ChatGPT Image Oct 3, 2026, 08_41_04 PM-modified
GREATER BENGALURU NEWS 9
Kannada Rajyotsava

Greater Bengaluru News9 : ಬೆಂಗಳೂರಿನ ವಿಜಯನಗರದ ಮಾಗಡಿ ಕಾರ್ಡ್ ರಸ್ತೆ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ) ವತಿಯಿಂದ ಅದ್ಧೂರಿ 71ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಕನ್ನಡೋತ್ಸವ-2026’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಂ.ಸಿ. ಬಡಾವಣೆ ಮತ್ತು ಸಿ.ಹೆಚ್.ಬಿ.ಎಸ್. ಬಡಾವಣೆಯ ನಿವಾಸಿಗಳಿಗಾಗಿ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸರಣಿಯನ್ನೇ ಹಮ್ಮಿಕೊಳ್ಳಲಾಗಿದ್ದು, ನವೆಂಬರ್ 15ರಿಂದ ಆರಂಭವಾಗಲಿರುವ ಈ ಸಂಭ್ರಮವು ನವೆಂಬರ್ 29ರಂದು ನಡೆಯುವ ಸಮಾರೋಪ ಸಮಾರಂಭದೊಂದಿಗೆ ಸಂಪನ್ನಗೊಳ್ಳಲಿದೆ.

ರಾಜ್ಯೋತ್ಸವ ಸಂಭ್ರಮದ ಮೊದಲ ಹಂತವಾಗಿ ನವೆಂಬರ್ 15, ಭಾನುವಾರ ಮಧ್ಯಾಹ್ನ 3 ಗಂಟೆಗೆ ಎಂ.ಸಿ. ಬಡಾವಣೆಯ 13ನೇ ಅಡ್ಡರಸ್ತೆಯಲ್ಲಿರುವ ಬಿಬಿಎಂಪಿ ಕಚೇರಿಯ ಮೊದಲ ಮಹಡಿಯಲ್ಲಿ (ಟ್ರಸ್ಟ್ ಕಚೇರಿ) ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಇದರಲ್ಲಿ ದೇಶಭಕ್ತಿ ಕನ್ನಡ ಗೀತೆಗಳ ಗಾಯನ ಹಾಗೂ ಕನ್ನಡ ಭಾಷೆ ಮತ್ತು ಕನ್ನಡ ರಾಜ್ಯೋತ್ಸವದ ಕುರಿತು ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 5 ರಿಂದ 10 ವರ್ಷ, 11 ರಿಂದ 18 ವರ್ಷ ಹಾಗೂ 18 ವರ್ಷ ಮೇಲ್ಪಟ್ಟ ಮೂರು ವಿಭಾಗಗಳಲ್ಲಿ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬಹುದಾಗಿದೆ.

ಇದರ ಮುಂದುವರಿದ ಭಾಗವಾಗಿ ನವೆಂಬರ್ 21, ಶನಿವಾರ ಬೆಳಿಗ್ಗೆ 9 ಗಂಟೆಗೆ ಎಂ.ಸಿ. ಬಡಾವಣೆಯ ಬಿ.ಜಿ.ಎಸ್. ಸ್ಕೇಟಿಂಗ್ ಕ್ರೀಡಾಂಗಣದಲ್ಲಿ ಬೃಹತ್ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಉದ್ಯಮಿ ಹಾಗೂ ಕ್ರೀಡಾಪಟು ಶ್ರೀಮತಿ ಮಂಗಳಾ ಭಾಸ್ಕರ್ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದು, 3 ವರ್ಷದ ಮಕ್ಕಳಿಂದ ಹಿಡಿದು 61 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರವರೆಗೆ ಆರು ವಯೋಮಿತಿಯ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಓಟದ ಸ್ಪರ್ಧೆ, ಡಕ್ ವಾಕ್, ಮ್ಯೂಸಿಕಲ್ ಚೇರ್, ಕಪಲ್ ಗೇಮ್ಸ್, ವಾಕಿಂಗ್ ರೇಸ್ ಜೊತೆಗೆ ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳಿಗೆ ರಂಗೋಲಿ ಸ್ಪರ್ಧೆ ಹಾಗೂ ಇಂಧನ ರಹಿತ ತಿಂಡಿ-ತಿನಿಸು ತಯಾರಿಸುವ ವಿಶೇಷ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಎಲ್ಲಾ ಚಟುವಟಿಕೆಗಳ ಅದ್ಧೂರಿ ಸಮಾರೋಪ ಸಮಾರಂಭವು ನವೆಂಬರ್ 29, 2026 ರಂದು ಸಂಜೆ 4 ರಿಂದ ರಾತ್ರಿ 9 ಗಂಟೆಯವರೆಗೆ ಎಂ.ಸಿ. ಬಡಾವಣೆಯ ಸುಭಾಷ್‌ಚಂದ್ರ ಬೋಸ್ ಉದ್ಯಾನವನದಲ್ಲಿ ನಡೆಯಲಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಅವರು ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಪ್ರೊ. ಸಮತಾ ಬಿ. ದೇಶಮಾನೆ ಹಾಗೂ ‘ಇಂದು ಸಂಜೆ’ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಡಾ. ಜಿ.ವೈ. ಪದ್ಮ ನಾಗರಾಜು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಮಾರೋಪ ಸಮಾರಂಭದ ಸಂಜೆ ಮಕ್ಕಳಿಗಾಗಿ ವಿಶೇಷ ವೇಷಭೂಷಣ ಸ್ಪರ್ಧೆ ಹಾಗೂ ಖ್ಯಾತ ಸಂಗೀತಗಾರರಿಂದ ‘ಸಂಗೀತ ರಸಸಂಜೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಲಿದೆ. “ನಶಾ ಮುಕ್ತ ಭಾರತ ಆಗಿಸೋಣ” ಎಂಬ ಸಾಮಾಜಿಕ ಸಂದೇಶದೊಂದಿಗೆ ನಡೆಯುತ್ತಿರುವ ಈ ಕನ್ನಡ ಹಬ್ಬದಲ್ಲಿ ಎಂ.ಸಿ. ಬಡಾವಣೆ ಮತ್ತು ಸಿ.ಹೆಚ್.ಬಿ.ಎಸ್. ಬಡಾವಣೆಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟ್ರಸ್ಟ್‌ನ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *