Greater Bengaluru News9 : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ), ಬೆಂಗಳೂರು ಉತ್ತರ ತಾಲೂಕು ಸಮಿತಿ, ಹೌಸಿಂಗ್ ಬೋರ್ಡ್, ಬೆಂಗಳೂರು-79 ಇದರ ವತಿಯಿಂದ 31ನೇ ವರ್ಷದ ಅದ್ಧೂರಿ ವಾರ್ಷಿಕೋತ್ಸವ ಹಾಗೂ ಶ್ರೀ ವಿನಾಯಕ ಪ್ರತಿಷ್ಠಾಪನಾ ಸಮಾರಂಭವನ್ನು ಅಕ್ಟೋಬರ್ 13, 2026ರ ಮಂಗಳವಾರದಂದು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 8.30 ಗಂಟೆಗೆ ವಿಧ್ಯುಕ್ತವಾಗಿ “ಶ್ರೀ ವಿನಾಯಕ ಪ್ರತಿಷ್ಠಾಪನೆ” ನೆರವೇರಲಿದ್ದು, ನಂತರ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಇದನ್ನು ಮುಂದುವರಿಸಿ ಮಧ್ಯಾಹ್ನ 12.00 ಗಂಟೆಗೆ ಭಕ್ತರಿಗಾಗಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿದ್ಯುತ್ ಗುತ್ತಿಗೆದಾರರ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ, ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆ (FORTIS HOSPITAL, Nagarbhavi) ಇವರ ಸಹಯೋಗದೊಂದಿಗೆ ವಿಶೇಷ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಸಂಘಟಿಸಲಾಗಿದೆ.
ಈ ಆರೋಗ್ಯ ಶಿಬಿರದಲ್ಲಿ ಬಿ.ಪಿ., ಜಿ.ಆರ್.ಬಿ.ಎಸ್. (ರಕ್ತದಲ್ಲಿನ ಸಕ್ಕರೆ ಮಟ್ಟ), ದೇಹದ ತೂಕ ತಪಾಸಣೆ, ಇಸಿಜಿ (ECG), ದಂತ ತಪಾಸಣೆ ಹಾಗೂ ಕಣ್ಣಿನ ತಪಾಸಣೆ ಮುಂತಾದ ಸೌಲಭ್ಯಗಳು ಲಭ್ಯವಿರಲಿದ್ದು, ಸಂಘದ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ. ಅಂದು ಸಂಜೆ 4.30ಕ್ಕೆ ಶ್ರೀ ವಿನಾಯಕನ ವಿಸರ್ಜನಾ ಕಾರ್ಯಕ್ರಮದೊಂದಿಗೆ ಸಮಾರಂಭವು ಸಂಪೂರ್ಣಗೊಳ್ಳಲಿದೆ.
ಈ ಸಮಾರಂಭಕ್ಕೆ ಗೋವಿದಂರಾಜನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಪ್ರಿಯಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಲ್ಲದೆ, ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ರಮೇಶ್ ಅವರು ಹಾಗೂ ಕೇಂದ್ರ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.


