ChatGPT Image Oct 3, 2026, 08_41_04 PM-modified
GREATER BENGALURU NEWS 9

Greater Bengaluru News9 : ಕೆಎಂಎಫ್ ಗ್ರಾಹಕರಿಗೆ ಸಿಹಿ ಸುದ್ದಿ. ಜಿಎಸ್‌ಟಿ ಪರಿಷ್ಕರಣೆಯಾದ ಬೆನ್ನಲ್ಲೇ ಸೋಮವಾರದಿಂದಲೇ (ಸೆ.22) ನಂದಿನಿಯ ಕೆಲ ಉತ್ಪನ್ನಗಳ ದರ ಇಳಿಕೆಯಾಗಲಿದೆ.

ಬೆಣ್ಣೆ, ತುಪ್ಪ, ಚೀಸ್ ಮೇಲೆ ಮೊದಲು 12% ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈ ತೆರಿಗೆಯನ್ನು 5%ಕ್ಕೆ ಇಳಿಸಿದ್ದರಿಂದ ಈ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ.

ಪನ್ನಿರ್ ಮತ್ತು ಯುಹೆಚ್‌ಟಿ ಹಾಲಿಗೆ(ಗುಡ್ ಲೈಫ್) ಮೊದಲು 5% ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಆದರೆ ಈಗ ಈ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹಾಕಲಾಗುತ್ತದೆ. ಹೀಗಾಗಿ ಈ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ.

ಹಾಲು, ಮೊಸರು ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಲಿಗೆ ಜಿಎಸ್‌ಟಿ ಇಲ್ಲ, ಮೊಸರಿಗೆ 5% ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಹೀಗಾಗಿ ಈ ಎರಡೂ ಉತ್ಪನ್ನಗಳ ಬೆಲೆ ಈಗಿನಂತೆ ಮುಂದುವರಿಯಲಿದೆ.

ಈಗಾಗಲೇ ಜಿಎಸ್‌ಟಿ ಕಡಿಮೆ‌ಯಾಗಿರುವ ಉತ್ಪನ್ನಗಳ ದರ ನಿಗಧಿ ಸಂಬಂಧ ಕೆಎಂಎಫ್‌ ಕೆಲಸ ಶುರು ಮಾಡಿದ್ದು ಶೀಘ್ರವೇ ಅಧಿಕೃತ ಪ್ರಕಟಣೆ ಹೊರಡಿಸಲಿದೆ.

ಸೆ.22 ರಿಂದ ಇಳಿಕೆ ಯಾಕೆ?
ಸೆಪ್ಟೆಂಬರ್‌ ಮೊದಲ ವಾರದಲ್ಲಿ ದೆಹಲಿಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಪರಿಷ್ಕರಣೆ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದ್ದವು.

2017ರಲ್ಲಿ ಜಾರಿಯಾದ ಜಿಎಸ್‌ಟಿಯಲ್ಲಿ 0, 5%, 12%, 18%, 28% ಅಡಿಯಲ್ಲಿ ವಸ್ತುಗಳ ಮೇಲೆ ತೆರಿಗೆ ಹಾಕಲಾಗುತ್ತಿತ್ತು. ಆದರೆ ಈಗ 12% ಮತ್ತು 28% ಸ್ಲ್ಯಾಬ್‌ ಅನ್ನು ತೆಗೆಯಲಾಗಿದ್ದು ಈ ಪಟ್ಟಿಯಲ್ಲಿದ್ದ ಬಹುತೇಕ ವಸ್ತುಗಳನ್ನು 5% ಮತ್ತು 18% ಶಿಫ್ಟ್‌ ಮಾಡಲಾಗಿದೆ. ಇದರ ಜೊತೆ ಐಷಾರಾಮಿ ವಸ್ತುಗಳು (ತಂಬಾಕು, ಐಷಾರಾಮಿ ಕಾರುಗಳು ಇತ್ಯಾದಿ) ಮೇಲೆ 40% ತೆರಿಗೆ ಹಾಕಲಾಗುತ್ತದೆ.

ತೆರಿಗೆ ಪರಿಷ್ಕರಣೆಯಾದ ದರಗಳು ಸೆ.22 ರಿಂದ ಜಾರಿಗೆ ಬರಬೇಕು ಎಂಬ ನಿರ್ಧಾರವನ್ನು ಜಿಎಸ್‌ಟಿ ಕೌನ್ಸಿಲ್‌ ತೆಗೆದುಕೊಂಡ ಹಿನ್ನೆಲೆಯಲ್ಲಿ ಸೋಮವಾರದಿಂದ ದೇಶಾದ್ಯಂತ 99% ರಷ್ಟು ವಸ್ತುಗಳ ಬೆಲೆ ಇಳಿಕೆಯಾಗಲಿದೆ.

Leave a Reply

Your email address will not be published. Required fields are marked *