ChatGPT Image Oct 3, 2026, 08_41_04 PM-modified
GREATER BENGALURU NEWS 9
BESCOM

Greater Bengaluru News9: ರಾಜ್ಯದ ದೀರ್ಘಕಾಲೀನ ವಿದ್ಯುತ್ ಭದ್ರತೆ ಮತ್ತು ಬೇಸಿಗೆಯ ಬೇಡಿಕೆಯನ್ನು ಸಮರ್ಥವಾಗಿ ಎದುರಿಸಲು ಕರ್ನಾಟಕ ಸರ್ಕಾರವು ಹಲವು ಮಹತ್ವದ ಹೆಜ್ಜೆ ಇಟ್ಟಿದ್ದು, ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆ (BESS) ಹಾಗೂ ಕೃಷಿ ಪೂರೈಕೆಯ ಸೌರಕರಣಕ್ಕೆ ಹೆಚ್ಚಿನ ಆಧ್ಯತೆ ನೀಡಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ಬೆಳಕು ಭವನದಲ್ಲಿ ಇಂಧನ ಇಲಾಖೆಯ ದೀರ್ಘಕಾಲೀನ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಅವರು ಈ ಕುರಿತು ಪ್ರಮುಖ ವಿವರಗಳನ್ನು ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಉತ್ತುಂಗದ ಬೇಡಿಕೆಯ (Peak Demand) ನಿರ್ವಹಣೆ ಹಾಗೂ ನವೀಕರಿಸಬಹುದಾದ ಇಂಧನವನ್ನು ಗ್ರಿಡ್‌ಗೆ ಸುಲಭವಾಗಿ ಜೋಡಿಸಲು ಬಿಇಎಸ್‌ಎಸ್ (BESS) ಯೋಜನೆಗಳನ್ನು ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಕೆಪಿಟಿಸಿಎಲ್ (KPTCL) ಹಾಗೂ ಕೆಆರ್‌ಇಡಿಎಲ್ (KREDL) ಮೂಲಕ ಒಟ್ಟು 500 ಮೆಗಾವ್ಯಾಟ್ / 1,000 ಮೆಗಾವ್ಯಾಟ್ ಅವರ್ ಸಾಮರ್ಥ್ಯದ ಯೋಜನೆಗಳು ಪ್ರಗತಿಯಲ್ಲಿವೆ. ಇದರೊಂದಿಗೆ ಪಾವಗಡ, ಕುಷ್ಟಗಿ ಮತ್ತು ಹುಲಿಯೂರುದುರ್ಗಾದಲ್ಲಿಯೂ ಬೃಹತ್ ಸೌರ ಹಾಗೂ ಬ್ಯಾಟರಿ ಶೇಖರಣಾ ಘಟಕಗಳನ್ನು ಸ್ಥಾಪಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಪ್ರಧಾನ ಮಂತ್ರಿ ಕೃಷಿ ಸೌರ ವಿಕಾಸ ಯೋಜನೆ (KUSUM-C) ಅಡಿಯಲ್ಲಿ ಕೃಷಿ ಫೀಡರ್‌ಗಳ ಸೌರಕರಣ ಕಾರ್ಯವು ವೇಗ ಪಡೆದುಕೊಂಡಿದೆ. ಸೆಪ್ಟೆಂಬರ್ 25, 2026ರ ವರೆಗೆ ಒಟ್ಟು 2,767 ಮೆಗಾವ್ಯಾಟ್ ಸಾಮರ್ಥ್ಯದ 439 ಯೋಜನೆಗಳಿಗೆ ಬಿಡುಗಡೆ ಆದೇಶ ನೀಡಲಾಗಿದ್ದು, ಈಗಾಗಲೇ 694 ಮೆಗಾವ್ಯಾಟ್ ಸಾಮರ್ಥ್ಯದ 122 ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲಾಗಿದೆ. ಇದರೊಂದಿಗೆ ಮುಖ್ಯಮಂತ್ರಿಗಳ ಸೌರ ಕೃಷಿ ಯೋಜನೆ (CM-SKY) ಕೂಡ ಎರಡು ಹಂತಗಳಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ರಾಜ್ಯದ ರೈತರಿಗೆ ನಿರಂತರ ಮತ್ತು ವಿಶ್ವಾಸಾರ್ಹ ವಿದ್ಯುತ್ ಪೂರೈಕೆಗೆ ಭದ್ರವಾದ ಬುನಾದಿ ಹಾಕಲಾಗಿದೆ.

ವಿದ್ಯುತ್ ಸರಬರಾಜು ಕಂಪನಿಗಳ (ESCOMs) ಆರ್ಥಿಕ ಸದೃಢತೆಗೆ ಸಚಿವರು ವಿಶೇಷ ಒತ್ತು ನೀಡಿದ್ದಾರೆ. ಬೆಸ್ಕಾಂ ಮತ್ತು ಮೆಸ್ಕಾಂಗಳು ಲಾಭದಾಯಕವಾಗಿ ಕಾರ್ಯಾಚರಿಸುತ್ತಿದ್ದು, ಹೆಸ್ಕಾಂ, ಸೆಸ್ಕ್ ಮತ್ತು ಗೆಸ್ಕ್ ಕಂಪನಿಗಳೂ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂದು ನಿರ್ದೇಶಿಸಲಾಗಿದೆ. ಬಾಕಿ ಇರುವ ವಿದ್ಯುತ್ ಶುಲ್ಕಗಳ ವಸೂಲಾತಿ, ಕಟ್ಟುನಿಟ್ಟಾದ ಆದಾಯ ಸಂಗ್ರಹ ಹಾಗೂ ಸರ್ಕಾರದಿಂದ ಸಕಾಲಕ್ಕೆ ಸಬ್ಸಿಡಿ ಹಣ ಬಿಡುಗಡೆಯಾಗುವ ಮೂಲಕ ಎಸ್ಕಾಂಗಳ ದೀರ್ಘಕಾಲೀನ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ.

ಮುಂಬರುವ ಬೇಸಿಗೆಯ ವಿದ್ಯುತ್ ಬೇಡಿಕೆಯನ್ನು ನಿಭಾಯಿಸಲು ಇಂಧನ ಇಲಾಖೆಯು ಸಂಪೂರ್ಣ ಸಜ್ಜಾಗಿದೆ. ಎಲ್ ನಿನೋ ಪರಿಣಾಮದಿಂದ ಸೆಪ್ಟೆಂಬರ್‌ನಲ್ಲಿ ಶೇ. 30ರಷ್ಟು ಹೆಚ್ಚಾದ ಬೇಡಿಕೆಯನ್ನು ಸರಿದೂಗಿಸಲು ಮೂರು ಸಾವಿರ ಮೆಗಾವ್ಯಾಟ್‌ಗೂ ಅಧಿಕ ವಿದ್ಯುತ್ ಪೂರೈಕೆಯನ್ನು ಹೆಚ್ಚಿಸಲಾಗಿದೆ. ನವೆಂಬರ್‌ನಿಂದ ಉತ್ತರ ಭಾರತದ ರಾಜ್ಯಗಳೊಂದಿಗೆ ವಿದ್ಯುತ್ ಬ್ಯಾಂಕಿಂಗ್ ವ್ಯವಸ್ಥೆ, ಉಷ್ಣ ವಿದ್ಯುತ್ ಉತ್ಪಾದನೆ ಹೆಚ್ಚಳ ಮತ್ತು ಕೇಂದ್ರದ ಪೂಲ್‌ನಿಂದ ಲಭ್ಯವಾಗುವ ವಿದ್ಯುತ್ ಮೂಲಕ ಯಾವುದೇ ಕಡಿತವಿಲ್ಲದೆ ನಿರಂತರ ವಿದ್ಯುತ್ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *