ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಹತ್ವದ ಸುದ್ದಿ ಸಿಕ್ಕಿದೆ. ಬೆಂಗಳೂರಿನ ಮೆಟ್ರೋ ಸಂಪರ್ಕವನ್ನು ನಗರದ ಹೊರವಲಯ ಹಾಗೂ ಸುತ್ತಮುತ್ತಲಿನ ಬೆಳವಣಿಗೆಯ ಪ್ರದೇಶಗಳಿಗೆ ವಿಸ್ತರಿಸುವ ನಿಟ್ಟಿನಲ್ಲಿ ಒಟ್ಟು 6 ಮಾರ್ಗಗಳ ವಿಸ್ತರಣೆಗೆ ಪ್ರಸ್ತಾವನೆ ರೂಪಿಸಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಹಲವು ಪ್ರಸ್ತಾವಿತ ಮಾರ್ಗಗಳ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದೆ. ಕೆಲವು ಮಾರ್ಗಗಳು DPR ಹಂತದಲ್ಲಿವೆ. ಯೋಜನೆಗಳು ಅಂತಿಮ ಅನುಮೋದನೆ ಪಡೆದು ಜಾರಿಗೆ ಬಂದರೆ ಬಿಡದಿ, ಹಾರೋಹಳ್ಳಿ, ಅತ್ತಿಬೆಲೆ, ತುಮಕೂರು ಮತ್ತು ಹೊಸಕೋಟೆಯಂತಹ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ವಿಸ್ತರಣೆಯಾಗಲಿದೆ.
ಯಾವೆಲ್ಲ ಮಾರ್ಗಗಳ ವಿಸ್ತರಣೆಗೆ ಪ್ರಸ್ತಾವನೆ?
- ಚಲ್ಲಘಟ್ಟ-ಬಿಡದಿ:
ಸುಮಾರು 15 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಪ್ರಸ್ತಾವಿಸಲಾಗಿದೆ. ಸದ್ಯ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸುವ ಹಂತದಲ್ಲಿದೆ. - ಸಿಲ್ಕ್ ಇನ್ಸ್ಟಿಟ್ಯೂಟ್-ಹಾರೋಹಳ್ಳಿ:
ಸುಮಾರು 24 ಕಿ.ಮೀ ಉದ್ದದ ಮಾರ್ಗದ ಪ್ರಸ್ತಾವನೆ ಇದ್ದು, ಕಾರ್ಯಸಾಧ್ಯತಾ ವರದಿ ಹಂತದಲ್ಲಿದೆ. - ಬೊಮ್ಮಸಂದ್ರ-ಅತ್ತಿಬೆಲೆ:
ಸುಮಾರು 11 ಕಿ.ಮೀ ಉದ್ದದ ಈ ಮಾರ್ಗಕ್ಕೂ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗುತ್ತಿದೆ. ಈ ವಿಸ್ತರಣೆ ಜಾರಿಗೆ ಬಂದರೆ ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕ ಹೆಚ್ಚಾಗುವ ನಿರೀಕ್ಷೆಯಿದೆ. - ಕಾಳೇನ ಅಗ್ರಹಾರ-ಕಾಡುಗೋಡಿ ಟ್ರೀ ಪಾರ್ಕ್:
ಸುಮಾರು 68 ಕಿ.ಮೀ ಉದ್ದದ ಈ ಮಾರ್ಗ ಪ್ರಸ್ತಾವಿತ ವಿಸ್ತರಣೆಗಳ ಪೈಕಿ ಅತಿ ಉದ್ದದ ಮಾರ್ಗವಾಗಿದೆ. ಸದ್ಯ ಇದು ಕಾರ್ಯಸಾಧ್ಯತಾ ವರದಿ ಹಂತದಲ್ಲಿದೆ. - ಮಾದವರ-ತುಮಕೂರು:
ಸುಮಾರು 60 ಕಿ.ಮೀ ಉದ್ದದ ಮೆಟ್ರೋ ಸಂಪರ್ಕದ ಪ್ರಸ್ತಾವನೆ ಇದ್ದು, ಸದ್ಯ DPR ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದೆ. - ಕೆ.ಆರ್.ಪುರಂ-ಹೊಸಕೋಟೆ:
ಬೂದಿಗೆರೆ ಕ್ರಾಸ್ ಮೂಲಕ ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ಸುಮಾರು 16 ಕಿ.ಮೀ ಉದ್ದದ ಮಾರ್ಗವನ್ನು ಪ್ರಸ್ತಾವಿಸಲಾಗಿದೆ. ಸದ್ಯ ಕಾರ್ಯಸಾಧ್ಯತಾ ವರದಿ ಹಂತದಲ್ಲಿದೆ.
ಹೊರವಲಯದ ಜನರಿಗೆ ದೊಡ್ಡ ಅನುಕೂಲ
ಈ ಪ್ರಸ್ತಾವಿತ ಮಾರ್ಗಗಳು ಅನುಮೋದನೆ ಪಡೆದು ಕಾರ್ಯರೂಪಕ್ಕೆ ಬಂದರೆ ಬೆಂಗಳೂರಿನ ಹೊರವಲಯದ ಹಲವು ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಹೆಚ್ಚಾಗಲಿದೆ. ಅದರಲ್ಲೂ ಸ್ಯಾಟಲೈಟ್ ಪಟ್ಟಣಗಳು, ಕೈಗಾರಿಕಾ ವಲಯಗಳು ಹಾಗೂ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಕಾರಿಡಾರ್ಗಳಿಗೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ.
ಬಿಡದಿ, ಹಾರೋಹಳ್ಳಿ, ಅತ್ತಿಬೆಲೆ, ಹೊಸಕೋಟೆ ಹಾಗೂ ತುಮಕೂರಿನಂತಹ ಪ್ರದೇಶಗಳಿಂದ ಬೆಂಗಳೂರಿಗೆ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಪರ್ಯಾಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ ದೊರೆಯಬಹುದು.
ಟ್ರಾಫಿಕ್ ಕಡಿಮೆ ಮಾಡಲು ಸಹಕಾರಿ
ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆ ದೊಡ್ಡ ಸಮಸ್ಯೆಯಾಗಿದೆ. ಮೆಟ್ರೋ ಜಾಲವನ್ನು ಹೊರವಲಯದವರೆಗೆ ವಿಸ್ತರಿಸಿದರೆ ಖಾಸಗಿ ವಾಹನಗಳ ಅವಲಂಬನೆ ಕಡಿಮೆಯಾಗುವುದರ ಜೊತೆಗೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಸಹಕಾರಿಯಾಗುವ ನಿರೀಕ್ಷೆಯಿದೆ.
ಉದ್ಯೋಗ, ಶಿಕ್ಷಣ ಮತ್ತು ಕೈಗಾರಿಕಾ ಕೇಂದ್ರಗಳಿಗೆ ಸುಲಭ ಸಂಪರ್ಕ ಕಲ್ಪಿಸುವುದರ ಜೊತೆಗೆ ಈಗಿರುವ ನಮ್ಮ ಮೆಟ್ರೋ ಜಾಲ ಹಾಗೂ ಭವಿಷ್ಯದ ಮಾರ್ಗಗಳನ್ನು ಪರಸ್ಪರ ಸಂಪರ್ಕಿಸುವುದಕ್ಕೂ ಈ ವಿಸ್ತರಣೆಗಳು ನೆರವಾಗಬಹುದು.
ಆದರೆ ಈ ಮಾರ್ಗಗಳು ಸದ್ಯ ಪ್ರಸ್ತಾವನೆ, ಕಾರ್ಯಸಾಧ್ಯತಾ ಅಧ್ಯಯನ ಅಥವಾ DPR ಹಂತದಲ್ಲಿದ್ದು, ಅಂತಿಮ ಅನುಮೋದನೆ, ಹಣಕಾಸು ಹಾಗೂ ಕಾಮಗಾರಿ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕವೇ ಯೋಜನೆಗಳ ಸ್ಪಷ್ಟ ಚಿತ್ರಣ ಸಿಗಲಿದೆ.

