Greater Bengaluru News9 : ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಿಂದ ಗುತ್ತಿಗೆದಾರರಿಗೆ (Contractors) ಬರಬೇಕಿರುವ ಬರೋಬ್ಬರಿ ₹38,000 ಕೋಟಿಗೂ ಅಧಿಕ ಬಾಕಿ ಮೊತ್ತವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿದೆ.
1.50 ಲಕ್ಷ ಕುಟುಂಬಗಳು ಸಂಕಷ್ಟದಲ್ಲಿ: ಈ ಹಿಂದೆ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಹಾಗೂ ನಂತರ ಅಧಿಕಾರಕ್ಕೆ ಬಂದ ಬಳಿಕ ನಡೆಸಿದ ಚರ್ಚೆಯಲ್ಲಿ ನೀಡಿದ್ದ ಭರವಸೆಯನ್ನು ಸಂಘವು ನೆನಪಿಸಿದೆ. ಎರಡು ತಿಂಗಳೊಳಗೆ ಬಾಕಿ ಹಣ ಪಾವತಿಸುವುದಾಗಿ ಹೇಳಿದ್ದರೂ, 2021-22 ರಿಂದ ಇಂದಿನವರೆಗೂ ಹಣ ಬಿಡುಗಡೆಯಾಗಿಲ್ಲ. ಇದರಿಂದಾಗಿ ಗುತ್ತಿಗೆದಾರರು ಹಾಗೂ ಅವರನ್ನು ಅವಲಂಬಿಸಿರುವ ಸುಮಾರು 1.50 ಲಕ್ಷ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ ಎಂದು ಸಂಘ ತಿಳಿಸಿದೆ.
ಗುತ್ತಿಗೆದಾರರ ಸಂಘದ ಪ್ರಮುಖ ಬೇಡಿಕೆಗಳು:
- ಜೇಷ್ಠತೆ ಆಧಾರದಲ್ಲಿ ಹಣ ಬಿಡುಗಡೆ: ಲೋಕೋಪಯೋಗಿ ಹಾಗೂ ಬಿಬಿಎಂಪಿ ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಜೇಷ್ಠತೆ (Seniority) ಆಧಾರದ ಮೇಲೆ ಪಾರದರ್ಶಕವಾಗಿ ಹಣ ಬಿಡುಗಡೆ ಮಾಡಬೇಕು ಮತ್ತು ‘Special LOC’ ನೀಡುವುದನ್ನು ಸಂಪೂರ್ಣವಾಗಿ ತಡೆಹಿಡಿಯಬೇಕು.
- ಜಿಎಸ್ಟಿ ವ್ಯತ್ಯಾಸದ ಮೊತ್ತ ರಿಲೀಸ್: 2017-18 ಮತ್ತು 2018-19ನೇ ಸಾಲಿನ ವ್ಯಾಟ್ನಿಂದ ಜಿ.ಎಸ್.ಟಿ.ಗೆ ಬದಲಾದ ಶೇ. 8 ರಷ್ಟು ವ್ಯತ್ಯಾಸದ ಮೊತ್ತವನ್ನು ತುರ್ತಾಗಿ ಬಿಡುಗಡೆ ಮಾಡಲು ಹಣಕಾಸು ಇಲಾಖೆಗೆ ಶಿಫಾರಸು ಮಾಡಬೇಕು.
- ಇ-ಸಂಗ್ರಹಣಾ ನಿಯಮ ರದ್ದು: ಇ-ಸಂಗ್ರಹಣಾ ವೇದಿಕೆಯ ಗುತ್ತಿಗೆ ನಿರ್ವಹಣಾ ಮಾಡ್ಯೂಲ್ನಲ್ಲಿ (Contract Management Module) ಕಾಮಗಾರಿಗಳ ವಿವರ ಅಪ್ಲೋಡ್ ಮಾಡಿದ ನಂತರವೇ ಖಜಾನೆಯಿಂದ ಹಣ ಬಿಡುಗಡೆ ಮಾಡಬೇಕೆಂಬ ನಿಯಮವನ್ನು ರದ್ದುಗೊಳಿಸಬೇಕು.
- ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ: ಜಿಲ್ಲಾ ಮತ್ತು ತಾಲೂಕು ಮಟ್ಟದ ಟೆಂಡರ್ಗಳಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಮೊದಲ ಆದ್ಯತೆ ನೀಡಬೇಕು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಗುತ್ತಿಗೆದಾರರಿಗೆ ಮಣೆ ಹಾಕುವುದನ್ನು ತಡೆಯಬೇಕು.
- ಲೈಸೆನ್ಸ್ ಅವಧಿ ವಿಸ್ತರಣೆ: ಕೋವಿಡ್ ಸಂದರ್ಭದಿಂದ ಮತ್ತು ಸರ್ಕಾರದ ಅವ್ಯವಸ್ಥೆಯಿಂದ ಸಣ್ಣ ಮತ್ತು ಮಧ್ಯಮ ವರ್ಗದ ಗುತ್ತಿಗೆದಾರರಿಗೆ ಕಾಮಗಾರಿಗಳು ಸಿಗುತ್ತಿಲ್ಲ. ಹೀಗಾಗಿ ಲೈಸೆನ್ಸ್ ನವೀಕರಿಸಲು ಮತ್ತು ಕಾಮಗಾರಿ ಮುಂದುವರೆಸಲು 10 ವರ್ಷಗಳ ವರೆಗೆ ವಿಸ್ತರಿಸಬೇಕು.
- ಕೆಕೆಆರ್ಡಿಬಿ ಕಾಮಗಾರಿಗಳ ಸಭೆ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಹಣವನ್ನು ನಿರ್ಮಿತಿ ಕೇಂದ್ರ, ಕೆ.ಆರ್.ಐ.ಡಿ.ಎಲ್. ಹಾಗೂ ಇತರ ಸಂಸ್ಥೆಗಳಿಗೆ ನೀಡುತ್ತಿರುವುದರ ಬಗ್ಗೆ ಮತ್ತು ಕೆ.ಕೆ.ಆರ್.ಡಿ.ಬಿ ನಲ್ಲಿ ‘ಕಲ್ಯಾಣ ಪಥ’ ಕಾಮಗಾರಿಗಳ ತಾಂತ್ರಿಕ ದೋಷಗಳ ವಿಚಾರವಾಗಿ ಅಧಿಕೃತ ಸಭೆ ಕರೆಯಬೇಕು.

