Greater Bengaluru News9 : ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿ, ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮೆಟ್ರೋ ಮಾರ್ಗದ ಮೊದಲ ಹಂತಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಮೆಟ್ರೋದಲ್ಲಿ ಐಐಎಂಬಿ ನಿಲ್ದಾಣದವರೆಗೆ ಪ್ರಯಾಣಿಸಲಿದ್ದಾರೆ.
ನವೆಂಬರ್ 13ರಂದು ಮೋದಿ ವೇಳಾಪಟ್ಟಿ ಹೀಗಿದೆ
- ಬೆಳಗ್ಗೆ 10.05: ನವದೆಹಲಿಯಿಂದ ಆಗಮಿಸಿ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಭೇಟಿ.
- ಬೆಳಗ್ಗೆ 10.45: ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿ.
- ಮಧ್ಯಾಹ್ನ 12.40: ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಆಗಮನ.
- ಮಧ್ಯಾಹ್ನ 12.45: ಪಿಂಕ್ ಲೈನ್ ಮೆಟ್ರೋಗೆ ಹಸಿರು ನಿಶಾನೆ.
- ಮಧ್ಯಾಹ್ನ 1.15: ಐಐಎಂಬಿ ಆಡಿಟೋರಿಯಂನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಕಾರ್ಯಕ್ರಮ.
- ಮಧ್ಯಾಹ್ನ 2.30: ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಪ್ರಯಾಣ.
- ಮಧ್ಯಾಹ್ನ 3.30: ಮೈಸೂರಿನ ಕೆ.ಸಿ. ಲೇಔಟ್ ಪಾರ್ಕ್ನಲ್ಲಿ ಭಾರತ್ ವ್ಯಾನ್ ಕಾರ್ಯಕ್ರಮದಲ್ಲಿ ಭಾಗಿ.
- ಸಂಜೆ 4.00: ಮೈಸೂರು ಕಾಸ್ಮೋಸ್ ಉದ್ಘಾಟನೆ.
- ಸಂಜೆ 6.05: ಮೈಸೂರಿನಿಂದ ನವದೆಹಲಿಗೆ ನಿರ್ಗಮನ.
ಮೈಸೂರಿನಲ್ಲಿ ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ಪ್ಲಾನೆಟೋರಿಯಂ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ಅವರ ಮೈಸೂರು ಭೇಟಿಯ ಮತ್ತೊಂದು ಪ್ರಮುಖ ಆಕರ್ಷಣೆ ವಿಶ್ವದ ಮೊದಲ ಟಿಲ್ಟೆಡ್ ಎಲ್ಇಡಿ ಡೋಮ್ ಪ್ಲಾನೆಟೋರಿಯಂ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಮೈಸೂರು ವಿಶ್ವವಿದ್ಯಾಲಯದ ಶ್ರೀ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ಈ ಅತ್ಯಾಧುನಿಕ ತಾರಾಲಯ ನಿರ್ಮಾಣಗೊಂಡಿದೆ.
ಸುಮಾರು ಮೂರು ಎಕರೆ ಜಾಗದಲ್ಲಿ ಬರೋಬ್ಬರಿ 91 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ಸಾಕಾರಗೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ MPLADS ನಿಧಿ ಸೇರಿದಂತೆ ಕೇಂದ್ರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ತಾರಾಲಯ ನಿರ್ಮಿಸಲಾಗಿದೆ.
ಬೆಂಗಳೂರು ಮೆಟ್ರೋ ಉದ್ಘಾಟನೆಯ ಜೊತೆಗೆ ಮೈಸೂರಿನಲ್ಲೂ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿರುವುದರಿಂದ ನವೆಂಬರ್ 13ರ ಪ್ರವಾಸ ಕುತೂಹಲ ಮೂಡಿಸಿದೆ.

