Greater Bengaluru News9 : ಹಾಸನದ ಅಧಿದೇವತೆ ಶ್ರೀ ಹಾಸನಾಂಬೆಯ ಸಾರ್ವಜನಿಕ ದರ್ಶನ ಆರಂಭವಾಗುತ್ತಿದ್ದಂತೆಯೇ ದೇವಾಲಯಕ್ಕೆ ಭಕ್ತರ ಮಹಾಪೂರವೇ ಹರಿದುಬಂದಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ದರ್ಶನದ ಮೊದಲ ದಿನವೇ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದು, ದೇವಿಯ ದರ್ಶನ ಪಡೆಯಲು ಮುಂಜಾನೆ 3 ಗಂಟೆಯಿಂದಲೇ ಸುದೀರ್ಘ ಸರತಿ ಸಾಲಿನಲ್ಲಿ ನಿಂತಿದ್ದರು. ಸುಮಾರು 6ರಿಂದ 7 ಗಂಟೆಗಳ ಕಾಲ ಕಾದು ದರ್ಶನ ಪಡೆದ ಭಕ್ತರು ಪುನೀತರಾದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ರೈಲು, ಬಸ್ ಸೇರಿದಂತೆ ನಾನಾ ವಾಹನಗಳ ಮೂಲಕ ಮಧ್ಯರಾತ್ರಿಯಿಂದಲೇ ನಗರಕ್ಕೆ ಆಗಮಿಸಿದ್ದರಿಂದ ಧರ್ಮದರ್ಶನದ ಸಾಲು ಭಕ್ತರಿಂದ ತುಂಬಿ ತುಳುಕುತ್ತಿತ್ತು.
ಹಾಸನಾಂಬೆಯ ಜಾಗತಿಕ ಖ್ಯಾತಿಗೆ ಸಾಕ್ಷಿ ಎನ್ನುವಂತೆ ಈ ಬಾರಿ ದರ್ಶನದ ಆನ್ಲೈನ್ ಬುಕಿಂಗ್ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ದೂರದ ಲಂಡನ್ ಮತ್ತು ನ್ಯೂಯಾರ್ಕ್ನಿಂದಲೂ ಭಕ್ತರು ದರ್ಶನಕ್ಕಾಗಿ ಟಿಕೆಟ್ ಕಾಯ್ದಿರಿಸಿದ್ದಾರೆ. ಮೊದಲ ದಿನವೇ ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ ಸುಮಾರು 1 ಕೋಟಿ ರೂ.ಗೂ ಹೆಚ್ಚು ಆದಾಯ ಸಂಗ್ರಹವಾಗಿರುವುದು ವಿಶೇಷ. ಇನ್ನು ಕೇವಲ ಮೂರೇ ದಿನಗಳಲ್ಲಿ 5 ಕೋಟಿ ರೂಪಾಯಿ ಆದಾಯ ಹರಿದುಬಂದಿದ್ದು, ಈ ಬಾರಿಯ ಹಾಸನಾಂಬೆ ಉತ್ಸವವು ಆದಾಯ ಸಂಗ್ರಹದಲ್ಲಿ ಹೊಸ ದಾಖಲೆಯನ್ನೇ ಬರೆದಿದೆ.
ದರ್ಶನೋತ್ಸವದ ಸಂಭ್ರಮದ ನಡುವೆಯೇ ಭಕ್ತರಿಗೆ ನೀಡಲಾಗುವ ಲಾಡು ಪ್ರಸಾದದ ದರದ ವಿಚಾರದಲ್ಲಿ ತೀವ್ರ ಗೊಂದಲ ಸೃಷ್ಟಿಯಾಯಿತು. ಪ್ರತಿ ಲಾಡಿಗೆ 56 ರೂ. 16 ಪೈಸೆಯಂತೆ ಟೆಂಡರ್ ನೀಡಲಾಗಿದ್ದರೂ, ದೇವಾಲಯದ ಆವರಣದಲ್ಲಿ ಭಕ್ತರಿಗೆ 100 ರೂ.ಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ವಿಷಯ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಲಾಡು ದರ ಹೆಚ್ಚಳದ ಕುರಿತು ಸಂಬಂಧಪಟ್ಟ ಸಂಸ್ಥೆಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ಲಾಡು ಮಾರಾಟದ ದರವನ್ನು ತಕ್ಷಣವೇ ಕಡಿಮೆ ಮಾಡುವಂತೆ ಖಡಕ್ ಸೂಚನೆ ನೀಡಿದರು. “ನಾನು ಮಿನಿಸ್ಟರ್, ನಾನೇ ಸರ್ಕಾರ. ನಾನು ಹೇಳಿದ್ದೇ ಅಂತಿಮ. 100 ರೂಪಾಯಿಗೆ ಲಾಡು ಮಾರಾಟ ಮಾಡಿದರೆ ಇಲ್ಲೇ ಪ್ರತಿಭಟನೆ ಮಾಡಿಸುತ್ತೇನೆ. ಎರಡು ಲಾಡುಗಳನ್ನು 60 ರೂ.ಗೆ ಮಾರಾಟ ಮಾಡಬೇಕು. ಅಲ್ಲದೆ 1,000 ರೂ. ಹಾಗೂ 300 ರೂ. ವಿಶೇಷ ದರ್ಶನದ ಟಿಕೆಟ್ ಪಡೆದ ಭಕ್ತರಿಗೆ ಉಚಿತವಾಗಿ ಲಾಡು ನೀಡಬೇಕು,” ಎಂದು ಎಚ್ಚರಿಕೆ ನೀಡುವ ಮೂಲಕ ಭಕ್ತರ ಹಿತ ಕಾಯುವ ಭರವಸೆ ನೀಡಿದರು.

