ChatGPT Image Oct 3, 2026, 08_41_04 PM-modified
GREATER BENGALURU NEWS 9
hasanamb1

Greater Bengaluru News9 : ಹಾಸನದ ಅಧಿದೇವತೆ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದ 8ನೇ ದಿನವಾದ ಶುಕ್ರವಾರ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು, ಸಾಗರೋಪಾದಿಯಲ್ಲಿ ಭಕ್ತರ ಜೊತೆಗೆ ಗಣ್ಯಾತಿಗಣ್ಯರು ಆಗಮಿಸಿ ದೇವಿಯ ದರ್ಶನ ಪಡೆದರು.

ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬ ದೇವಿ ದರ್ಶನ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವ-2026ಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ. ದೇವಿಯ ದರ್ಶನ ಆರಂಭವಾದ ಕೇವಲ ಎಂಟು ದಿನಗಳಲ್ಲಿ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ ಬರೋಬ್ಬರಿ 12.68 ಕೋಟಿ ರೂಪಾಯಿಗೂ ಅಧಿಕ ಆದಾಯ ಹರಿದುಬಂದಿದೆ.

12 ಕೋಟಿ ಆದಾಯ: ಹಾಸನಾಂಬ ದೇವಸ್ಥಾನದ ಬಾಗಿಲು ಅ.29ರಂದು ತೆರೆದಿದ್ದು, ಅಂದಿನಿಂದ ಇಂದಿನ ತನಕ 300 ಮತ್ತು 1000 ರೂ. ಮುಖಬೆಲೆಯ ಟಿಕೆಟ್​ ಮಾರಾಟದಿಂದ, 12 ಕೋಟಿ 67 ಲಕ್ಷದ 90 ಸಾವಿರದ 720ರೂ. ಆದಾಯ ಸಂಗ್ರಹವಾಗಿದೆ.

ದೇವಾಲಯದ ಆಡಳಿತ ಮಂಡಳಿ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯಂತೆ, ದಿನಾಂಕ 29-10-2026 ರಿಂದ 06-11-2026 ರ ಸಂಜೆ 5:30 ರವರೆಗೆ ಭೌತಿಕ ಟಿಕೆಟ್ ಹಾಗೂ ಲಾಡು ಮಾರಾಟದಿಂದ ಒಟ್ಟು ₹12,67,90,720 (ಹನ್ನೆರಡು ಕೋಟಿ ಅರವತ್ತೇಳು ಲಕ್ಷದ ತೊಂಬತ್ತು ಸಾವಿರದ ಏಳುನೂರ ಇಪ್ಪತ್ತು ರೂಪಾಯಿ) ಮೊತ್ತ ಸಂಗ್ರಹವಾಗಿದೆ.

300 ರೂ. ಬೆಲೆಯ ಟಿಕೆಟ್​ನಿಂದ 3,95,20,200 ರೂ. ಮತ್ತು 1000 ರೂ. ಬೆಲೆಯ ಟಿಕೆಟ್​ನಿಂದ​ 7,87,98,000 ರೂ. ಹಾಗೂ ಲಾಡು ಮಾರಾಟದಿಂದ 84,72,520 ಕೋಟಿ ರೂ. ಆದಾಯ ಗಳಿಸಿದೆ.

ಒಟ್ಟಾರೆಯಾಗಿ ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ನೇರ ದರ್ಶನದ ಪಾಸ್‌ಗಳು ಹಾಗೂ ಪ್ರಸಾದ ಮಾರಾಟದಿಂದಲೇ ದೇವಾಲಯದ ಬೊಕ್ಕಸಕ್ಕೆ ದಾಖಲೆಯ ಆದಾಯ ಹರಿದುಬಂದಿದ್ದು, ವಾರಾಂತ್ಯ ಹಾಗೂ ಉಳಿದ ದಿನಗಳಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಒಟ್ಟು ಆದಾಯದಲ್ಲಿ ಶೇ. 65.59 ರಷ್ಟು ಪಾಲು (₹7.87 ಕೋಟಿ) ಕೇವಲ ₹1000 ಮುಖಬೆಲೆಯ ಟಿಕೆಟ್‌ಗಳಿಂದಲೇ ಬಂದಿದೆ. ಇದು ಶೀಘ್ರ ದರ್ಶನಕ್ಕೆ ಭಕ್ತರು ಹೆಚ್ಚಿನ ಆದ್ಯತೆ ನೀಡುತ್ತಿರುವುದನ್ನು ತೋರಿಸುತ್ತದೆ.

ಹಾಸನಾಂಬೆ ದೇವಿ ದರ್ಶನ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ: ಮತ್ತೊಂದೆಡೆ, ಹಾಸನಾಂಬೆ ದೇವಿ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಆಗಮಿಸಿದ್ದು, ದೇವಿಯ ದರ್ಶನ ಪಡೆದರು. ಹಾಸನ ಮಹಾನಗರ ಪಾಲಿಕೆ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಸನಾಂಬೆ ದೇವಿ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವವನ್ನು ಮೈಸೂರು ದಸರಾ ಮಾದರಿಯಲ್ಲಿ, ಅದಕ್ಕಿಂತಲೂ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡರು ಪ್ರಯತ್ನಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *