ChatGPT Image Oct 3, 2026, 08_41_04 PM-modified
GREATER BENGALURU NEWS 9
BESCOM Bill

Greater Bengaluru News9: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (Bescom) ತನ್ನ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದು, ಜುಲೈ ತಿಂಗಳಿನಿಂದ ಗೃಹ ಬಳಕೆದಾರರಿಗೆ ಮನೆ ಬಾಗಿಲಿಗೆ ಫಿಸಿಕಲ್ ವಿದ್ಯುತ್ ಬಿಲ್ ವಿತರಣೆ ಮಾಡುವುದಿಲ್ಲ. ಬದಲಾಗಿ ಗ್ರಾಹಕರಿಗೆ SMS ಹಾಗೂ ಇ-ಮೇಲ್ ಮೂಲಕವೇ ಸರಾಸರಿ ವಿದ್ಯುತ್ ಬಿಲ್ ರವಾನಿಸಲು ಮುಂದಾಗಿದೆ.

ಗೃಹ ಜ್ಯೋತಿ ಯೋಜನೆಯಡಿ ಮನೆ ಮನೆಗೆ ತೆರಳಿ ಗ್ರಾಹಕರ ವಿವರಗಳ ಪರಿಶೀಲನೆ ಕಾರ್ಯದಲ್ಲಿ ಮೀಟರ್ ರೀಡರ್‌ಗಳು ನಿರತರಾಗಿರುವ ಹಿನ್ನೆಲೆಯಲ್ಲಿ ಈ ತಾತ್ಕಾಲಿಕ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಸ್ಕಾಂ ಪ್ರಕಟಣೆ ಪ್ರಕಾರ, ಜುಲೈ ತಿಂಗಳಿಗೆ ಗ್ರಾಹಕರಿಗೆ ಸರಾಸರಿ (Average) ಬಿಲ್ ಸಿದ್ಧಪಡಿಸಿ ಕಳುಹಿಸಲಾಗುತ್ತದೆ. ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆಯನ್ನು ಆಧರಿಸಿ ಬಿಲ್ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ. ನಂತರದ ಬಿಲ್ಲಿಂಗ್ ಚಕ್ರಗಳಲ್ಲಿ ನೈಜ ಮೀಟರ್ ರೀಡಿಂಗ್ ಆಧರಿಸಿ ಹೆಚ್ಚುವರಿ ಅಥವಾ ಕಡಿಮೆ ಮೊತ್ತವನ್ನು ಸರಿಹೊಂದಿಸಲಾಗುತ್ತದೆ.

ಈ ಲಿಂಗ್​ ಕ್ಲಿಕ್​ ಮಾಡಿ ನಮ್ಮ ವಾಟ್ಸ್​ಆ್ಯಪ್​ ಗ್ರೂಪ್​ಗೆ ಜಾಯಿನ್​ ಆಗಿ: ಬಿಬಿಎಂಪಿ ನ್ಯೂಸ್​9

ಜುಲೈ ತಿಂಗಳಲ್ಲಿ ಮೀಟರ್ ರೀಡರ್‌ಗಳು ನಿಯಮಿತವಾಗಿ ಮನೆಗಳಿಗೆ ಭೇಟಿ ನೀಡಿ ವಿದ್ಯುತ್ ಮೀಟರ್ ಪರಿಶೀಲನೆ ನಡೆಸುತ್ತಿಲ್ಲ. ಕಾರಣ, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದ ಗ್ರಾಹಕರ ವಿವರಗಳನ್ನು ಮನೆ ಮನೆಗೆ ತೆರಳಿ ಪರಿಶೀಲಿಸುವ ಕಾರ್ಯಕ್ಕೆ ಅವರನ್ನು ನಿಯೋಜಿಸಲಾಗಿದೆ.

ಗೃಹ ಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯೂನಿಟ್‌ವರೆಗೆ ವಿದ್ಯುತ್ ಬಳಕೆ ಮಾಡುವ ಅರ್ಹ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಮಾಹಿತಿ ಪರಿಶೀಲನೆ ಕಾರ್ಯ ನಡೆಯುತ್ತಿರುವುದರಿಂದ ಜುಲೈ ತಿಂಗಳ ಮೀಟರ್ ರೀಡಿಂಗ್ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದರೆ, ಎಲ್ಲಾ ವರ್ಗದ ಗ್ರಾಹಕರಿಗೂ ಈ ವ್ಯವಸ್ಥೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಹೈ ಟೆನ್ಷನ್ (HT) ಗ್ರಾಹಕರು, 40 ಎಚ್‌ಪಿ ಮತ್ತು ಅದಕ್ಕಿಂತ ಹೆಚ್ಚಿನ ಲೋ ಟೆನ್ಷನ್ (LT) ಸಂಪರ್ಕ ಹೊಂದಿರುವ ಗ್ರಾಹಕರು, ಸೌರ ಮೇಲ್ಛಾವಣಿ (Solar Rooftop) ವಿದ್ಯುತ್ ಬಳಕೆದಾರರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕರು ಎಂದಿನಂತೆ ಜುಲೈ ತಿಂಗಳ ವಿದ್ಯುತ್ ಬಿಲ್‌ಗಳನ್ನು ಪಡೆಯಲಿದ್ದಾರೆ.

ಬೆಸ್ಕಾಂ, ಎಸ್‌ಎಂಎಸ್‌ ಅಥವಾ ಇ-ಮೇಲ್ ಮೂಲಕ ಬರುವ ಸರಾಸರಿ ಬಿಲ್‌ಗಳನ್ನು ಗ್ರಾಹಕರು ನಿಗದಿತ ಅವಧಿಯೊಳಗೆ ಪಾವತಿಸುವಂತೆ ಮನವಿ ಮಾಡಿದೆ. ಬಳಿಕದ ಬಿಲ್‌ನಲ್ಲಿ ನೈಜ ಬಳಕೆಯ ಆಧಾರದ ಮೇಲೆ ವ್ಯತ್ಯಾಸದ ಮೊತ್ತವನ್ನು ಸರಿಹೊಂದಿಸಲಾಗುವುದು ಎಂದು ತಿಳಿಸಿದೆ.

Leave a Reply

Your email address will not be published. Required fields are marked *