ChatGPT Image Oct 3, 2026, 08_41_04 PM-modified
GREATER BENGALURU NEWS 9
Janakalyana

Greater Bengaluru News9 : ರಾಜಧಾನಿ ಬೆಂಗಳೂರಿನ ಜನತೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದ್ದು, ‘ಸ್ವಾಭಿಮಾನದ ಬದುಕು, ಸಮೃದ್ಧ ಬೆಂಗಳೂರು’ ಎಂಬ ಧ್ಯೇಯವಾಕ್ಯದೊಂದಿಗೆ ಬೃಹತ್ ‘ಜನಕಲ್ಯಾಣ ಮಹೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಿದೆ. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ನೇತೃತ್ವದಲ್ಲಿ ಈ ಸವಲತ್ತುಗಳ ವಿತರಣಾ ಸಮಾರಂಭ ನಡೆಯಲಿದ್ದು, ಸಮಾಜದ ವಿವಿಧ ವರ್ಗಗಳ ಜನರ ಸ್ವಾವಲಂಬಿ ಬದುಕಿಗೆ ಸರ್ಕಾರ ಆಸರೆಯಾಗಲಿದೆ.

ಬೆಂಗಳೂರಿನ ಐದು ನಗರಪಾಲಿಕೆಗಳ ವ್ಯಾಪ್ತಿಯ ಮಹಿಳೆಯರು, ಪೌರಕಾರ್ಮಿಕರು, ಬೀದಿ ವ್ಯಾಪಾರಿಗಳು, ಯುವಜನತೆ ಮತ್ತು ವಿಶೇಷ ಚೇತನರ ಆರ್ಥಿಕ ಸಬಲೀಕರಣಕ್ಕಾಗಿ ಈ ಬೃಹತ್ ಕಲ್ಯಾಣ ಯೋಜನೆಯನ್ನು ರೂಪಿಸಲಾಗಿದೆ. ಸುಮಾರು ₹352.81 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯಡಿ, ಸರಿಸುಮಾರು 17,000 ಅರ್ಹ ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ನೇರವಾಗಿ ವಿವಿಧ ಸೌಲಭ್ಯಗಳನ್ನು ವಿತರಿಸಲಿದ್ದಾರೆ.

ಈ ಜನಕಲ್ಯಾಣ ಮಹೋತ್ಸವದಲ್ಲಿ ಬೀದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ (E-vending) ಮತ್ತು ಸಿಎನ್‌ಜಿ (CNG) ವಾಹನಗಳು ಹಾಗೂ ‘ಸಾರಥಿ’ ಯೋಜನೆಯಡಿ ಎಲೆಕ್ಟ್ರಿಕ್ ಆಟೋ ರಿಕ್ಷಾಗಳನ್ನು ನೀಡಲಾಗುತ್ತಿದೆ. ಇದರೊಂದಿಗೆ ಪೌರಕಾರ್ಮಿಕರು, ದುಡಿಯುವ ಮಹಿಳೆಯರು ಹಾಗೂ ವಿಶೇಷ ಚೇತನರಿಗೆ ಉಚಿತ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ವೀಲ್ ಚೇರ್‌ಗಳನ್ನು ವಿತರಿಸಲಾಗುವುದು. ಅಷ್ಟೇ ಅಲ್ಲದೆ, ಮಹಿಳೆಯರಿಗೆ ಹೊಲಿಗೆ ಯಂತ್ರ, ಯುವಕರಿಗೆ ಕೌಶಲ್ಯ ತರಬೇತಿ, ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಹಾಗೂ ವಸತಿ ರಹಿತರಿಗೆ ಸ್ವಂತ ಮನೆಯ ಕನಸನ್ನು ನನಸಾಗಿಸುವ ಮಹತ್ವದ ಯೋಜನೆಗಳ ಸವಲತ್ತುಗಳನ್ನು ಸಹ ನೀಡಲಾಗುತ್ತಿದೆ.

ಈ ಬೃಹತ್ ಸವಲತ್ತು ವಿತರಣಾ ಸಮಾರಂಭವು ನವೆಂಬರ್ 30, 2026ರಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದ ಗೇಟ್ ನಂಬರ್ 2ರ ‘ತ್ರಿಪುರವಾಸಿನಿ’ ಆವರಣದಲ್ಲಿ ನಡೆಯಲಿದೆ. ನಗರದ ಸಾವಿರಾರು ಫಲಾನುಭವಿಗಳು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸರ್ಕಾರದ ಜನಪರ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *