Greater Bengaluru News9 : ಮೋಟಾರು ವಾಹನಗಳು ಮಕ್ಕಳ ಆಟಿಕೆಗಳಲ್ಲ, ಸಾರ್ವಜನಿಕ ರಸ್ತೆಗಳು ಆಟದ ಮೈದಾನಗಳಲ್ಲ ಎಂದು ಕರ್ನಾಟಕ ಹೈಕೋರ್ಟ್ ಪೋಷಕರಿಗೆ ಎಚ್ಚರಿಕೆ ನೀಡಿದೆ. ಮೈಸೂರಿನಲ್ಲಿ 14 ವರ್ಷದ ಬಾಲಕ ಕಾರು ಚಲಾಯಿಸಿ ಒಂದೇ ಕುಟುಂಬದ ಮೂವರ ಸಾವಿಗೆ ಕಾರಣವಾದ ಪ್ರಕರಣದಲ್ಲಿ,
ಆರೋಪದಿಂದ ಮುಕ್ತಗೊಳಿಸುವಂತೆ ಬಾಲಕನ ತಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಅಲ್ಲದೆ, ತಂದೆಯ ವಿರುದ್ಧದ ಉದ್ದೇಶಪೂರ್ವಕವಲ್ಲದ ನರಹತ್ಯೆ ಆರೋಪದ ವಿಚಾರಣೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.
2020ರ ಡಿಸೆಂಬರ್‌ನಲ್ಲಿ ಹಳೆಯ ಬೆಂಗಳೂರು–ಮೈಸೂರು ರಸ್ತೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿತ್ತು. 14 ವರ್ಷದ ಬಾಲಕ ಚಲಾಯಿಸುತ್ತಿದ್ದ ವೋಕ್ಸ್‌ವ್ಯಾಗನ್ ವೆಂಟೋ ಕಾರು ಅಪಘಾತಕ್ಕೀಡಾಗಿ ದಂಪತಿ ಹಾಗೂ ಅವರ ಐದು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿದ್ದರು.
ಅಪಘಾತಕ್ಕೆ ಕಾರಣವಾದ ಕಾರನ್ನು ಅರ್ಜಿದಾರ ನದೀಮ್-ಉರ್-ರೆಹಮಾನ್ ಅವರಿಗೆ ಅವರ ಉದ್ಯೋಗದಾತರು ನೀಡಿದ್ದರು. ಆದರೆ ತನ್ನ ಗಮನಕ್ಕೆ ಬಾರದಂತೆ ಮಗ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ನದೀಮ್ ವಾದಿಸಿದ್ದರು. ಹೀಗಾಗಿ ತಮ್ಮ ವಿರುದ್ಧದ ಉದ್ದೇಶಪೂರ್ವಕವಲ್ಲದ ನರಹತ್ಯೆ ಆರೋಪವನ್ನು ಕೈಬಿಟ್ಟು, ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಆದರೆ ಈ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಮಕ್ಕಳ ಅಪ್ರಾಪ್ತತೆಯನ್ನು ಮುಂದಿಟ್ಟುಕೊಂಡು ಪೋಷಕರು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಅರ್ಜಿದಾರರೇ ಮಗನಿಗೆ ವಾಹನದ ಕೀ ನೀಡಿರುವ ಕುರಿತು ದೋಷಾರೋಪ ಪಟ್ಟಿಯಲ್ಲಿ ಅಂಶಗಳಿವೆ ಎಂದು ನ್ಯಾಯಾಲಯ ಗಮನಿಸಿದೆ. ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡಿದ ಪರಿಣಾಮ ಸಂಭವಿಸುವ ದುರಂತಗಳಿಗೆ ಪೋಷಕರ ಹೊಣೆಗಾರಿಕೆಯನ್ನೂ ಪರಿಶೀಲಿಸಬೇಕಾಗುತ್ತದೆ ಎಂದು ತಿಳಿಸಿದೆ.
ಈ ಪ್ರಕರಣದಲ್ಲಿ ತಂದೆಯ ನಡೆ ಕೇವಲ ನಿರ್ಲಕ್ಷ್ಯವೇ ಅಥವಾ ಗಂಭೀರ ಸ್ವರೂಪದ ಅಪರಾಧವೇ ಎಂಬುದನ್ನು ವಿಚಾರಣೆಯ ಹಂತದಲ್ಲಿ ನಿರ್ಧರಿಸಲಾಗುವುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದೇ ವೇಳೆ ರಾಜ್ಯದಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತಗಳಿಗೆ ಕಾರಣವಾಗುತ್ತಿರುವ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. 2025–26ರ ಅವಧಿಯಲ್ಲಿ ಕರ್ನಾಟಕದಲ್ಲಿ ಅಪ್ರಾಪ್ತರಿಂದ 751 ಅಪಘಾತಗಳು ಸಂಭವಿಸಿವೆ ಎಂಬ ಅಂಕಿಅಂಶವನ್ನು ಉಲ್ಲೇಖಿಸಿದೆ. ಮಕ್ಕಳಿಗೆ ವಾಹನದ ಕೀ ನೀಡುವ ಮುನ್ನ ಪೋಷಕರು ಅದರ ಗಂಭೀರ ಪರಿಣಾಮಗಳನ್ನು ಅರಿತುಕೊಳ್ಳಬೇಕು ಎಂಬ ಸಂದೇಶವನ್ನು ಹೈಕೋರ್ಟ್ ನೀಡಿದೆ.

