ಬೆಂಗಳೂರು: ಕಟ್ಟಡ ನಕ್ಷೆ ಮಂಜೂರಾತಿ ವ್ಯವಸ್ಥೆಯಲ್ಲಿ ಅಧಿಕಾರಿಗಳ ಹಸ್ತಕ್ಷೇಪ ತಪ್ಪಿಸಿ, ಸಂಪೂರ್ಣವಾಗಿ ತಂತ್ರಾಂಶದ ಮೂಲಕ ಸ್ವಯಂಚಾಲಿತವಾಗಿ ನಕ್ಷೆ ಅನುಮೋದನೆ ನೀಡುವ ‘ನಂಬಿಕೆ ನಕ್ಷೆ 2.0’ ಅನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಗಿದೆ.
ಇದು ನಂಬಿಕೆ ನಕ್ಷೆ 1.0ರ ಸುಧಾರಿತ ರೂಪವಾಗಿದೆ. ನಿವೇಶನ ಮಾಲೀಕರು ವಸತಿ ಕಟ್ಟಡ ನಿರ್ಮಾಣಕ್ಕೆ ನೋಂದಾಯಿತ ವಾಸ್ತುಶಿಲ್ಪಿಗಳ (ಆರ್ಕಿಟೆಕ್ಟ್) ಮೂಲಕ ನಕ್ಷೆಯೊಂದಿಗೆ ಅರ್ಜಿ ಸಲ್ಲಿಸಿದ ಅರ್ಧ ತಾಸಿನೊಳಗೆ ಕಟ್ಟಡ ನಕ್ಷೆ ಮಂಜೂರಾತಿ ಕೈಸೇರಲಿದೆ. ಈ ವ್ಯವಸ್ಥೆಯಿಂದಾಗಿ ನಾಗರಿಕರು ಕಟ್ಟಡ ನಕ್ಷೆ ಮಂಜೂರಾತಿಗೆ ನಗರ ಯೋಜನೆ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ. ಅಧಿಕಾರಿಗಳ ಲಂಚದ ಬೇಡಿಕೆಗೂ ಕಡಿವಾಣ ಹಾಕಲಾಗಿದೆ.
ಸಾರ್ವಜನಿಕರು 4000 ಚ.ಅಡಿವರೆಗಿನ (50/80) ವಿಸ್ತೀರ್ಣಗಳಲ್ಲಿ4 ಅಂತಸ್ತುಗಳವರೆಗೆ ವಸತಿ ಕಟ್ಟಡ ನಿರ್ಮಿಸಲು ನಕ್ಷೆ ಮಂಜೂರಾತಿಯನ್ನು ಸಂಪೂರ್ಣವಾಗಿ ಆನ್ಲೈನ್ ಮೂಲಕ ಪಡೆಯಬಹುದಾಗಿದೆ. ನೋಂದಾಯಿತ ವಾಸ್ತುಶಿಲ್ಪಿಗಳ ಮೂಲಕ ಕಟ್ಟಡ ನಕ್ಷೆ ಕೋರಿ ಅರ್ಜಿ ಸಲ್ಲಿಸಬೇಕು. ಅದು ನಗರ ಯೋಜನಾ ನಿಯಮಗಳಿಗೆ ಅನುಗುಣವಾಗಿದ್ದರೆ, ಸ್ವಯಂಚಾಲಿತವಾಗಿ 30 ನಿಮಿಷಗಳೊಳಗೆ ಕಟ್ಟಡ ನಕ್ಷೆ ಮಂಜೂರಾತಿ ದೊರೆಯಲಿದೆ.
ನಂಬಿಕೆ ನಕ್ಷೆ 1.0 ವ್ಯವಸ್ಥೆಯನ್ನು 2024ರ ಮಾ. 11ರಂದು ಉಪ ಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಲೋಕಾರ್ಪಣೆಗೊಳಿಸಿದ್ದರು. ಈ ವ್ಯವಸ್ಥೆಯಲ್ಲಿನಿವೇಶನದ ದಾಖಲೆಗಳೊಂದಿಗೆ ಕಟ್ಟಡ ನಕ್ಷೆ, ಸ್ಥಳ ಪರಿಶೀಲನೆ, ನಿಗದಿತ ಪ್ರಮಾಣಪತ್ರಗಳನ್ನು ನೋಂದಾಯಿತ ಎಂಜಿನಿಯರ್/ಆರ್ಕಿಟೆಕ್ಟ್ಗಳ ಮೂಲಕ ಆನ್ಲೈನ್ನಲ್ಲಿಅಪ್ಲೋಡ್ ಮಾಡಬೇಕಿತ್ತು. ಅಂದೇ ಕರಡು ನಕ್ಷೆ ಮಂಜೂರಾತಿ ನೀಡಿ, 15 ದಿನಗಳೊಳಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಂತಿಮ ನಕ್ಷೆ ಮಂಜೂರಾತಿ ನೀಡುತ್ತಿದ್ದರು. ಈಗ 2.0 ವ್ಯವಸ್ಥೆಯಲ್ಲಿಅಧಿಕಾರಿಗಳ ಪರಿಶೀಲನೆ ಮತ್ತು ಅನುಮೋದನೆ ಹಂತವನ್ನು ಕೈಬಿಡಲಾಗಿದೆ. ಇದರಿಂದ ಮಾನವನ ಹಸ್ತಕ್ಷೇಪವಿಲ್ಲದೆ 4000 ಚ.ಅಡಿವರೆಗಿನ ವಿಸ್ತೀರ್ಣದ ನಿವೇಶನಗಳಲ್ಲಿ4 ಅಂತಸ್ತಿನ ವಸತಿ ಕಟ್ಟಡ ನಿರ್ಮಾಣಕ್ಕೆ ಆರ್ಕಿಟೆಕ್ಟ್ ಅಥವಾ ಎಂಜಿನಿಯರ್ಗಳ ಮೂಲಕವೇ ನಕ್ಷೆ ಮಂಜೂರಾತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ನಂಬಿಕೆ ನಕ್ಷೆ 2.0 ತಂತ್ರಾಂಶವನ್ನು ಶನಿವಾರ ವಿಕಾಸಸೌಧದಲ್ಲಿಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ”ಜನರಿಗೆ ಸರಳ, ವೇಗದ ಹಾಗೂ ಪಾರದರ್ಶಕ ಆಡಳಿತ ಒದಗಿಸುವ ಉದ್ದೇಶದಿಂದ ಕಟ್ಟಡ ನಕ್ಷೆ ಮಂಜೂರಾತಿ ಪ್ರಕ್ರಿಯೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಕಟ್ಟಡ ನಕ್ಷೆ ಮಂಜೂರಾತಿಗಾಗಿ ದಾಖಲೆಗಳನ್ನು ಆನ್ಲೈನ್ನಲ್ಲಿಅಪ್ಲೋಡ್ ಮಾಡುವ ನಂಬಿಕೆ ನಕ್ಷೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಈ ವ್ಯವಸ್ಥೆಯ ಅನುಷ್ಠಾನದ ನಂತರವೂ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿ, ಸಾರ್ವಜನಿಕರಿಗೆ ವೇಗವಾಗಿ ಸೇವೆ ಒದಗಿಸುವ ಅಗತ್ಯವನ್ನು ಮನಗಂಡು ‘ನಂಬಿಕೆ ನಕ್ಷೆ 2.0’ ವ್ಯವಸ್ಥೆಯನ್ನು ರೂಪಿಸಲಾಗಿದೆ,” ಎಂದು ಹೇಳಿದರು.
ಖಾತಾ ದಾಖಲೆಗಳ ಅಪ್ಲೋಡ್ ಅಗತ್ಯವಿಲ್ಲ
‘ನಂಬಿಕೆ ನಕ್ಷೆ 2.0’ ವ್ಯವಸ್ಥೆಯಲ್ಲಿಸಾರ್ವಜನಿಕರು ಖಾತಾ ದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ಪ್ರತ್ಯೇಕವಾಗಿ ಅಪ್ಲೋಡ್ ಮಾಡುವ ಅಗತ್ಯವಿಲ್ಲ. ಇ-ಖಾತಾ ಸಂಖ್ಯೆಯನ್ನು ನಮೂದಿಸಿದ ಕೂಡಲೇ ಸಂಬಂಧಿತ ಆಸ್ತಿಯ ಮೂಲ ಮಾಲೀಕತ್ವದ ಮಾಹಿತಿಯನ್ನು ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಪಡೆದುಕೊಳ್ಳಲಿದೆ.
ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಕಡಿವಾಣ
ಕಟ್ಟಡ ನಕ್ಷೆ ಮಂಜೂರಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್ಲೈನ್ ಹಾಗೂ ಸ್ವಯಂಚಾಲಿತಗೊಳಿಸುವ ಮೂಲಕ ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಲಾಗಿದೆ. ಸಾರ್ವಜನಿಕರ ಅಮಾಯಕತೆಯನ್ನು ದುರುಪಯೋಗಪಡಿಸಿಕೊಂಡು ವಂಚನೆ ಅಥವಾ ಶೋಷಣೆ ನಡೆಯದಂತೆ ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತ ವ್ಯವಸ್ಥೆಯನ್ನು ರೂಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಈ ಹಿಂದೆ ಕಟ್ಟಡ ನಕ್ಷೆ ಮಂಜೂರಾತಿಗೆ 2 ರಿಂದ 3 ತಿಂಗಳವರೆಗೆ ಸಮಯ ಬೇಕಾಗುತ್ತಿತ್ತು. ಇದೀಗ ನಿಯಮಾನುಸಾರ ಸಲ್ಲಿಕೆಯಾಗುವ ಕಟ್ಟಡ ನಕ್ಷೆಗಳಿಗೆ ಸುಮಾರು 30 ನಿಮಿಷಗಳಲ್ಲೇ ಮಂಜೂರಾತಿ ದೊರೆಯಲಿದೆ.
ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ
‘ನಂಬಿಕೆ ನಕ್ಷೆ 2.0’ ವ್ಯವಸ್ಥೆಯನ್ನು ಮೊದಲ ಹಂತದಲ್ಲಿಆಯ್ದ ಪ್ರದೇಶದಲ್ಲಿಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ. ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ, ಅಗತ್ಯ ಸುಧಾರಣೆಗಳನ್ನು ಕೈಗೊಂಡ ನಂತರ ಜಿಬಿಎ ವ್ಯಾಪ್ತಿಯ ಇತರ ಪ್ರದೇಶಗಳಿಗೂ ವಿಸ್ತರಿಸಲಾಗುವುದು. ನಗರ ಯೋಜನಾ ನಿಯಮಗಳನ್ನು ಪಾಲಿಸಿ ಕಟ್ಟಡ ನಿರ್ಮಾಣ ಮಾಡಲು ಬಯಸುವ ನಾಗರಿಕರಿಗೆ ಪ್ರಕ್ರಿಯೆಯನ್ನು ಸುಲಭ, ವೇಗದ ಹಾಗೂ ಪಾರದರ್ಶಕಗೊಳಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ. ಅಲ್ಲದೇ, ಮುಂದಿನ ಹಂತದಲ್ಲಿವಾಣಿಜ್ಯ ಕಟ್ಟಡಗಳು ಹಾಗೂ ದೊಡ್ಡ ವಿಸ್ತೀರ್ಣದ ಕಟ್ಟಡಗಳಿಗೂ ಸರಳೀಕೃತ ಹಾಗೂ ತಂತ್ರಜ್ಞಾನ ಆಧಾರಿತ ಮಂಜೂರಾತಿ ವ್ಯವಸ್ಥೆಯನ್ನು ರೂಪಿಸುವ ಕುರಿತು ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ.
ದುರುಪಯೋಗಕ್ಕೆ ದುಬಾರಿ ಶಿಕ್ಷೆ
ಜನರು ಹಾಗೂ ನೋಂದಾಯಿತ ಆರ್ಕಿಟೆಕ್ಟ್ಗಳ ಮೇಲೆ ನಂಬಿಕೆ ಇಟ್ಟು, ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ವ್ಯವಸ್ಥೆಯ ದುರುಪಯೋಗ ಕಂಡುಬಂದಲ್ಲಿಅಂತಹವರರಿಗೆ ದುಬಾರಿ ಶಿಕ್ಷೆ ವಿಧಿಸಲಾಗುವುದು,” ಎಂದು ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದರು.
ನಕ್ಷೆ ಮಂಜೂರಾತಿ ಪಡೆಯುವುದು ಹೇಗೆ?
- ನಂಬಿಕೆ ನಕ್ಷೆ 2.0 ವ್ಯವಸ್ಥೆಯಲ್ಲಿಮಾಲೀಕರು ನೋಂದಾಯಿತ ಆರ್ಕಿಟೆಕ್ಟ್, ಎಂಜಿನಿಯರ್ಗಳ ಮೂಲಕ ಕೆಲ ಪ್ರಮಾಣಪತ್ರಗಳನ್ನು ಅಪ್ಲೋಡ್ ಮಾಡಬೇಕು.
- ನಿವೇಶನದ ಇ-ಖಾತಾ ಸಂಖ್ಯೆ, ಜಿಯೋ ಲೋಕೇಶನ್ ಅನ್ನು ಒದಗಿಸಬೇಕು.
- ನಿವೇಶನದ ಮಾಲೀಕತ್ವ, ಖಾತಾ ದಾಖಲಾತಿ, ತೆರಿಗೆ ಪಾವತಿಗೆ ಸಂಬಂಧಿಸಿದ ದಾಖಲೆಗಳನ್ನು ತಂತ್ರಾಂಶವೇ ಇ-ಸ್ವತ್ತು ತಂತ್ರಾಂಶದಲ್ಲಿಪರಿಶೀಲಿಸಲಿದೆ.
- ಮಾಸ್ಟರ್ ಪ್ಲಾನ್ನಂತೆ ನಿವೇಶನದ ಭೂ ಉಪಯೋಗ, ರಸ್ತೆಯ ಅಗಲ, ಮಳೆ ನೀರು ಕಾಲುವೆ, ಬಫರ್ಗಳನ್ನು ಕೆಎಸ್ಆರ್ಎಸಿ ತಂತ್ರಾಂಶದಲ್ಲಿಪರಿಶೀಲಿಸಲಾಗುತ್ತದೆ.
- ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ತಂತ್ರಾಂಶವು ಸೂಚಿಸಿದ ಶುಲ್ಕ ಪಾವತಿಸಿದರೆ, 15 ರಿಂದ 30 ನಿಮಿಷದಲ್ಲಿ ನಕ್ಷೆ ಮಂಜೂರಾತಿ ದೊರಕುತ್ತದೆ.

