ChatGPT Image Oct 3, 2026, 08_41_04 PM-modified
GREATER BENGALURU NEWS 9
PG

Greater Bengaluru News9: ಬೆಂಗಳೂರಿನಲ್ಲಿ ನೂರಾರು ಪೇಯಿಂಗ್ ಗೆಸ್ಟ್‌ ಅಂದರೆ ಪಿಜಿಗಳು ನಿಯಮಗಳನ್ನ ಗಾಳಿಗೆ ತೂರಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಹೈಕೋರ್ಟ್‌ ಮಹತ್ವದ ಸ್ಪಷ್ಟನೆ ನೀಡಿದೆ. ನಿಯಮ ಉಲ್ಲಂಘಿಸುತ್ತಿರುವ ಇಂತಹ ಪಿಜಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬಿಬಿಎಂಪಿಗೆ ಯಾವುದೇ ನಿರ್ಬಂಧವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಅಲ್ಲದೆ, ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಭಾರಿ ದಂಡ ವಿಧಿಸಿ ಬಿಸಿ ಮುಟ್ಟಿಸಿದೆ.

ಪಿಜಿ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ಸ್ಪಷ್ಟನೆ ನೀಡಿದೆ. ಈ ವಿಚಾರಣೆಯಲ್ಲಿ ಕೇವಲ ನಾಲ್ಕು ಪಿಜಿಗಳು ಮಾತ್ರ ಅರ್ಜಿದಾರರಾಗಿದ್ದು, ಇಡೀ ಪಿಜಿ ಮಾಲೀಕರ ಸಂಘವೇ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಹಾಗಾಗಿ, ಈ ಪ್ರಕರಣದಲ್ಲಿ ಪಕ್ಷಕಾರರಲ್ಲದ, ನಿಯಮ ಪಾಲಿಸದ ಉಳಿದೆಲ್ಲಾ ಪಿಜಿಗಳ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮುಕ್ತ ಅವಕಾಶವಿದೆ. ಇದನ್ನ ನಗರದ ಎಲ್ಲ ಪಿಜಿಗಳನ್ನ ಮುಚ್ಚುವ ಸಾಮೂಹಿಕ ಆದೇಶ ಎಂದು ತಪ್ಪಾಗಿ ಅರ್ಥೈಸಬಾರದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ನ್ಯಾಯಾಲಯದ ಮೊರೆಹೋಗಿರುವ ಪಿಜಿ ಮಾಲೀಕರಿಗೆ ತಮ್ಮಲ್ಲಿರುವ ನಿರ್ವಹಣಾ ಲೋಪಗಳನ್ನ ಸರಿಪಡಿಸಲು ನ್ಯಾಯಾಲಯ ಒಂದು ವಾರದ ಗಡುವು ನೀಡಿದೆ. ಭದ್ರತೆ, ಸಿಸಿಟಿವಿ ಅಳವಡಿಕೆ, ಅಗ್ನಿಶಾಮಕ ವ್ಯವಸ್ಥೆ, ಗುಣಮಟ್ಟದ ಆಹಾರ ಮತ್ತು ನೀರಿನ ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ ಪ್ರಮಾಣಪತ್ರ ಹಾಗೂ ನಿರ್ದಿಷ್ಟ ವೇಳಾಪಟ್ಟಿಯನ್ನ ಸಲ್ಲಿಸುವಂತೆ ಸೂಚಿಸಲಾಗಿದೆ.

ಪಿಜಿಗಳನ್ನು ಏಕಾಏಕಿ ಸೀಲ್ ಮಾಡಿದರೆ, ಅಲ್ಲಿ ವಾಸಿಸುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ಬೀದಿಗೆ ಬೀಳುತ್ತಾರೆ. ಇದು ಅವರನ್ನೇ ನೆಚ್ಚಿಕೊಂಡಿರುವ ಐಟಿ ಸಂಸ್ಥೆಗಳು ಹಾಗೂ ವ್ಯವಹಾರಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕಾಗಿ ಇದುವರೆಗೆ ಕಠಿಣ ಕ್ರಮ ಕೈಗೊಳ್ಳದೆ ಸಂಯಮ ವಹಿಸಲಾಗಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಇನ್ನೂ, ಇತ್ತೀಚೆಗೆ ಜಿಬಿಎ ನಡೆಸಿದ ಪರಿಶೀಲನೆಯಲ್ಲಿ ಬೆಂಗಳೂರಿನ ಪಿಜಿಯಲ್ಲಿನ ಗಂಭೀರ ಲೋಪಗಳು ಬೆಳಕಿಗೆ ಬಂದಿವೆ. ನಗರದಲ್ಲಿರುವ ಒಟ್ಟು 5,480 ಪಿಜಿಗಳ ಪೈಕಿ 3,597 ಪಿಜಿಗಳು ಅಗತ್ಯ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ. ವರದಿಗಳ ಪ್ರಕಾರ, ನಗರದ ಶೇ.65 ರಷ್ಟು ಪಿಜಿಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ.

ಮತ್ತೊಂದು ಪ್ರಕರಣದಲ್ಲಿ, ಸೂಕ್ತ ದಾಖಲೆಗಳನ್ನ ಪರಿಶೀಲಿಸದೆ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಸುಳ್ಳು ಆರೋಪ ಮಾಡಿದ್ದ ಜೆ.ಪಿ. ನಗರದ 8ನೇ ಬ್ಲಾಕ್‌ನ ‘ಆರ್ಯ ಹಂಸ ಅಪಾರ್ಟ್‌ಮೆಂಟ್’ ನಿವಾಸಿಗಳಿಗೆ ಹೈಕೋರ್ಟ್ ಒಂದು ಲಕ್ಷ ರೂ. ದಂಡ ವಿಧಿಸಿದೆ. ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ಎಚ್. ಶಾಂತಿಭೂಷಣ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದ್ದು, ದಂಡದ ಮೊತ್ತವನ್ನ ವಾಯುಪಡೆಯ ಕಮಾಂಡ್ ಆಸ್ಪತ್ರೆಗೆ ಜಮೆ ಮಾಡುವಂತೆ ಸೂಚಿಸಿದೆ.

“ಅರ್ಜಿದಾರರು ಕೇವಲ ಊಹಾಪೋಹಗಳ ಆಧಾರದ ಮೇಲೆ ಅಧಿಕಾರಿಗಳ ಮೇಲೆ ಗಂಭೀರ ಆರೋಪ ಮಾಡಿ ನ್ಯಾಯಾಲಯದ ಸಮಯವನ್ನ ಹಾಳು ಮಾಡಿದ್ದಾರೆ. ಪ್ರಸ್ತುತ ಕಟ್ಟಡ ನಿರ್ಮಿಸಿರುವ ಜಾಗ ಉದ್ಯಾನವನದ್ದಲ್ಲ, ಬದಲಾಗಿ ಬಿಡಿಎ ನಿಗದಿಪಡಿಸಿದ ವಸತಿ ನಿವೇಶನವಾಗಿದೆ. ಒತ್ತುವರಿ ಆರೋಪದಲ್ಲಿ ಯಾವುದೇ ಹುರುಳಿಲ್ಲ” ಎಂದು ನ್ಯಾಯಪೀಠ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

Leave a Reply

Your email address will not be published. Required fields are marked *