ChatGPT Image Oct 3, 2026, 08_41_04 PM-modified
GREATER BENGALURU NEWS 9
DK Shivakumar

Greater Bengaluru News9 : ಕಿದ್ವಾಯಿ ಆಸ್ಪತ್ರೆಯ ಕಪೂರ್ ಕಟ್ಟಡದ ಕೆಳಗಿದ್ದ ಮೊದಲವಾರ್ಡಿಗೆ ಸಿಎಂ ಕಾಲಿಟ್ಟಾಗ ಕ್ಯಾನ್ಸರ್ ಪೀಡಿತ ಬಾಲಕ ಧನುಷ್ ರೋಜಾ ಹೂ ಕೊಟ್ಟು‌ ಸಿಎಂ ಅವರನ್ನು ಸ್ವಾಗತಿಸಿದನು.

‘ಯಾವೂರು’ ಎಂದು ಸಿಎಂ ಕೇಳಿದರು, ಆತ ‘ನಂದು ಮಾಗಡಿ ಸಾರ್’ ಎಂದಾಗ ಸುತ್ತಲಿದ್ದವರ ಮುಖದಲ್ಲಿ ನಗು ಅರಳಿತ್ತು. ‘ಮಾಗಡಿ’. ‘ಓಹೋ ಕೆಂಪೇಗೌಡರ ಊರು. ಧನುಷ್ ಅಂದರೆ ಏನು ಗೊತ್ತಾ? ಬಾಣ ಅಂತ. ನೀನು ಬಾಣದಂತಿರಬೇಕು. ಬಾಣ ಹೊಡೀತೀಯ? ‘ಧನುಷ್ ನಿನಗೆ ಏನು ಆಗಲ್ಲ‌’ ಎಂದು ಸಿಎಂ ಶುಭ ಹಾರೈಸಿದಾಗ ಸುತ್ತಲಿದ್ದವರ ಕಣ್ಣಲ್ಲಿ ಅರಿವಿಲ್ಲದೇ ಕಣ್ಣೀರು ಜಾರಿತ್ತು.

ಕಣ್ಣಲ್ಲಿ‌ ನಿರೀಕ್ಷೆ, ಮನದಲ್ಲಿ ಹಾರೈಕೆ. ಕಿದ್ವಾಯಿ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಕಪೂರ್ ವಿಭಾಗಕ್ಕೆ‌ ಮಕ್ಕಳ‌ ದಿನಾಚರಣೆ ನಿಮಿತ್ತ ಮಕ್ಕಳಿಗೆ ಶುಭಾಶಯ ಹೇಳಲು ಸಿಎಂ ಡಿ ಕೆ‌ ಶಿವಕುಮಾರ್ ಅವರು ಶನಿವಾರ ಕಾಲಿಡುತ್ತಿದ್ದಂತೆ ಮಕ್ಕಳಲ್ಲಿ‌ ಖಾಯಿಲೆ ಗುಣವಾಗುವ ನಿರೀಕ್ಷೆ ಮತ್ತಷ್ಟು ಹೆಚ್ಚಾಯಿತು. ಅವರ ಹಾರೈಕೆ, ಮಾತುಗಳು ಆತ್ಮವಿಶ್ವಾಸದ ಬೆಳಕನ್ನು ಹರಿಸಿತು.

ಹಾಸಿಗೆಯಲ್ಲಿ ಮಲಗಿದ್ದ ಪುಟಣಿಯನ್ನ ‘ಏನಪ್ಪ‌ ಯಾವೂರು‌?’ ಅಂದರು. ಮಗು ಎದ್ದು ಕೂತು, ‘ಹೊಸೂರು ಅಂದ. ‘ಏನು‌‌ ನಿನ್ನ ಹೆಸರು?’ ಅಂದರು, ಪಾರ್ಥಸಾರಥಿ ಅಂದ‌. ‘ಓಹೋ, ಪಾರ್ಥ ಅಂದರೆ ಏನು ಗೊತ್ತಾ? ಅರ್ಜುನ ಅಂತ. ಅಂದರೆ ನೀನು ಅರ್ಜುನ. ನಿನಗೆ ಏನೂ ಆಗೋಲ್ಲ. ಶಾಲೆಗೆ ಹೋಗಿ, ಚೆನ್ನಾಗಿ ಓದು. ತಲೆ ಕಡಿಸಿಕೊಳ್ಳಬೇಡ’ ಎಂದು ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹುಡುಗನಿಗೆ ಧೈರ್ಯ ತುಂಬಿದರು.

ನಾನ್ಯಾರು ಗೊತ್ತಾ? ಡಿ ಕೆ ಶಿವಕುಮಾರ್

ಹುಮನಾವಾದ್ ನ ಬಾಲಕಿ ಪೂಜಾ ಬಳಿ ಬಂದವರೇ, ‘ನಾನ್ಯಾರು ಗೊತ್ತಾ?’ ಅಂದರು.

‘ನನಗೆ ಗೊತ್ತು ನೀವು ಡಿಕೆ ಶಿವಕುಮಾರ್. ಮುಖ್ಯಮಂತ್ರಿ’ ಅಂದಳು.
‘ಪೂಜಾ ಮುಂದೆ ನೀನು ಏನಾಗಬೇಕು ಅಂತಿದ್ದೀಯ?’ಅಂತ ಮಗುವಿನ ಕನಸನ್ನು ಕೆದಕಿದರು.

‘ಸಾರ್ ನಾನು ಟೀಚರ್ ಆಗಬೇಕು ಅಂದುಕೊಂಡಿದ್ದೇನೆ’ ಅಂದಳು. ಟೀಚರ್ ಆಗಿ ದೇಶಕ್ಕೆ ಸೇವೆ ಮಾಡು’ ಎಂದು ಹರಸಿದರು.

ವಾರ್ಡನ‌ ಮೂಲೆಯಲಿದ್ದ ಸರೋಜಮ್ಮನ ಹತ್ತಿರ ಬಂದು, ‘ಏನು ಮಗು ಹೆಸರು’ ಅಂದರು. ಅಷ್ಟರಲ್ಲಿ ಹಾಸಿಗೆಯ ಮೇಲೆ ಕುಳಿತವಳೇ ‘ಗಂಗೋತ್ರಿ ಅಂದಳು. ‘ಗಂಗೋತ್ರಿ ಪವಿತ್ರವಾದ ನದಿ. ನಮ್ಮ ಮನೆಗೂ ಇದೇ ಹೆಸರನ್ನು ಇಡಬೇಕು ಅಂದುಕೊಂಡಿದ್ದೀನಿ’ ಎಂದು ಚಾಕೊಲೇಟ್, ಡ್ರಾಯಿಂಗ್ ಪುಸ್ತಕಗಳನ್ನು ಹಂಚಿದರು.

ಎದುರಿಗಿದ್ದ‌ ಹಾಸಿಗೆ ಬಳಿಬಂದರು. ‘ಮಗೂಗೆ 2 ವರ್ಷ ಸಾರ್. ಹೆಸರು ಜಯಲಕ್ಷ್ಮೀ ಅಂತ’ ತಾಯಿ ಅನಿತಾ ಹೇಳಿದರು. ಆಕೆ ಕಣ್ಣಲ್ಲಿ ಹಿಂಜರಿಕೆ. ‘ಏನಾಗಿತ್ತು’ ಸಿಎಂ ಮತ್ತೆ ಪ್ರಶ್ನೆ ಕೇಳಿದರು. ‘ಬ್ಲಡ್…’ಅಂತ ಮಾತು ಹೊರಬಂತು, ಕ್ಯಾನ್ಸರ್ ಅನ್ನೋ‌ಪದ ಅನಿತಾ ಗಂಟಲಲ್ಲೇ ನಿಂತು ಹೋಯಿತು. ಅನಿತಾ ಮಗಳು ಜಯಲಕ್ಷ್ಮಿಯನ್ನು ಉಳಿಸಿಕೊಳ್ಳಲು ಮಾಡಿದ ಹೋರಾಟ ಅಷ್ಟಿಷ್ಟಲ್ಲ.‌ ಗುಲ್ಬರ್ಗಾದಿಂದ ಬೆಂಗೂಳೂರಿಗೆ ಬಂದು, ಸಂಬಂಧಿಕರಿಗೆ ಮಾತ್ರ ರೋಗದ ಹೆಸರು ಹೇಳಿ, ಕಿದ್ವಾಯಿ ಆಸ್ಪತ್ರೆಗೆ ತಿಂಗಳು ಗಟ್ಟಲೆ ಸೇರಿಸಿದ್ದರಿಂದ‌ ಈಗ ಮಗೂ ಕೈಗೆ ದಕ್ಕಿದೆ.

‘ಈಗ ಪರವಾಗಿಲ್ಲ ಸಾರ್, ಮಗು ಸುಧಾರಿಸ್ತಿದೆ’ ಸಿಎಂಗೆ ಅನಿತಾ ವರದಿ ಕೊಟ್ಟ ಮೇಲೆ‌ ಮುಂದೆ ಹೋದರು.

ಪಕ್ಕದ ಹಾಸಿಗೆಯಲ್ಲಿದ್ದ ಪುಟಾಣಿ ಹುಡುಗಿ , ‘ನನ್ನ ಹೆಸರು ಲೇಖನ. ನಂದು ರಾಯಚೂರು, ಡಿಸೆಂಬರ್ ಬಂದರೆ 10 ವರ್ಷ’ ಅಂತ‌ ಚಿನುಕುರಳಿ ರೀತಿ ಹೇಳಿದಳು. ಈಕೆ ಬೆಳಗ್ಗೆಯಿಂದಲೇ ಇವತ್ತು ಆಸ್ಪತ್ರೆಗೆ ‘ದೊಡ್ಡ ಡಾಕ್ಟರ್ ಬರ್ತಾರೆ ಅಂತ ರೋಜಾ ಹೂ ಕೈಯಲ್ಲಿ ಹಿಡಿದು ನಿಂತಿದ್ದಳು. ಅಜ್ಜಿ ಆಂಜನಮ್ಮ‌ ಆರೈಕೆಯಲ್ಲಿ ಬದುಕುವ ಹೋರಾಟ ಮುಂದುವರಿಸಿದ್ದಳು.

ಹೀಗೆ ಸಿಎಂ ಕಿದ್ವಾಯಿ ಕೆಳಗಿನ ಎರಡೂ ವಾರ್ಡುಗಳ ಮಕ್ಕಳಿಗೆ ಕೈ ಕುಲಕಿ, ಧೈರ್ಯತುಂಬಿ ಮೊದಲನೆ ಕಟ್ಟಡದ ಜನರಲ್ ವಾರ್ಡ್ ಹೋಗಿ,ಬಿಜಾಪುರ, ಶಾಪುರ, ಹುಮನಾಬಾದ್ ಹೀಗೆ ನಾಡಿನ ನಾನಾ‌ಭಾಗಗಳಿಂದ ಬಂದು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳ‌ ಪಕ್ಕ ಕುಳಿತು ‘ಸರಿಯಾಗಿ ನೋಡ್ಕೊತಾ ಇದ್ದಾರ? ಊಟ ಕೊಡ್ತಾ ಇದ್ದಾರ’ ಅಂತ ವಿಚಾರಿಸಿದರು.
ರಕ್ತದ ಕ್ಯಾನ್ಸರ್ ನಿಂದ ನರಳುತ್ತಿದ್ದ ಶಾಪುರದ ಭವ್ಯಳ ತಲೆ‌ಸವರಿ, ‘ಸರಿಹೋಗುತ್ತದೆ. ಭಯ ಬೇಡ’ ಎಂದು ಸಮಾಧಾನ ಮಾಡಿದರು. ಅವರ ತಾಯಿ ಸಂಗೀತಾಗೆ, ಗೃಹಜ್ಯೋತಿ, ಗೃಹಲಕ್ಷೀ ಸೌಲಭ್ಯಗಳು ಸಿಗುತ್ತಿದೆಯಾ? ಅಂತ ವಿಚಾರಿಸಿದರು.

ಕನಕಪುರದ ಋತ್ವಿಕ್ ಅವರ ತಾಯಿಯ ಅಚಾನಕ್ ಆಗಿ ಬದಲಾಗಿದ್ದ ಎಪಿಎಲ್ ಕಾರ್ಡನ್ನು ಬಿಪಿಎಲ್ ಗೆ ತಕ್ಷಣ ಬದಲಾಯಿಸಿ‌ಕೊಡಿ ಎಂದು ಸ್ಥಳದಲ್ಲೇ ಸೂಚಿಸಿದರು.

ಚಿಕಿತ್ಸೆ ಪಡೆಯುತ್ತಿರುವ ಎಲ್ಲ‌ಮಕ್ಕಳಿಗೆ ಶುಭಾಶಯ ಹೇಳಿ, ಹೃದಯ ತುಂಬಿ ಹರಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಸಾರ್ಥಕ ಗೊಳಿಸಿದರು.

ಕಿದ್ವಾಯಿಗೆ ಆಸ್ಪತ್ರೆಗೆ ಆಗಮಿಸಿದವರೇ ಆವರಣದಲ್ಲಿ‌ ರೋಗಿಗಳನ್ನು ನೋಡಿಕೊಳ್ಳಲು ನಾಡಿನ ವಿವಿಧ ಭಾಗದಿಂದ ಆಗಮಿಸಿದ್ದ ತಾಯಂದಿರ ಪಕ್ಕ ಕೂತು ಯೋಗ ಕ್ಷೇಮ ವಿಚಾರಿಸಿದರು.
ಎಲ್ಲಾ ಸೌಲಭ್ಯ ಕೊಡ್ತಾ ಇದ್ದಾರ? ಹಣ ಏನಾದರು ಕೇಳ್ತಾರ? ಅಂತ ವಿಚಾರಿಸಿ. ನಿಮ್ಮ ನಿಮ್ಮ ಜಿಲ್ಲೆಗಳಲ್ಲೇ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ಕೊಟ್ಟರು.

ಮಾಧ್ಯಮ ಪ್ರತಿಕ್ರಿಯೆ:

ಮಕ್ಕಳ ದಿನಾಚರಣೆ ಅಂಗವಾಗಿ ಶನಿವಾರ ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿ, ಕ್ಯಾನ್ಸರ್ ಚಿಕಿತ್ಸೆಗೆ ದಾಖಲಾಗಿರುವ ಮಕ್ಕಳ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳಿಗೆ ಡಿ ಕೆ‌ ಶಿವಕುಮಾರ್ ಅವರು ಪ್ರತಿಕ್ರಿಯೆ‌ ನೀಡಿದರು.

ಕಿದ್ವಾಯಿ ಆಸ್ಪತ್ರೆಯಲ್ಲಿ 200 ಹೆಚ್ಚುವರಿ ಹಾಸಿಗೆ:

“ಆಟವಾಡುತ್ತಾ ಬಾಲ್ಯ ಕಳೆಯಬೇಕಾದ ಪುಟ್ಟ ಕಂದಮ್ಮಗಳು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯೊಂದಿಗೆ ಹೋರಾಡುತ್ತಿರುವ ದೃಶ್ಯ ಎಂಥವರ ಮನವನ್ನೂ ಕಲಕುವಂತದ್ದು. ಮಕ್ಕಳ ನೋವು ಒಂದೆಡೆಯಾದರೆ, ಅವರ ಚಿಕಿತ್ಸೆಗೆ ಹಗಲಿರುಳು ಆಸ್ಪತ್ರೆಯಲ್ಲೇ ಕಳೆಯುವ ತಂದೆ-ತಾಯಿಯ ಸಂಕಟ ಮತ್ತೊಂದೆಡೆ. ಇಂತಹ ಕುಟುಂಬಗಳಿಗೆ ಚಿಕಿತ್ಸೆ ಜತೆಗೆ ಆಸರೆ ಮತ್ತು ಧೈರ್ಯ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಸಿಎಂ ಡಿ. ಕೆ.ಶಿವಕುಮಾರ್ ಅವರು ಹೇಳಿದರು.

“ಈ ನಿಟ್ಟಿನಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಹೆಚ್ಚುವರಿಯಾಗಿ 200 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು. ಮಕ್ಕಳೊಂದಿಗೆ ಬರುವ ತಾಯಂದಿರು ಹಾಗೂ ಕುಟುಂಬದ ಸದಸ್ಯರಿಗೆ ವಸತಿ ಕಲ್ಪಿಸಲು 3 ಎಕರೆ ಜಾಗದ ಬೇಡಿಕೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಕ್ಕಳ ನೋವು ನೋಡಿದರೆ ಮನಸ್ಸಿಗೆ ಸಂಕಟವಾಗುತ್ತದೆ

“ನಾನು ಈ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದಾಗಲೇ ಕಿದ್ವಾಯಿ ಆಸ್ಪತ್ರೆಯ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೆ. ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಇಲ್ಲಿಗೆ ಬಂದು ಮಕ್ಕಳ ಪರಿಸ್ಥಿತಿ ನೋಡಬೇಕು ಎಂದು ಬಂದಿದ್ದೆ. ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್‌ನಂತಹ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳನ್ನು ನೋಡಿದಾಗ ಅವರ ನೋವು ಅರ್ಥವಾಗುತ್ತದೆ. ಏನು ಹೇಳಬೇಕು ಎಂಬುದೇ ತಿಳಿಯುವುದಿಲ್ಲ. ಆದರೆ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಅವರ ಭವಿಷ್ಯ ಬಹಳ ಮುಖ್ಯ” ಎಂದು ಭಾವುಕರಾದರು.

ಒಂದು ಮಗುವಿನ ಜನನದ ಹಿಂದೆ ತಂದೆ-ತಾಯಿ ಸಾಕಷ್ಟು ಕನಸು ಮತ್ತು ಶ್ರಮ ಹೊಂದಿರುತ್ತಾರೆ. ಅಂತಹ ಮಗು ಬಾಲ್ಯದಲ್ಲೇ ಗಂಭೀರ ಕಾಯಿಲೆಗೆ ತುತ್ತಾದಾಗ ಆ ಕುಟುಂಬ ಅನುಭವಿಸುವ ನೋವು ದೊಡ್ಡದು. ಮಕ್ಕಳಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು. ಅವರ ಪೋಷಕರಿಗೂ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಇರಬೇಕು” ಎಂದು ಹೇಳಿದರು.

ವರ್ಷಕ್ಕೆ 3.5 ಲಕ್ಷ ರೋಗಿಗಳಿಗೆ ಚಿಕಿತ್ಸೆ:

“ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಹೊರರಾಜ್ಯಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಿದ್ದಾರೆ. ವರ್ಷಕ್ಕೆ ಸುಮಾರು 3.5 ಲಕ್ಷ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಪ್ರತಿದಿನ ಸರಾಸರಿ ಒಂದು ಸಾವಿರ ಮಂದಿ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವುದು ವಿಶೇಷ. ವೈದ್ಯರು ಮತ್ತು ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

200 ಹಾಸಿಗೆ, 3 ಎಕರೆ ಜಾಗದ ವ್ಯವಸ್ಥೆ:

“ಆಸ್ಪತ್ರೆಗೆ ಬರುವ ಮಕ್ಕಳೊಂದಿಗೆ ಅವರ ತಾಯಂದಿರು ಹಾಗೂ ಕುಟುಂಬದ ಸದಸ್ಯರು ಉಳಿದುಕೊಳ್ಳಲು ಅನುಕೂಲವಾಗುವಂತೆ 3 ಎಕರೆ ಜಾಗ ನೀಡುವಂತೆ ಮನವಿ ಮಾಡಿದ್ದಾರೆ. ಈ ಬೇಡಿಕೆಯನ್ನು ಪರಿಶೀಲಿಸಿ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಜತೆಗೆ ಆಸ್ಪತ್ರೆಯಲ್ಲಿ ಹೊಸದಾಗಿ 200 ಹಾಸಿಗೆಗಳನ್ನು ಸೇರ್ಪಡೆಗೊಳಿಸುವ ಯೋಜನೆ ರೂಪಿಸಲಾಗಿದ್ದು, ಈ ಸಂಬಂಧ ಈಗಾಗಲೇ ಮಾರ್ಗದರ್ಶನ ನೀಡಲಾಗಿದೆ. ಶೀಘ್ರದಲ್ಲೇ ಈ ಕೆಲಸ ಕೈಗೆತ್ತಿಕೊಳ್ಳಲಾಗುವುದು” ಎಂದು ತಿಳಿಸಿದರು.

ಜಿಲ್ಲೆಗಳಲ್ಲೇ ಕ್ಯಾನ್ಸರ್ ಚಿಕಿತ್ಸೆ ಆಸ್ಪತ್ರೆ:

“ಕ್ಯಾನ್ಸರ್ ಚಿಕಿತ್ಸೆಗೆಂದು ಎಲ್ಲರೂ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಬರುವ ಅನಿವಾರ್ಯತೆ ತಪ್ಪಬೇಕು. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತುಮಕೂರು, ಮೈಸೂರು, ಬಳ್ಳಾರಿ, ಕಲಬುರಗಿ ಹಾಗೂ ರಾಯಚೂರು ಸೇರಿದಂತೆ ಹಲವು ಕಡೆಗಳಲ್ಲಿ ಚಿಕಿತ್ಸಾ ವ್ಯವಸ್ಥೆ ಆರಂಭಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಈ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ” ಎಂದು ಹೇಳಿದರು.

ರೋಬೋಟಿಕ್ ಯಂತ್ರಗಳಿಗೆ ಸಂಪುಟ ಸಭೆಯಲ್ಲಿ ಅಸ್ತು:
“ಕಿದ್ವಾಯಿ ಆಸ್ಪತ್ರೆಯ ವೈದ್ಯಕೀಯ ಸೌಲಭ್ಯಗಳನ್ನು ಮತ್ತಷ್ಟು ಉನ್ನತೀಕರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈಗಾಗಲೇ ಒಂದು ರೋಬೋಟಿಕ್ ಯಂತ್ರ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಂದು ರೋಬೋಟಿಕ್ ಯಂತ್ರ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೆ ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ. ದೇಶದಲ್ಲೇ ಗೌರವಾನ್ವಿತ ಆಸ್ಪತ್ರೆಯಾಗಿರುವ ಕಿದ್ವಾಯಿಯಲ್ಲಿ ಇನ್ನಷ್ಟು ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡಲಾಗುವುದು ಎಂದು ಹೇಳಿದರು.

Leave a Reply

Your email address will not be published. Required fields are marked *