ಲಂಡನ್ನಲ್ಲಿ ನಡೆದ ಅತ್ಯಂತ ದಾರುಣ ಹಾಗೂ ಬೆಚ್ಚಿಬೀಳಿಸುವ ಹತ್ಯೆಯೊಂದರ ರೋಚಕ ವಿವರಗಳು ಇದೀಗ ಸಾಕ್ಷ್ಯಚಿತ್ರದ ಮೂಲಕ ಹೊರಬಿದ್ದಿವೆ. ಸಲಿಂಗಕಾಮಿ ಸಂಬಂಧಕ್ಕಾಗಿ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದ ಪತಿಯ ವಂಚನೆಯ ಮುಖವಾಡ ಕಳಚಿಬಿದ್ದ ಕಥೆ ಇಲ್ಲಿದೆ.
2018ರ ಮೇ ತಿಂಗಳಲ್ಲಿ ಲಂಡನ್ನಲ್ಲಿ ಜೆಸ್ಸಿಕಾ ಪಟೇಲ್ ಎಂಬ ಮಹಿಳೆಯನ್ನು ಆಕೆಯ ನಿವಾಸದಲ್ಲೇ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ಮನೆಯಲ್ಲಿ ದರೋಡೆ ನಡೆದು, ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ನಂಬಿಸಲಾಗಿತ್ತು. ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು ಮತ್ತು ಜೆಸ್ಸಿಕಾ ಶವವು ಡಕ್ಟ್ ಟೇಪ್ನಿಂದ ಸುತ್ತಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಅಕ್ಕನ ಅಕಾಲಿಕ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದ ಜೆಸ್ಸಿಕಾ ತಂಗಿ ಮಿನಾಲ್ ಪಟೇಲ್, ಆರಂಭದಲ್ಲಿ ಭಾವ ಮಿತೇಶ್ ಪಟೇಲ್ನನ್ನು ಸಾಂತ್ವನಗೊಳಿಸಲು ಮುಂದಾಗಿದ್ದರು. ಸೋಫಾ ಮೇಲೆ ಕುಳಿತಿದ್ದ ಮಿತೇಶ್ನನ್ನು ತಬ್ಬಿಕೊಂಡು ಸಮಾಧಾನ ಪಡಿಸುತ್ತಿದ್ದಾಗ, ಆತ ಯಾವುದೇ ದುಃಖವಿಲ್ಲದೆ ಹೆಗಲ ಮೇಲೆ ತಲೆಹಾಕಿದ್ದ. ಆದರೆ, ಇದು ಕೇವಲ ಮೊಸಳೆ ಕಣ್ಣೀರು ಎಂಬುದು ಕೆಲವೇ ದಿನಗಳಲ್ಲಿ ಸಾಕ್ಷ್ಯ ಸಮೇತ ಜಗಜ್ಜಾಹೀರವಾಯಿತು.
ವೃತ್ತಿಯಲ್ಲಿ ಫಾರ್ಮಾಸಿಸ್ಟ್ ಆಗಿದ್ದ ಮಿತೇಶ್ ಹಾಗೂ ಜೆಸ್ಸಿಕಾ ಮದುವೆ 2009ರಲ್ಲಿ ನಡೆದಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತಾದರೂ, ವರ್ಷಗಳು ಕಳೆದಂತೆ ಮಿತೇಶ್ ಪತ್ನಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲು ಆರಂಭಿಸಿದ್ದ. ಮನೆಯಲ್ಲಿದ್ದಾಗಲೂ ಸದಾ ಮೊಬೈಲ್ನಲ್ಲೇ ಕಾಲ ಕಳೆಯುತ್ತಿದ್ದ ಆತ, ಬಾತ್ರೂಮ್ಗೂ ಫೋನ್ ತೆಗೆದುಕೊಂಡು ಹೋಗುವಷ್ಟು ರಹಸ್ಯವಾಗಿ ವರ್ತಿಸುತ್ತಿದ್ದ.
ಮಿತೇಶ್ನ ಈ ಅನುಮಾನಾಸ್ಪದ ವರ್ತನೆಯ ಹಿಂದೆ ದೊಡ್ಡ ರಹಸ್ಯವಿತ್ತು. ಆಸ್ಟ್ರೇಲಿಯಾ ಮೂಲದ ಡಾ. ಅಮಿತ್ ಪಟೇಲ್ ಎಂಬಾತನೊಂದಿಗೆ ಮಿತೇಶ್ ಸಲಿಂಗಕಾಮಿ ಸಂಬಂಧ ಹೊಂದಿದ್ದು, ಡೇಟಿಂಗ್ ಆ್ಯಪ್ಗಳನ್ನು ಬಳಸುತ್ತಿದ್ದ ಎಂಬ ವಿಷಯ ತಂಗಿ ಮಿನಾಲ್ಗೆ ಚಾಟಿಂಗ್ ಮೂಲಕ ಗೊತ್ತಾಯಿತು. ಈ ವಿಚಾರವನ್ನು ಜೆಸ್ಸಿಕಾ ಪ್ರಶ್ನಿಸಿದಾಗ, ಪತಿಯ ಮೇಲೆ ನಂಬಿಕೆಯಿಡುವಂತೆ ಆಕೆ ತನ್ನ ಕುಟುಂಬದವರನ್ನೇ ಕೇಳಿಕೊಂಡಿದ್ದಳು.
ಮಕ್ಕಳಾಗದ ಕಾರಣ ದಂಪತಿ ಐವಿಎಫ್ (ಪ್ರನಾಳೀಯ ಫಲೀಕರಣ) ಮೊರೆ ಹೋಗಿದ್ದರು. ಆದರೆ ಮೂರು ಬಾರಿ ವಿಫಲವಾಗಿತ್ತು. ಅತಿ ಕ್ರೂರ ಸಂಗತಿಯೆಂದರೆ, ಮಗು ಪಡೆದ ಬಳಿಕ ಜೆಸ್ಸಿಕಾಳನ್ನು ಕೊಂದು ಆ ಮಗುವನ್ನು ಸಿಡ್ನಿಗೆ ಕರೆದೊಯ್ಯಲು ಮಿತೇಶ್ ತನ್ನ ಗೇ ಪ್ರೇಮಿಯೊಂದಿಗೆ ಮೊದಲೇ ಯೋಜನೆ ರೂಪಿಸಿದ್ದನು ಎಂಬುದು ತನಿಖೆಯಿಂದ ಬಯಲಾಯಿತು.
ನಾಲ್ಕನೇ ಸುತ್ತಿನ ಐವಿಎಫ್ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, 2018ರ ಮೇ 14ರಂದು ಮಿತೇಶ್ ತನ್ನ ಪತ್ಸಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈದನು. ಕೊಲೆ ಬಳಿಕ ದರೋಡೆ ಕಥೆ ಸೃಷ್ಟಿಸಲು ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿದ್ದಲ್ಲದೆ, ತುರ್ತು ಸೇವೆಗೆ ಕರೆ ಮಾಡುವ ಮುನ್ನ ಪಿಜ್ಜಾ ಆರ್ಡರ್ ಮಾಡಿ ತರಲು ಹೋಗಿದ್ದ.
ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಸಾಕ್ಷ್ಯಗಳು ಮಿತೇಶ್ನ ಎಲ್ಲಾ ಸುಳ್ಳುಗಳನ್ನು ಹೊರಹಾಕಿದವು. ನಂಬಿಸಿ ಮೋಸ ಮಾಡಿದ ಆತನ ಕರಾಳ ಮುಖ ಬಯಲಾಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದು, ಪ್ರಸ್ತುತ ಆತ ತನ್ನ ಕೃತ್ಯಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ.

