Greater Bengaluru News9 : ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಲಯದ ವಿಚಾರಣೆ ತೀವ್ರ ಕುತೂಹಲಕಾರಿ ಘಟ್ಟ ತಲುಪಿದೆ. ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಪಟ್ಟಣಗೆರೆ ಶೆಡ್ನ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್ ನ್ಯಾಯಾಲಯದ ವಿಚಾರಣೆ ವೇಳೆ ಉಲ್ಟಾ ಹೊಡೆದಿದ್ದಾರೆ. ಕೃತ್ಯ ನಡೆದ ದಿನ ಏನಾಯಿತು ಎಂಬುದು ತನಗೆ ತಿಳಿದಿಲ್ಲ ಹಾಗೂ ಆರೋಪಿಗಳನ್ನು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಪ್ರಾಸಿಕ್ಯೂಷನ್ಗೆ ಶಾಕ್ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ನಲ್ಲಿ ಆರೋಪಿಗಳನ್ನು ಗುರುತಿಸಲು ನಿರಾಕರಣೆ ವಿಚಾರಣೆ ವೇಳೆ ಸಾಕ್ಷ್ಯ ನುಡಿದ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್, ತಾನು ಆರೋಪಿಗಳನ್ನು ನೋಡಿಲ್ಲ ಮತ್ತು ಘಟನೆಯ ದಿನ ಶೆಡ್ನಲ್ಲಿ ಏನೆಲ್ಲಾ ನಡೆಯಿತು ಎಂಬ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ವಿಡಿಯೋ ಕಾನ್ಫರೆನ್ಸ್ (VC) ಮೂಲಕ ವಿಚಾರಣೆಗೆ ಹಾಜರಾಗಿದ್ದ ಆರೋಪಿಗಳಲ್ಲಿ ಯಾರೊಬ್ಬರನ್ನೂ ಗುರುತಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಎ10 ವಿನಯ್ ಗುರುತಿಸಿದ ಸಾಕ್ಷಿ, ಕಾರು ಬಂದಿದ್ದರ ಬಗ್ಗೆ ಮೌನ ವಿಚಾರಣೆಯ ಸಂದರ್ಭದಲ್ಲಿ ಪ್ರಕರಣದ 10ನೇ ಆರೋಪಿ (A10) ವಿನಯ್ ಅವರನ್ನು ಮಾತ್ರ ನರೇಂದ್ರ ಸಿಂಗ್ ಗುರುತಿಸಿದ್ದಾರೆ. ತಾನು ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಸಮಯದಿಂದಲೂ ವಿನಯ್ ಪರಿಚಯವಿದೆ ಎಂದಿರುವ ಅವರು, ವಿನಯ್ ಬಳಸುತ್ತಿದ್ದ ವಾಹನದ ಬಣ್ಣ ಕೆಂಪು ಎಂದು ಉತ್ತರಿಸಿದ್ದಾರೆ. ಆದರೆ, ರೇಣುಕಾಸ್ವಾಮಿ ಕೊಲೆ ನಡೆದ ದಿನ ವಿನಯ್ ಅವರ ಕಾರು ಶೆಡ್ಗೆ ಬಂದಿತ್ತೇ ಎಂಬ ಪ್ರಶ್ನೆಗೆ “ನನಗೆ ನೆನಪಿಲ್ಲ” ಎಂದು ಜಾರಿಕೊಳ್ಳುವ ಉತ್ತರ ನೀಡಿದ್ದಾರೆ.
ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಲು ಎಸ್ಪಿಪಿ ಮನವಿ ನರೇಂದ್ರ ಸಿಂಗ್ ಅವರ ಈ ವ್ಯತಿರಿಕ್ತ ಹೇಳಿಕೆಗಳ ಬೆನ್ನಲ್ಲೇ, ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ಇವರನ್ನು ‘ಪ್ರತಿಕೂಲ ಸಾಕ್ಷಿ’ (Hostile Witness) ಎಂದು ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈಗಾಗಲೇ ಈ ಪ್ರಕರಣದಲ್ಲಿ ಪುನೀತ್, ಯಶಸ್ ಸೂರ್ಯ ಹಾಗೂ ಸ್ವತಃ ರೇಣುಕಾಸ್ವಾಮಿ ಅವರ ತಾಯಿ ಸೇರಿದಂತೆ ಕೆಲವು ಪ್ರಮುಖ ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿರುವುದನ್ನು ವಿಚಾರಣೆ ವೇಳೆ ಉಲ್ಲೇಖಿಸಲಾಗಿದೆ.
ಕ್ರಾಸ್ ಎಕ್ಸಾಮಿನೇಷನ್ ಸೋಮವಾರಕ್ಕೆ ಮುಂದೂಡಿಕೆ ಸೆಕ್ಯೂರಿಟಿ ಗಾರ್ಡ್ ನರೇಂದ್ರ ಸಿಂಗ್ ಅವರ ಪಾಟೀಸವಾಲನ್ನು (Cross Examination) ಹಿಂದಿ ಭಾಷೆಯಲ್ಲಿ ಮುಂದುವರಿಸಲು ಸಮಯಾವಕಾಶ ಬೇಕಿದೆ ಎಂದು ಎಸ್ಪಿಪಿ ನ್ಯಾಯಾಲಯವನ್ನು ಕೋರಿದ್ದಾರೆ. ಅಗತ್ಯವಿದ್ದರೆ ಭಾಷಾಂತರಕಾರರ ನೆರವು ಪಡೆಯುವುದಾಗಿಯೂ ಅವರು ತಿಳಿಸಿದ್ದಾರೆ. ಇದಕ್ಕೆ ನಟ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉಭಯ ಪಕ್ಷಗಳ ವಾದಗಳನ್ನು ಆಲಿಸಿದ ನ್ಯಾಯಾಲಯವು, ನರೇಂದ್ರ ಸಿಂಗ್ ಅವರ ಕ್ರಾಸ್ ಎಕ್ಸಾಮಿನೇಷನ್ ಪ್ರಕ್ರಿಯೆಯನ್ನು ಸೋಮವಾರಕ್ಕೆ ಮುಂದೂಡಿ ಆದೇಶಿಸಿದೆ.

