ChatGPT Image Oct 3, 2026, 08_41_04 PM-modified
GREATER BENGALURU NEWS 9
Fire NOC

Greater Bengaluru News9 : ಇನ್ನು ಮುಂದೆ 7 ಅಂತಸ್ತಿನವರೆಗೆ ಅಂದ್ರೆ 21 ರಿಂದ 24 ಮೀಟರ್ ಎತ್ತರದವರೆಗೆ ಇರುವ ಕಟ್ಟಡಗಳಿಗೆ ಅಗ್ನಿಶಾಮಕ ಇಲಾಖೆಯ ಎನ್‌ಒಸಿ ಪಡೆಯುವ ಅಗತ್ಯವಿರುವುದಿಲ್ಲ ಎಂದು ಸರ್ಕಾರ ಕರಡು ಅಧಿಸೂಚನೆಯನ್ನು ಹೊರಡಿಸಿದೆ.

ಮನೆ ನಿರ್ಮಿಸಲು ಸಿದ್ಧರಿರುವ ಜನಸಾಮಾನ್ಯರಿಗೆ, ಕಟ್ಟಡ ಮಾಲೀಕರಿಗೆ ಹಾಗೂ ರಿಯಲ್ ಎಸ್ಟೇಟ್ ಬಿಲ್ಡರ್‌ಗಳಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್​ ಕೊಟ್ಟಿದೆ. ರಾಜ್ಯದಲ್ಲಿ ಕಟ್ಟಡಗಳ ನಿರ್ಮಾಣ ಪ್ರಕ್ರಿಯೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ಮಹತ್ವದ ಕರಡು ಅಧಿಸೂಚನೆಯನ್ನು ಹೊರಡಿಸಿದೆ. 30 ದಿನಗಳ ಒಳಗಡೆ ಸಾರ್ವಜನಿಕರು ಸಲಹೆ ಮತ್ತು ಆಕ್ಷೇಪಣೆಗೆ ಅವಕಾಶ ಕೂಡ ಕಲ್ಪಿಸಲಾಗಿದೆ.

7 ಅಂತಸ್ಥಿನ ಕಟ್ಟಡಗಳಿಗೆ ಬೇಕಿಲ್ಲ ಫೈರ್ NOC
ರಾಜ್ಯ ಸರ್ಕಾರದ ಹೊಸ ಅಧಿಸೂಚನೆಯ ಪ್ರಕಾರ, ಇನ್ನು ಮುಂದೆ 7 ಅಂತಸ್ತಿನವರೆಗೆ ಅಂದ್ರೆ 21 ರಿಂದ 24 ಮೀಟರ್ ಎತ್ತರದವರೆಗೆ ಇರುವ ಕಟ್ಟಡಗಳಿಗೆ ಅಗ್ನಿಶಾಮಕ ಇಲಾಖೆಯ ಎನ್‌ಒಸಿ ಪಡೆಯುವ ಅಗತ್ಯವಿರುವುದಿಲ್ಲ ಎಂದು ಸರ್ಕಾರ ಕರಡು ಅಧಿಸೂಚನೆಯನ್ನು ಹೊರಡಿಸಿದೆ.

ಈ ಹಿಂದೆ 21 ಮೀಟರ್ ಎತ್ತರವಿರುವ ಕಟ್ಟಡಗಳನ್ನೂ ಸಹ ಅತಿ ಎತ್ತರದ ಕಟ್ಟಡಗಳು ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಈ ಮಿತಿಯನ್ನು 24 ಮೀಟರ್ ವರೆಗೆ ವಿಸ್ತರಿಸಲಾಗಿದೆ. ಅಂದರೆ, 24 ಮೀಟರ್ ವರೆಗೆ ಎತ್ತರವಿದ್ದರೂ ಸಹ ಆ ಕಟ್ಟಡಗಳನ್ನು ‘ಹೈ-ರೈಸ್’ ಎಂದು ಪರಿಗಣಿಸಲಾಗುವುದಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಒಂದು ವೇಳೆ ಕಟ್ಟಡದ ಎತ್ತರ 24 ಮೀಟರ್‌ಗಿಂತ ಹೆಚ್ಚಿದ್ದರೆ ಮಾತ್ರ ಅಂತಹ ಕಟ್ಟಡಗಳಿಗೆ ಫೈರ್ NOC ಕಡ್ಡಾಯವಾಗಿ ಬೇಕಾಗುತ್ತದೆ.

ಈ ಹಿಂದೆ 21 ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಎತ್ತರದ ಕಟ್ಟಡಗಳಿಗೆ ಅಗ್ನಿಶಾಮಕ ಇಲಾಖೆಯ ಎನ್‌ಒಸಿ ಪಡೆಯುವ ನಿಯಮ ಅನ್ವಯವಾಗುತ್ತಿತ್ತು. ಇದೀಗ ಈ ಮಿತಿಯನ್ನು 24 ಮೀಟರ್‌ಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದರಿಂದ ಸುಮಾರು 7 ಅಂತಸ್ತಿನ ಕೆಲವು ಕಟ್ಟಡಗಳು ಹೊಸ ಎತ್ತರದ ಮಿತಿಯೊಳಗೆ ಬರಬಹುದು. ಆದರೆ ಅಂತಸ್ತುಗಳ ಸಂಖ್ಯೆಯೊಂದೇ ಮಾನದಂಡವಲ್ಲ. ಕಟ್ಟಡದ ಒಟ್ಟು ಎತ್ತರವೇ ಪ್ರಮುಖವಾಗಿದ್ದು, ಅಂತಸ್ತುಗಳ ವಿನ್ಯಾಸಕ್ಕೆ ಅನುಗುಣವಾಗಿ ಎತ್ತರ ಬದಲಾಗುತ್ತದೆ.

ಪ್ರಸ್ತಾವನೆ ಅಂತಿಮವಾಗಿ ಜಾರಿಯಾದರೆ 21 ಮೀಟರ್‌ನಿಂದ 24 ಮೀಟರ್‌ಗಿಂತ ಕಡಿಮೆ ಎತ್ತರದ ಕೆಲವು ಕಟ್ಟಡಗಳಿಗೆ ಅನುಮತಿ ಪ್ರಕ್ರಿಯೆಯಲ್ಲಿ ಅನುಕೂಲವಾಗುವ ನಿರೀಕ್ಷೆಯಿದೆ. ಆದರೂ ಎಲ್ಲ ಕಟ್ಟಡಗಳಿಗೂ ಫೈರ್ ಎನ್‌ಒಸಿಯಿಂದ ಸಂಪೂರ್ಣ ವಿನಾಯಿತಿ ದೊರೆತಿದೆ ಎಂದು ಈಗಲೇ ಹೇಳಲಾಗುವುದಿಲ್ಲ

ಸರ್ಕಾರದ ಈ ಪ್ರಸ್ತಾವನೆಯಿಂದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಅನುಕೂಲವಾಗುವ ಸಾಧ್ಯತೆಯಿದೆ. ವಿಶೇಷವಾಗಿ ಕಟ್ಟಡ ನಿರ್ಮಾಣದ ಅನುಮತಿ ಪ್ರಕ್ರಿಯೆಯಲ್ಲಿನ ಆಡಳಿತಾತ್ಮಕ ಹೊರೆ ಕಡಿಮೆಯಾಗಬಹುದು. ಬೆಂಗಳೂರಿನ ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಪ್ರಕಾರ, ಅನಗತ್ಯ ನಿಯಂತ್ರಣಗಳನ್ನು ಸರಳಗೊಳಿಸಿ ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸುವುದು ಸರ್ಕಾರದ ಉದ್ದೇಶವಾಗಿದೆ.

ಇದಲ್ಲದೆ, ಬಿಲ್ಡರ್‌ಗಳು ಹೆಚ್ಚುವರಿ ಶುಲ್ಕ ಪಾವತಿಸಿ ಪಡೆಯುವ ಪ್ರೀಮಿಯಂ ಎಫ್‌ಎಆರ್ (Floor Area Ratio) ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಈ ಬದಲಾವಣೆ ನೆರವಾಗಬಹುದು ಎಂದು ರಿಯಲ್ ಎಸ್ಟೇಟ್ ಉದ್ಯಮದ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ. ಕಟ್ಟಡದ ಎತ್ತರವನ್ನು ಮಾತ್ರ ಆಧರಿಸಿ ಎಲ್ಲ ರೀತಿಯ ಕಟ್ಟಡಗಳಿಗೆ ಅಗ್ನಿ ಸುರಕ್ಷತಾ ನಿಯಮಗಳಿಂದ ವಿನಾಯಿತಿ ನೀಡಲಾಗುವುದಿಲ್ಲ.

ಆಸ್ಪತ್ರೆಗಳು, ಶಾಲೆಗಳು, ಕೈಗಾರಿಕಾ ಕಟ್ಟಡಗಳು ಸೇರಿದಂತೆ ಹೆಚ್ಚಿನ ಅಪಾಯವಿರುವ ಕಟ್ಟಡಗಳಿಗೆ ಅವುಗಳ ಬಳಕೆ ಮತ್ತು ಸುರಕ್ಷತಾ ಅಪಾಯಗಳ ಆಧಾರದ ಮೇಲೆ ಪ್ರತ್ಯೇಕ ಅಗ್ನಿ ಸುರಕ್ಷತಾ ಪರಿಶೀಲನೆ ಹಾಗೂ ಅನುಮತಿಗಳು ಅಗತ್ಯವಾಗಬಹುದು. ಅಲ್ಲದೆ, ಅಗ್ನಿಶಾಮಕ ಉಪಕರಣಗಳು, ತುರ್ತು ನಿರ್ಗಮನ ವ್ಯವಸ್ಥೆ ಮತ್ತು ಇತರ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸುವ ಜವಾಬ್ದಾರಿ ಕಟ್ಟಡ ಮಾಲೀಕರಿಗೆ ಮುಂದುವರಿಯಲಿದೆ

Leave a Reply

Your email address will not be published. Required fields are marked *