ChatGPT Image Oct 3, 2026, 08_41_04 PM-modified
GREATER BENGALURU NEWS 9
Anbu kumar

Greater Bengaluru News9: ಕರ್ನಾಟಕದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದ ‘ವಿಶೇಷ ತೀವ್ರ ಪರಿಷ್ಕರಣೆ’ (Special Intensive Revision – SIR) ಪ್ರಕ್ರಿಯೆಯು ಮುಕ್ತಾಯಗೊಂಡಿದ್ದು, ಆಯೋಗವು ರಾಜ್ಯದ ನವೀಕೃತ ಅಂತಿಮ ಮತದಾರರ ಪಟ್ಟಿಯನ್ನು ಇಂದು ( ಅ.27) ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಸಂಬಂಧ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ವಿ. ಅನ್ಬುಕುಮಾರ್ ( CEO anbu kumar ) ಅವರು, ಪರಿಷ್ಕೃತ ಮಾಹಿತಿಯ ಪ್ರಕಾರ ಪ್ರಸ್ತುತ ರಾಜ್ಯದಲ್ಲಿ ಒಟ್ಟು 4,54,55,689 ನೊಂದಾಯಿತ ಮತದಾರರಿದ್ದಾರೆ ಎಂದು ತಿಳಿಸಿದ್ದಾರೆ.

ಹೊಸ ಪಟ್ಟಿಯ ಅಂಕಿ-ಅಂಶಗಳ ಪ್ರಕಾರ, ರಾಜ್ಯದ ಒಟ್ಟು ಮತದಾರರಲ್ಲಿ ಮಹಿಳೆಯರೇ ಮೇಲುಗೈ ಸಾಧಿಸಿದ್ದು, ಅವರ ಸಂಖ್ಯೆ 2,29,12,355 ತಲುಪಿದೆ. ಇನ್ನು ಪುರುಷ ಮತದಾರರ ಸಂಖ್ಯೆ 2,24,40,493 ಆಗಿದ್ದರೆ, ತೃತೀಯ ಲಿಂಗಿ ಸಮುದಾಯದಿಂದ ಒಟ್ಟು 2,841 ಮತದಾರರು ಪಟ್ಟಿಯಲ್ಲಿ ನೊಂದಾಯಿಸಿಕೊಂಡಿದ್ದಾರೆ. ಮತದಾರರ ವಿವರಗಳನ್ನು ಅತ್ಯಂತ ನಿಖರವಾಗಿ ಪರಿಶೀಲಿಸಿ ಈ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ತೀವ್ರ ಪರಿಷ್ಕರಣಾ ಅಭಿಯಾನದ ಸಮಯದಲ್ಲಿ ಬೃಹತ್ ಮಟ್ಟದ ಶುದ್ಧೀಕರಣ ಪ್ರಕ್ರಿಯೆ ನಡೆದಿದ್ದು, ನಕಲಿ, ಅನರ್ಹ ಹಾಗೂ ದ್ವಿಪ್ರತಿಯಾಗಿದ್ದ ಒಟ್ಟು 99,76,625 ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಎಸ್‌ಐಆರ್ (SIR) ಪ್ರಕ್ರಿಯೆ ಆರಂಭಗೊಳ್ಳುವ ಮುನ್ನ ರಾಜ್ಯದಲ್ಲಿದ್ದ ಒಟ್ಟು ಮತದಾರರ ಸಂಖ್ಯೆ 5,54,32,814 ಆಗಿತ್ತು. ಇನ್ನು 2016ರ ಆಗಸ್ಟ್‌ನಲ್ಲಿ ಹೊರಡಿಸಲಾಗಿದ್ದ ಕರಡು ಮತದಾರರ ಪಟ್ಟಿಯ ವೇಳೆಗೆ ರಾಜ್ಯದಲ್ಲಿದ್ದ ಮತದಾರರ ಪ್ರಮಾಜ 4,46,35,975 ಆಗಿತ್ತು ಎಂಬುದನ್ನು ಈ ವೇಳೆ ಸ್ಮರಿಸಬಹುದು.

ಮತದಾರರ ಅನುಕೂಲ ಹಾಗೂ ಮತದಾನ ಪ್ರಕ್ರಿಯೆಯನ್ನು ಸುಲಭಗೊಳಿಸುವ ದೃಷ್ಟಿಯಿಂದ ರಾಜ್ಯಾದ್ಯಂತ ಮತಗಟ್ಟೆಗಳ ಸಂಖ್ಯೆಯಲ್ಲೂ ಹೆಚ್ಚಳ ಮಾಡಲಾಗಿದೆ. ಹೊಸದಾಗಿ 390 ಮತಗಟ್ಟೆಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಇದರೊಂದಿಗೆ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಒಟ್ಟು ಮತಗಟ್ಟೆಗಳ ಸಂಖ್ಯೆ 41,888ಕ್ಕೆ ಏರಿಕೆಯಾಗಿದೆ. ಮತದಾರರು ಅಧಿಕೃತ ಜಾಲತಾಣಗಳಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಳ್ಳಬಹುದು ಎಂದು ಚುನಾವಣಾ ಆಯೋಗ ವಿನಂತಿಸಿದೆ.

ಅಲ್ಲದೆ, ತಪ್ಪಾಗಿ ಅಥವಾ ತಾಂತ್ರಿಕ ಕಾರಣಗಳಿಂದ ಮತದಾರರ ಪಟ್ಟಿಯಿಂದ ಕೈಬಿಟ್ಟುಹೋದ ಯಾವುದೇ ಅರ್ಹ ಮತದಾರರ ಹೆಸರುಗಳನ್ನು ಮರುಪರಿಶೀಲಿಸಿ, ಮತ್ತೊಮ್ಮೆ ಪಟ್ಟಿಗೆ ಸೇರ್ಪಡೆಗೊಳಿಸಲು ವಿಶೇಷ ಅವಕಾಶ ಕಲ್ಪಿಸಲಾಗುವುದು ಎಂದು ಆಯೋಗ ಭರವಸೆ ನೀಡಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗದೆ, ತಮ್ಮ ಹೆಸರುಗಳು ಮತದಾರರ ಪಟ್ಟಿಯಲ್ಲಿ ಸರಿಯಾಗಿವೆಯಾ ಎಂಬುದನ್ನು ಪರಿಶೀಲಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಾಪಾಡಲು ಆಯೋಗವು ಸದಾ ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *