Greater Bengaluru News9 : ಹಾಸನಾಂಬ ದೇವಿ ದರ್ಶನಕ್ಕೆ ಬಂದಿದ್ದ ಮಹಿಳೆಯೊಬ್ಬರು ಕಳೆದುಕೊಂಡಿದ್ದ 3 ಲಕ್ಷ ರೂ. ಮೌಲ್ಯದ ಚಿನ್ನದ ಬಳೆಯನ್ನು ಕಂದಾಯ ಇಲಾಖೆ ಸಿಬ್ಬಂದಿ ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ರಾಮನಗರದಿಂದ ಹಾಸನಾಂಬ ದೇವಿ ದರ್ಶನಕ್ಕೆ ಬಂದಿದ್ದ ರಮ್ಯಾ ಎಂಬ ಮಹಿಳೆ 1,000 ರೂಪಾಯಿ ವಿಶೇಷ ದರ್ಶನದ ಟಿಕೆಟ್ ಪಡೆದು ಸಹೋದರಿಯೊಂದಿಗೆ ದೇವಾಲಯಕ್ಕೆ ಆಗಮಿಸಿದ್ದರು. ದೇವಿಯ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ತೆರಳುತ್ತಿದ್ದ ವೇಳೆ ಅವರ ಕೈಯಲ್ಲಿದ್ದ ಚಿನ್ನದ ಬಳೆ ಕಳಚಿ ಬಿದ್ದಿತ್ತು.
ಸುಮಾರು 30 ಗ್ರಾಂ ತೂಕದ, 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಳೆ ಕಳೆದುಕೊಂಡಿದ್ದರಿಂದ ರಮ್ಯಾ ದೇವಾಲಯದ ಆವರಣದಲ್ಲಿ ಹುಡುಕಾಟ ನಡೆಸಿದ್ದರು. ಆದರೆ, ಬಳೆ ಪತ್ತೆಯಾಗಿರಲಿಲ್ಲ. ಇದೇ ವೇಳೆ ಕಂದಾಯ ಇಲಾಖೆ ಸಿಬ್ಬಂದಿಗೆ ಚಿನ್ನದ ಬಳೆ ಸಿಕ್ಕಿತ್ತು. ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳದೆ, ದೇವಾಲಯದಲ್ಲಿ ಅನೌನ್ಸ್ ಮಾಡುತ್ತಿದ್ದ ಲಕ್ಷ್ಮೀನಾರಾಯಣ ಅವರಿಗೆ ಸಿಬ್ಬಂದಿ ಹಸ್ತಾಂತರಿಸಿದ್ದರು.

