ChatGPT Image Oct 3, 2026, 08_41_04 PM-modified
GREATER BENGALURU NEWS 9
Electric Bill

Greater Bengaluru News9: ರಾಜ್ಯದಲ್ಲಿ ಸರ್ಕಾರಿ ಇಲಾಖೆಗಳಿಗೂ ವಿದ್ಯುತ್‌ ಬಿಲ್‌ ಪಾವತಿಸಲು ದುಡ್ಡಿನ ಬರ ಬಂದಿದ್ದು, ವಿದ್ಯುತ್‌ ಸರಬರಾಜು ಕಂಪನಿಗಳಿಗೆ (ಎಸ್ಕಾಂ) ಸರ್ಕಾರಿ ಕಚೇರಿಗಳೇ ಬಲು ಭಾರವಾಗಿವೆ. ವಿವಿಧ ಇಲಾಖೆಗಳು ಬರೋಬ್ಬರಿ 12,463 ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದ್ದು, ಇದು ಎಸ್ಕಾಂಗಳಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಸಾಮಾನ್ಯ ಗ್ರಾಹಕರು ಒಂದೆರಡು ತಿಂಗಳು ಬಿಲ್‌ ಕಟ್ಟದಿದ್ದರೆ ತಕ್ಷಣವೇ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ಎಸ್ಕಾಂಗಳು, ಸರ್ಕಾರಿ ಇಲಾಖೆಗಳ ವಿಷಯದಲ್ಲಿ‌ ಅಸಹಾಯಕವಾಗಿವೆ. ಸಕಾಲಕ್ಕೆ ವಿದ್ಯುತ್‌ ಬಿಲ್‌ ಪಾವತಿಸದ ಜನಸಾಮಾನ್ಯರ ವಿರುದ್ಧ ದಂಡಾಸ್ತ್ರ ಪ್ರಯೋಗಿಸುವ ಇಲಾಖೆಯು ಸರ್ಕಾರಿ ಕಚೇರಿಗಳಿಗೆ ಮಾತ್ರ ವಿನಾಯಿತಿ ನೀಡಿದೆ.

ಇಂಧನ ಇಲಾಖೆಯು ವರ್ಷಾನುಗಟ್ಟಲೇ ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಇಲಾಖೆಗಳಿಗೆ ಬಿಲ್‌ ಕಟ್ಟುವಂತೆ ಹಲವು ಬಾರಿ ನೋಟಿಸ್‌ ನೀಡಿದೆ. ಆದರೆ, ಇಲಾಖೆಗಳು ಅನುದಾನ ಕೊರತೆಯ ನೆಪ ಹೇಳಿ ಬಿಲ್‌ ಪಾವತಿಸದೆ ಕೈಚೆಲ್ಲಿವೆ. ಇದರಿಂದ ಇಕ್ಕಟ್ಟಿಗೆ ಸಿಲುಕಿರುವ ಇಂಧನ ಇಲಾಖೆಗೆ ಬಾಕಿ ಬಿಲ್‌ ವಸೂಲಾತಿಯು ತಲೆನೋವಾಗಿ ಪರಿಣಮಿಸಿದೆ. ವರ್ಷದಿಂದ ವರ್ಷಕ್ಕೆ ಬಾಕಿ ಬಿಲ್‌ ಮೊತ್ತ ಬೆಟ್ಟದಂತೆ ಬೆಳೆಯುತ್ತಲೇ ಸಾಗಿದ್ದು, ಈ ಆರ್ಥಿಕ ಹೊರೆಯು ಎಸ್ಕಾಂಗಳ ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು (ಆರ್‌ಡಿಪಿಆರ್‌) ಅತಿ ಹೆಚ್ಚು 5,626 ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದೆ. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಬೀದಿ ದೀಪಗಳು ಮತ್ತು ಕುಡಿಯುವ ನೀರಿನ ಪಂಪ್‌ಸೆಟ್‌ಗಳ ವಿದ್ಯುತ್‌ ಬಿಲ್‌ ಇದರಲ್ಲಿಸೇರಿದೆ. ಜಿಬಿಎ , ಮಹಾನಗರ ಪಾಲಿಕೆಗಳು, ನಗರಸಭೆಗಳು ಮತ್ತು ಪುರಸಭೆಗಳನ್ನು ಒಳಗೊಂಡ ನಗರಾಭಿವೃದ್ಧಿ ಇಲಾಖೆಯು 3,923 ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದೆ. ಇನ್ನು ತಹಸೀಲ್ದಾರ್‌ ಕಚೇರಿಗಳು, ಉಪ ವಿಭಾಗಾಧಿಕಾರಿ ಕಚೇರಿಗಳೂ ಸೇರಿದಂತೆ ಇತರೆ ಸರ್ಕಾರಿ ಕಚೇರಿಗಳ 2,913 ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿಯಿದೆ.

”ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಕಚೇರಿಗಳಿಗೆ ಕೆಇಆರ್‌ಸಿ ನಿಯಮಗಳ ಪ್ರಕಾರ 15 ದಿನಗಳ ಮುಂಚಿತವಾಗಿ ನೋಟಿಸ್‌ ನೀಡಲಾಗುತ್ತಿದೆ. ಆ ಬಳಿಕವೂ ಬಿಲ್‌ ಪಾವತಿಸದಿದ್ದರೆ ಕಚೇರಿಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಎಸ್ಕಾಂಗಳಿಗೆ ಸಂಪೂರ್ಣ ಹಕ್ಕಿದೆ. ತುರ್ತು ಸೇವೆಗಳಾದ ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಶಾಲಾ-ಕಾಲೇಜುಗಳು, ಪೊಲೀಸ್‌ ಠಾಣೆಗಳು, ನ್ಯಾಯಾಲಯಗಳು ಮತ್ತು ಕುಡಿಯುವ ನೀರು ಸರಬರಾಜು ಘಟಕಗಳ ವಿದ್ಯುತ್‌ ಸಂಪರ್ಕವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕಡಿತಗೊಳಿಸದೆ ವಿನಾಯಿತಿ ನೀಡಲಾಗಿದೆ,” ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಎಸ್ಕಾಂಗಳು ವಿದ್ಯುತ್‌ ಉತ್ಪಾದನಾ ಕಂಪನಿಗಳಿಗೆ ಮುಂಗಡ ಹಣ ಪಾವತಿಸಿಯೇ ವಿದ್ಯುತ್‌ ಖರೀದಿಸಬೇಕು. ಇಲ್ಲದಿದ್ದರೆ ಉತ್ಪಾದನಾ ಕಂಪನಿಗಳು ವಿದ್ಯುತ್‌ ಪೂರೈಸುವುದಿಲ್ಲ. ಸರ್ಕಾರಿ ಇಲಾಖೆಗಳ ಬಿಲ್‌ ಬಾಕಿಯಿಂದಾಗಿ ಎಸ್ಕಾಂಗಳು ಸಾಲ ಮಾಡಿ ವಿದ್ಯುತ್‌ ಖರೀದಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ಸಾಲದ ಮೇಲಿನ ಬಡ್ಡಿಯು ಸಾವಿರಾರು ಕೋಟಿ ರೂ.ಗಳಾಗಿದ್ದು, ಎಸ್ಕಾಂಗಳು ಸಾಲದ ಸುಳಿಗೆ ಸಿಲುಕಿವೆ.

ವಿದ್ಯುತ್‌ ಬಿಲ್‌ ಬಾಕಿಯ ಆರ್ಥಿಕ ಹೊರೆ ಮತ್ತು ಬಡ್ಡಿ ಸಾಲದ ಶೂಲದಿಂದ ಪಾರಾಗಲು ಇಂಧನ ಇಲಾಖೆ, ಪದೇ ಪದೆ ವಿದ್ಯುತ್‌ ದರ ಹೆಚ್ಚಿಸಿ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಪ್ರತಿ ವರ್ಷ ನಷ್ಟದ ನೆಪವೊಡ್ಡಿ ವಿದ್ಯುತ್‌ ದರ ಹೆಚ್ಚಿಸಲಾಗುತ್ತಿದೆ. ಕರ್ನಾಟ ಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಎಸ್ಕಾಂಗಳ ನಷ್ಟವನ್ನು ಸರಿದೂಗಿಸಲು ‘ಟ್ರೂ ಅಪ್‌’ ಅಥವಾ ಹೆಚ್ಚುವರಿ ಸೆಸ್‌ ಹೆಸರಿನಲ್ಲಿ ವಿದ್ಯುತ್‌ ದರ ಹೆಚ್ಚಿಸುತ್ತಿದೆ.

ರಾಜ್ಯದ ಐದು ಎಸ್ಕಾಂಗಳು ಸುಮಾರು 50 ಸಾವಿರ ಕೋಟಿ ರೂ. ಸಾಲ ಪಡೆದಿವೆ. ಸರ್ಕಾರದಿಂದ ಪ್ರತಿ ವರ್ಷ ಸಹಾಯಧನ ಬಿಡುಗಡೆಯಾಗುತ್ತಿದ್ದರೂ ಹೆಚ್ಚುವರಿ ವಿದ್ಯುತ್‌ ಬೇಡಿಕೆಗೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಾದ ಬಂಡವಾಳ ವೆಚ್ಚಕ್ಕಾಗಿ ಎಸ್ಕಾಂಗಳು, ವಿವಿಧ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತಿವೆ. ಬೆಸ್ಕಾಂನ ದೀರ್ಘಾವಧಿ ಸಾಲ ಸುಮಾರು 20 ಸಾವಿರ ಕೋಟಿ ರೂ. ಇದೆ. ಎಸ್ಕಾಂಗಳು, ಸರ್ಕಾರಿ ಸ್ವಾಮ್ಯದ ವಿದ್ಯುತ್‌ ಉತ್ಪಾದನಾ ಕಂಪನಿಯಾದ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತಕ್ಕೆ (ಕೆಪಿಸಿಎಲ್) ಪಾವತಿಸಬೇಕಿರುವ ಬಾಕಿ ಮೊತ್ತವು ಲೇಟ್‌ ಪೇಮೆಂಟ್‌ ಸರ್ಚಾರ್ಜ್ (ಎಲ್‌ಪಿಎಸ್‌) ಸೇರಿ 8,755 ಕೋಟಿ ರೂ. ಆಗಿದೆ.

Leave a Reply

Your email address will not be published. Required fields are marked *