater Bengaluru News9: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ವತಿಯಿಂದ ಸ್ವಚ್ಛ ಭಾರತ ಮಿಷನ್ (ನಗರ) 2.0 ಅನುದಾನದಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಅತ್ಯಾಧುನಿಕ ಯಂತ್ರ ಕಾಂಪ್ಯಾಕ್ಷನ್ ವ್ಯವಸ್ಥೆಯುಳ್ಳ ಘನತ್ಯಾಜ್ಯ ವರ್ಗಾವಣೆ ಕೇಂದ್ರಗಳ (Transfer Stations) ನಿರ್ಮಾಣಕ್ಕಾಗಿ ಕೈಗೊಂಡಿರುವ ಬಹುಕೋಟಿ ಟೆಂಡರ್ ಪ್ರಕ್ರಿಯೆಗಳು ಮತ್ತು ಅದಕ್ಕೆ ಸಂಬಂಧಿಸಿದ ಬೆಳವಣಿಗೆಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ನಗರದಲ್ಲಿ ಎಲ್ಲೆಂದರಲ್ಲಿ ಕಸ ಬ ಬೀಳುವುದನ್ನು ತಡೆಯಲು ಮತ್ತು ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ರೂಪಿಸಿರುವ ಈ ಬೃಹತ್ ಯೋಜನೆಗೆ ಸಂಬಂಧಿಸಿದಂತೆ ಎಲ್-1 ಗುತ್ತಿಗೆದಾರರ ಆಯ್ಕೆ, ಟೆಂಡರ್ ಷರತ್ತುಗಳ ಸಡಿಲಿಕೆ ಹಾಗೂ ಅಸಮತೋಲಿತ ಟೆಂಡರ್ (Unbalanced Tender) ಮೊತ್ತದ ಭದ್ರತಾ ಠೇವಣಿ ವಸೂಲಾತಿಯಲ್ಲಿ ಉಂಟಾಗಿರುವ ಗಂಭೀರ ಲೋಪಗಳು ಮತ್ತು ವಿವಾದಗಳ ಸುತ್ತ ಈ ಇಡೀ ವರದಿ ಸುತ್ತುತ್ತದೆ.
ಪ್ಯಾಕೇಜ್-2 ಮತ್ತು ಪ್ಯಾಕೇಜ್-5 ರ ಅಡಿಯಲ್ಲಿ ಮುನಿಯಪ್ಪ ಎಂಟರ್ಪ್ರೈಸಸ್ ಒಕ್ಕೂಟಕ್ಕೆ (Consortium) ಕೋಟ್ಯಂತರ ರೂ. ಮೌಲ್ಯದ ಟೆಂಡರ್ ಒಪ್ಪಂದಗಳನ್ನು ಹಾಗೂ ಕಾರ್ಯಾದೇಶಗಳನ್ನು ಅಧಿಕೃತವಾಗಿ ನೀಡಲಾಗಿದೆ. ಯಲಹಂಕ, ದಾಸರಹಳ್ಳಿ, ಮಹಾದೇವಪುರ, ಕೆ.ಆರ್.ಪುರಂ (ಪ್ಯಾಕೇಜ್-2) ಹಾಗೂ ಮಲ್ಲೇಶ್ವರಂ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ ಮತ್ತು ಗಾಂಧಿನಗರ (ಪ್ಯಾಕೇಜ್-5) ವಿಭಾಗಗಳಲ್ಲಿ ತಲಾ ನಾಲ್ಕು ವರ್ಗಾವಣೆ ಕೇಂದ್ರಗಳ ನಿರ್ಮಾಣಕ್ಕಾಗಿ ಈ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇದರಲ್ಲಿ ಪ್ಯಾಕೇಜ್-2 ರ ಕಾಮಗಾರಿಯ ಒಟ್ಟು ಮೌಲ್ಯವು ಜಿಎಸ್ಟಿ ಸೇರಿ ಸುಮಾರು 44.40 ಕೋಟಿ ರೂ.ಗಳಾಗಿದ್ದರೆ, ಪ್ಯಾಕೇಜ್-5 ರ ಒಟ್ಟು ಮೊತ್ತವು ಸುಮಾರು 45.34 ಕೋಟಿ ರೂ.ಗಳಿಗೂ ಅಧಿಕವಾಗಿದೆ. ಈ ಪ್ರಕ್ರಿಯೆಯಲ್ಲಿ ಮುನಿಯಪ್ಪ ಎಂಟರ್ಪ್ರೈಸಸ್ ಜತೆಗೆ ಟಿಪಿಎಸ್ ಇನ್ಫ್ರಾಸ್ಟ್ರಕ್ಚರ್ ಮತ್ತು ಎಂಎಸ್ಜಿಪಿ ಇನ್ಫ್ರಾಟೆಕ್ ಒಕ್ಕೂಟದ ಸದಸ್ಯರಾಗಿ ಪಾಲ್ಗೊಂಡಿದ್ದು, ರಾಜ್ಯ ಸರ್ಕಾರದ ಉನ್ನತ ಅಧಿಕಾರ ಸಬಲ ಸಮಿತಿ (SHPC) ಹಾಗೂ ಮೇಲ್ಮನವಿ ಪ್ರಾಧಿಕಾರದ ಅನುಮೋದನೆಯೊಂದಿಗೆ ಈ ಗುತ್ತಿಗೆಯನ್ನು ಅಂತಿಮಗೊಳಿಸಲಾಗಿದೆ.
ಆದಾಗ್ಯೂ, ಈ ಟೆಂಡರ್ ಪ್ರಕ್ರಿಯೆಗಳು ಆರಂಭದಿಂದಲೂ ಹಲವು ವಿವಾದಗಳು ಮತ್ತು ಕಾನೂನು ಹೋರಾಟಗಳಿಗೆ ಸಾಕ್ಷಿಯಾಗಿವೆ. ಮುನಿಯಪ್ಪ ಎಂಟರ್ಪ್ರೈಸಸ್ ಸಂಸ್ಥೆಯು ಕಡಿಮೆ ವಾರ್ಷಿಕ ವಹಿವಾಟು ಹೊಂದಿದ್ದರೂ ಬೃಹತ್ ಮೊತ್ತದ ಗುತ್ತಿಗೆಯನ್ನು ಒಕ್ಕೂಟದ ಮೂಲಕ ಪಡೆದುಕೊಂಡಿರುವುದು ಮತ್ತು ಇತರೆ ಬಿಡ್ದಾರರಾದ ಅಗ್ರಿಯಾ ಇನ್ಫ್ರಾಟೆಕ್ ಸಂಸ್ಥೆಯಿಂದ ಸಲ್ಲಿಕೆಯಾದ ಮೇಲ್ಮನವಿಗಳು ತೀವ್ರ ವಿರೋಧಕ್ಕೆ ಕಾರಣವಾದವು. ಟೆಂಡರ್ನಲ್ಲಿ ನಿಗದಿಪಡಿಸಿದ ಅರ್ಹತಾ ಮಾನದಂಡಗಳು, ತಾಂತ್ರಿಕ ಅನುಮೋದನೆಗಳು, ಒಇಎಂ (OEM) ಅಧಿಕೃತ ಪತ್ರಗಳು ಮತ್ತು ನಿಗದಿತ ಸ್ಥಳಗಳಲ್ಲಿ (NOC) ಜಮೀನು ಲಭ್ಯತೆಯಿಲ್ಲದೆ ಟೆಂಡರ್ ಪ್ರಕ್ರಿಯೆ ಮುಂದುವರೆಸಲಾಗಿದೆ ಎಂಬ ಗಂಭೀರ ಆರೋಪಗಳನ್ನು ವಕೀಲರಾದ ಯಶವಂತ್ ಅವರು ಮುಖ್ಯಮಂತ್ರಿಗಳಿಗೆ ದೂರಿನ ಮೂಲಕ ಸಲ್ಲಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಬಿಎಸ್ಡಬ್ಲ್ಯೂಎಂಎಲ್, ಒಕ್ಕೂಟದ ಒಟ್ಟು ವಹಿವಾಟು ಮಾನದಂಡಕ್ಕೆ ತಕ್ಕಹಾಗೆ ಇದೆ ಎಂದೂ ಹಾಗೂ ನಿಯಮಾನುಸಾರವೇ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಲಾಗಿದೆ ಎಂದೂ ಸಮರ್ಥಿಸಿಕೊಂಡಿದೆ.
ಈ ಎಲ್ಲ ವಿವಾದಗಳ ನಡುವೆಯೂ, ಟೆಂಡರ್ ಮೊತ್ತ ಹಾಗೂ ಅಂದಾಜು ವೆಚ್ಚದ ನಡುವೆ ವ್ಯತ್ಯಾಸವಿರುವ ಅಸಮತೋಲಿತ ಟೆಂಡರ್ ಮೊತ್ತದ (Unbalanced Tender Amount) ಭದ್ರತಾ ಠೇವಣಿ ಸಂಗ್ರಹಿಸುವ ವಿಚಾರದಲ್ಲಿ ಆಡಳಿತಾತ್ಮಕವಾಗಿ ದೊಡ್ಡ ಮಟ್ಟದ ಪ್ರಮಾದ ಜರುಗಿದೆ ಎಂಬುದು ಬಹಿರಂಗಗೊಂಡಿದೆ. ಪ್ಯಾಕೇಜ್-2 ರಲ್ಲಿ ಅಂದಾಜು ಮತ್ತು ಬಿಡ್ ಮೊತ್ತದ ನಡುವೆ ಸುಮಾರು 6.79 ಕೋಟಿ ರೂ. ಹಾಗೂ ಪ್ಯಾಕೇಜ್-5 ರಲ್ಲಿ ಸುಮಾರು 5.99 ಕೋಟಿ ರೂ.ಗಳ ವ್ಯತ್ಯಾಸವಿದ್ದು, ಒಟ್ಟು ಸುಮಾರು 12.79 ಕೋಟಿ ರೂ.ಗಳ ಹೆಚ್ಚುವರಿ ಭದ್ರತಾ ಠೇವಣಿಯನ್ನು ಗುತ್ತಿಗೆದಾರರಿಂದ ಪಡೆಯಬೇಕಿತ್ತು. ಆದರೆ ಗುತ್ತಿಗೆದಾರರ ಕೋರಿಕೆಯ ಮೇರೆಗೆ ಆರಂಭದಲ್ಲಿ ನೋಟಿಸ್ ನೀಡಿದರೂ ಸಹ, ಯಾವುದೇ ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸಿಕೊಳ್ಳದೆ ಮತ್ತು ಸಕ್ಷಮ ಪ್ರಾಧಿಕಾರದ ಗಮನಕ್ಕೆ ತರದೆ ಕೇವಲ ಶೇ. 5 ರಷ್ಟು ಸಾಮಾನ್ಯ ಕಾರ್ಯಕ್ಷಮತೆ ಭದ್ರತಾ ಠೇವಣಿಯೊಂದಿಗೆ ನೇರವಾಗಿ ಕಾರ್ಯಾದೇಶ (Work Order) ಜಾರಿಗೊಳಿಸಲಾಗಿದೆ.
ಈ ಗಂಭೀರ ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಸ್ಡಬ್ಲ್ಯೂಎಂಎಲ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯು, ಅಂದಿನ ಉಪ ಪ್ರಧಾನ ವ್ಯವಸ್ಥಾಪಕರು ಹಾಗೂ ಪ್ರಸ್ತುತ ಜಿಬಿಎ ಕಾರ್ಯಪಾಲಕ ಅಭಿಯಂತರರಾದ ಶ್ರೀ ಮಧು ಆರ್. ಅವರಿಗೆ ಅಧಿಕೃತ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ. ಟೆಂಡರ್ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿ, ಮೇಲಾಧಿಕಾರಿಗಳ ಅನುಮೋದನೆ ಪಡೆಯದೆ ತಮ್ಮ ಹಂತದಲ್ಲೇ ಕಾರ್ಯಾದೇಶ ನೀಡಿದ್ದರ ಬಗ್ಗೆ ಸ್ಪಷ್ಟನೆ ಕೋರಲಾಗಿದ್ದು, ತಪ್ಪಿದಲ್ಲಿ ಶಿಸ್ತು ಕ್ರಮ ಜರುಗಿಸಲು ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಒಟ್ಟಾರೆ, ರಾಜಧಾನಿಯ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊರಟಿರುವ ಈ ಮಹತ್ವಾಕಾಂಕ್ಷೆಯ ಯೋಜನೆಯು ಅನುಷ್ಠಾನ ಹಂತದಲ್ಲೇ ತಾಂತ್ರಿಕ ಹಾಗೂ ಆಡಳಿತಾತ್ಮಕ ವಿವಾದಗಳ ಸುಳಿಯಲ್ಲಿ ಸಿಲುಕಿಕೊಂಡಿದೆ.
ಆರ್. ಅಶೋಕ್ ಆಕ್ರೋಶ
ಬೆಂಗಳೂರಿನಲ್ಲಿ ಕಸದಿಂದ ಕಾಸು ಮಾಡುವ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಕಸದ ಟೆಂಡರ್ನಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅನರ್ಹ ಕಂಪನಿಗೆ ಟೆಂಡರ್ ನೀಡಿ ಕಿಕ್ಬ್ಯಾಕ್ ಪಡೆಯಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ಇಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಬಿಎ ವತಿಯಿಂದ ಕಸ ಹಾಗೂ ತ್ಯಾಜ್ಯ ವರ್ಗಾವಣೆ ಸ್ಟೇಶನ್ಗಳ ಟೆಂಡರ್ಗಳಲ್ಲಿ ನಡೆದಿರುವ ಹಗರಣದ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿದರು. ಕಾಂಗ್ರೆಸ್ ಸರ್ಕಾರ ಕಸದಿಂದ ಕಾಸು ಮಾಡಿಕೊಳ್ಳುತ್ತಿದೆ. ಖಾಲಿ ನಿವೇಶನಗಳನ್ನೂ ಬಿಡದೆ ಅಲ್ಲಿನ ಕಸಕ್ಕೂ ದಂಡ ವಿಧಿಸಲಾಗುತ್ತಿದೆ. ಕೃಷ್ಣ ಬೈರೇಗೌಡರು ಹೊಸದಾಗಿ ಸಚಿವರಾದಾಗ ‘ಫ್ರೀಡಂ ಫ್ರಂ ವೇಸ್ಟ್ ಅಭಿಯಾನ’ ಮಾಡಿದ್ದರು. ಆದರೆ ಅದರ ಬದಲು ಮನಿ ಫ್ರಂ ವೇಸ್ಟ್ ಸ್ಕೀಮ್ ಮಾಡಲಾಗಿದೆ. 133 ಕೋಟಿ ರೂ. ಮೊತ್ತದ ಟೆಂಡರ್ನ್ನು ಮುನಿಯಪ್ಪ ಎಂಟರ್ಪ್ರೈಸಸ್ಗೆ ನೀಡಲಾಗಿದೆ. ಜಿಎಸ್ಟಿ ಸಂಖ್ಯೆ ಇಲ್ಲದ ಈ ಕಂಪನಿ ಬೇನಾಮಿಯಾಗಿದೆ. ಇಂತಹ ಟೆಂಡರ್ ಪಡೆಯಬೇಕೆಂದರೆ 10 ಕೋಟಿ ರೂ. ವಹಿವಾಟು ಮಾಡಿರಬೇಕೆಂಬ ನಿಯಮವನ್ನು 2018 ರಲ್ಲಿ ರಾಜ್ಯ ಸರ್ಕಾರ ಜಾರಿ ಮಾಡಿತ್ತು. ಈ ಕಂಪನಿ 2023-24 ರಲ್ಲಿ 3.34 ಕೋಟಿ ರೂ. ಮಾತ್ರ ವಹಿವಾಟು ನಡೆಸಿದೆ. ಅದಕ್ಕೂ ಮೊದಲು 1-2 ಕೋಟಿ ರೂ. ಮಾತ್ರ ವಾರ್ಷಿಕ ವಹಿವಾಟು ನಡೆದಿದೆ. ಅರ್ಹತಾ ಷರತ್ತು ಉಲ್ಲಂಘಿಸಿ ಶೇ.40 ಕಮಿಶನ್ ಪಡೆಯಲು ಹೀಗೆ ಮಾಡಲಾಗಿದೆ.

