ChatGPT Image Oct 3, 2026, 08_41_04 PM-modified
GREATER BENGALURU NEWS 9
Bengaluru Jatre

Greater Bengaluru News9 : ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಇದೆ. ಆ ಸಾಂಸ್ಕೃತಿಕ ಪರಂಪರೆಯನ್ನು ಬಲಪಡಿಸುವ ಹಾಗೂ ಎಲ್ಲರಿಗೂ ಬದುಕು ಕಟ್ಟಿಕೊಟ್ಟಿರುವ ಇಡೀ ನಗರವನ್ನು ಒಂದು ದೊಡ್ಡ ಊರಿನಂತೆ ಕಂಡು ಜನರೆಲ್ಲರೂ ಒಟ್ಟಾಗಿ ಸಂಭ್ರಮಿಸುವ ಉದ್ದೇಶದಿಂದ ‘ಬೆಂಗಳೂರು ಜಾತ್ರೆ’ ಹೆಸರಿನಲ್ಲಿ ಬೆಂಗಳೂರು ಊರಹಬ್ಬವನ್ನು ಡಿಸೆಂಬರ್ 4ರಿಂದ 13ರವರೆಗೆ ಆಯೋಜಿಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ನಗರದ ಬೆಳವಣಿಗೆಗೆ ತಕ್ಕಂತೆ ಜನರ ಜೀವನದ ಗುಣಮಟ್ಟವೂ ಸುಧಾರಿಸಬೇಕು. ಜೀವನದ ಗುಣಮಟ್ಟ ಕೇವಲ ಮೂಲಸೌಕರ್ಯಕ್ಕೆ ಸೀಮಿತವಲ್ಲ; ಕಲೆ, ಸಾಹಿತ್ಯ, ಸಂಸ್ಕೃತಿ, ಹವ್ಯಾಸಗಳು ಮತ್ತು ಸಾರ್ವಜನಿಕ ಚಟುವಟಿಕೆಗಳೂ ವ್ಯಕ್ತಿಯ ಜೀವನವನ್ನು ಸಮಗ್ರವಾಗಿಸುತ್ತವೆ. 2023 ರಲ್ಲೇ ಮೂಡಿದ ಈ ಆಲೋಚನೆಯನ್ನು ಈ ವರ್ಷ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಆಶಯದಂತೆ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಜನರ ಭಾಗವಹಿಸುವಿಕೆ ಮತ್ತು ವಿಕೇಂದ್ರೀಕೃತ ಆಯೋಜನೆ
ಬೆಂಗಳೂರು ಜಾತ್ರೆ ಕೇವಲ ಸರ್ಕಾರದ ಕಾರ್ಯಕ್ರಮವಾಗಿರದೆ, ಸಾರ್ವಜನಿಕರು, ಸಂಘ-ಸಂಸ್ಥೆಗಳು, ಕಲಾವಿದರು ಮತ್ತು ವಿವಿಧ ಸಮುದಾಯಗಳೇ ಭಾಗಿಯಾಗುವ ಜನಹಬ್ಬವಾಗಬೇಕು ಎಂಬುದು ಮುಖ್ಯ ಉದ್ದೇಶವಾಗಿದೆ. ಹಿಂದೆ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಸುಮಾರು 300 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿದ್ದ ಬೆಂಗಳೂರು ಇಂದು ಸುಮಾರು 750 ಚದರ ಕಿಲೋಮೀಟರ್ಗೆ ವಿಸ್ತರಿಸಿದೆ. ಇದಕ್ಕೆ ಅನುಗುಣವಾಗಿ, ಒಂದೇ ಸ್ಥಳಕ್ಕೆ ಸೀಮಿತಗೊಳಿಸದೆ ನಗರದ ವಿವಿಧ ಪಾಲಿಕೆಗಳು, ರಸ್ತೆಗಳು, ಉದ್ಯಾನವನಗಳು, ಸಭಾಂಗಣಗಳು, ಕಾಲೇಜು ಮೈದಾನಗಳು, ಮಾಲ್ಗಳು, ಟೆಕ್ ಪಾರ್ಕ್ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ವಿಕೇಂದ್ರೀಕೃತವಾಗಿ ನಡೆಸಲಾಗುತ್ತಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪೊಲೀಸ್ ಇಲಾಖೆ, ಬೆಸ್ಕಾಂ, ಬಿಡಬ್ಲ್ಯೂಎಸ್ಎಸ್ಬಿ, ಬೆಂಗಳೂರು ಮೆಟ್ರೋ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ವಸ್ತುಸಂಗ್ರಹಾಲಯಗಳು ಹಾಗೂ ನಾಗರಿಕ ಸಂಘಟನೆಗಳ ಸಹಯೋಗದಲ್ಲಿ ಹಬ್ಬ ಜರುಗಲಿದೆ.

ಉದ್ಘಾಟನೆ, ಸ್ಥಳೀಯ ವೇದಿಕೆಗಳು ಮತ್ತು ಸಮಾರೋಪ
ಡಿಸೆಂಬರ್ 4ರಂದು ಊರಹಬ್ಬದ ಉದ್ಘಾಟನೆ ನಡೆಯಲಿದೆ. ಹಳೆಯ ಬೆಂಗಳೂರಿನ ಪ್ರಮುಖ ಗುರುತುಗಳಲ್ಲೊಂದಾದ ಬ್ರಿಗೇಡ್ ರಸ್ತೆ ಮತ್ತು ಎಂ.ಜಿ. ರಸ್ತೆಯ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ಸಾಂಸ್ಕೃತಿಕ ವೇದಿಕೆಯನ್ನಾಗಿ ರೂಪಿಸಲಾಗುವುದು. ಸಂಚಾರ ಕಡಿಮೆ ಇರುವ ಎಂ.ಜಿ. ರಸ್ತೆ ಮತ್ತು ಕಬ್ಬನ್ ರಸ್ತೆ ನಡುವಿನ ಕಾಮರಾಜ ರಸ್ತೆ ಸಂಪರ್ಕ ರಸ್ತೆಯಲ್ಲಿ ವೇದಿಕೆ ನಿರ್ಮಿಸಲಾಗಿದ್ದು ರಾಜ್ಯದ ವಿವಿಧ ಭಾಗಗಳಿಂದ ಸುಮಾರು 500 ಜನಪದ ಕಲಾವಿದರು 20 ಕಲಾತಂಡಗಳೊಂದಿಗೆ ಆಗಮಿಸಿ ಕರ್ನಾಟಕದ ಬಹುಸಂಸ್ಕೃತಿಯನ್ನು ಪ್ರದರ್ಶಿಸುವ ಮೆರವಣಿಗೆನಡೆಸಲಿದ್ದಾರೆ. ಅಲ್ಲದೆ, ಕಲಾ ಪ್ರದರ್ಶನ ನೀಡಲಿದ್ದಾರೆ.

ಫ್ರೀಡಂ ಪಾರ್ಕ್‌ನಲ್ಲಿ ಆಹಾರ ಮೇಳ
ಮೆಜೆಸ್ಟಿಕ್ ಸಮೀಪದ ಫ್ರೀಡಂ ಪಾರ್ಕ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳ ಮೇಳ ಮತ್ತು ಆಹಾರ ಮೇಳ ಆಯೋಜಿಸಲಾಗುವುದು. ವಿವಿಧ ವಲಯಗಳಲ್ಲಿ ವೇದಿಕೆಗಳು: ಬೆಂಗಳೂರು ಕೇಂದ್ರ ಭಾಗದ ಜೊತೆಗೆ ಉಳಿದ ನಾಲ್ಕು ಪಾಲಿಕೆಗಳಲ್ಲಿಯೂ ಮೂರು-ನಾಲ್ಕು ದಿನಗಳ ಕಾಲ ಸ್ಥಳೀಯ ಮೈದಾನಗಳಲ್ಲಿ ಶಾಸ್ತ್ರೀಯ, ಜನಪದ ಮತ್ತು ಆಧುನಿಕ ನೃತ್ಯ, ಸಂಗೀತ ಹಾಗೂ ಸಾಹಿತ್ಯ ಕಾರ್ಯಕ್ರಮಗಳು ನಡೆಯಲಿವೆ. ಪಶ್ಚಿಮ ಭಾಗದಲ್ಲಿ ರಾಮಮಂದಿರ ಮೈದಾನ, ದಕ್ಷಿಣದಲ್ಲಿ ಶಾಲಿನಿ ಮೈದಾನ ಹಾಗೂ ಪೂರ್ವದಲ್ಲಿ ಐಟಿಐ ಮೈದಾನ ಸೇರಿದಂತೆ ವಿವಿಧೆಡೆ ವೇದಿಕೆಗಳನ್ನು ರೂಪಿಸಲಾಗುತ್ತಿದೆ.

ಡಿಸೆಂಬರ್ 13 ರಂದು ಸಮಾರೋಪ
ಮಾಣೆಕ್ಷಾ ಪರೇಡ್ ಮೈದಾನದಲ್ಲಿ ಸಂಜೆ ಸಮಾರೋಪ ಸಮಾರಂಭ ಜರುಗಲಿದ್ದು, ಖ್ಯಾತ ಕನ್ನಡ ಕಲಾವಿದರಾದ ಸಂಜಿತ್ ಹೆಗಡೆ ಹಾಗೂ ಪ್ರಸಿದ್ಧ ಕಲಾವಿದೆ ಸುನಿಧಿ ಚೌಹಾಣ್ ಪಾಲ್ಗೊಳ್ಳಲಿದ್ದಾರೆ.

ಪುಸ್ತಕ ಮೇಳ ಮತ್ತು ಬೆಂಗಳೂರು ಇತಿಹಾಸದ ಅನಾವರಣ
ಹಿಂದೆ ಪ್ರಸಿದ್ಧವಾಗಿದ್ದ ಬೆಂಗಳೂರು ಪುಸ್ತಕ ಮೇಳವನ್ನು ಬೆಂಗಳೂರು ಜಾತ್ರೆಯಲ್ಲಿ ಪುನರಾರಂಭಿಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪುಸ್ತಕ ಪ್ರಾಧಿಕಾರ, ಸಾಹಿತ್ಯ ಪ್ರಾಧಿಕಾರ ಹಾಗೂ ಜಿಬಿಎ ಸಹಯೋಗದಲ್ಲಿ ಡಿಸೆಂಬರ್ 11, 12 ಮತ್ತು 13ರಂದು ಪುಸ್ತಕ ಮೇಳ ಆಯೋಜಿಸಲು ಉದ್ದೇಶಿಸಲಾಗಿದ್ದು, ಶೀಘ್ರವೇ ಸ್ಥಳವನ್ನು ನಿಗದಿಪಡಿಸಲಾಗುವುದು. ಪುಸ್ತಕ ಮೇಳ ನಡೆಯುವ ಸ್ಥಳದಲ್ಲೇವೇದಿಕೆ, ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಲಿದ್ದು, ಕಲಾವಿದರ ಆಹ್ವಾನ ಮತ್ತು ಕಾರ್ಯಕ್ರಮ ನಿರ್ವಹಣೆಯನ್ನು ಸಂಬಂಧಿಸಿದ ಸಂಸ್ಥೆಗಳು ನಡೆಸಲಿವೆ.

Leave a Reply

Your email address will not be published. Required fields are marked *