Greater Bengaluru News9 : ರಾಜ್ಯದಲ್ಲಿ ದಾಖಲಾಗುವ ವಂಚನೆ, ಹಣ ದುರುಪಯೋಗ ಹಾಗೂ ಆರ್ಥಿಕ ಅಪರಾಧ ಪ್ರಕರಣಗಳ ತನಿಖಾ ಅಧಿಕಾರಿಗಳ (IO) ಶ್ರೇಣಿಯನ್ನು ನಿಗದಿಪಡಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ (DG & IGP) ಡಾ. ಎಂ.ಎ. ಸಲೀಂ ಮಹತ್ವದ ಸುತ್ತೋಲೆ ಹೊರಡಿಸಿದ್ದಾರೆ.
ಈ ಹಿಂದೆ ಫೆಬ್ರವರಿ 27, 2026ರಂದು ಹೊರಡಿಸಲಾಗಿದ್ದ ಪರಿಷ್ಕೃತ ಸ್ಥಾಯಿ ಆದೇಶದಲ್ಲಿ (Standing Order No. 1006) ಸ್ಥಳೀಯ ಪೊಲೀಸರು ಮತ್ತು ಸಿಐಡಿ (CID) ತನಿಖೆ ನಡೆಸಬಹುದಾದ ಪ್ರಕರಣಗಳ ಆರ್ಥಿಕ ವ್ಯಾಪ್ತಿಯನ್ನು (Pecuniary Jurisdiction) ನಿಗದಿಪಡಿಸಲಾಗಿತ್ತು. ಆದರೆ, ಆ ಆದೇಶದಲ್ಲಿ ಯಾವ ಶ್ರೇಣಿಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 30ರ ಅಡಿಯಲ್ಲಿ ನವೆಂಬರ್ 12, 2026ರಂದು ಈ ತಿದ್ದುಪಡಿ ಸುತ್ತೋಲೆಯನ್ನು (Corrigendum) ಹೊರಡಿಸಲಾಗಿದೆ.
ತನಿಖಾಧಿಕಾರಿಗಳ ಶ್ರೇಣಿಯ ವಿವರ: ನೂತನ ಸುತ್ತೋಲೆಯ ಪ್ರಕಾರ, ವಂಚನೆ ಮೊತ್ತದ ಆಧಾರದ ಮೇಲೆ ತನಿಖಾಧಿಕಾರಿಗಳ ಜವಾಬ್ದಾರಿಯನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ:
- 1 ಕೋಟಿ ರೂ. ವರೆಗಿನ ವಂಚನೆ ಪ್ರಕರಣಗಳು: ವಂಚನೆ, ಹಣ ದುರುಪಯೋಗ ಹಾಗೂ ಇತರ ಆರ್ಥಿಕ ಅಪರಾಧ ಪ್ರಕರಣಗಳಲ್ಲಿ ವಂಚನೆಯ ಮೊತ್ತವು 1 ಕೋಟಿ ರೂಪಾಯಿವರೆಗೆ ಇದ್ದರೆ, ಅಂತಹ ಪ್ರಕರಣಗಳ ತನಿಖೆಯನ್ನು ಪೊಲೀಸ್ ಸಬ್-ಇನ್ಸ್ಪೆಕ್ಟರ್ (PSI) ಶ್ರೇಣಿಯ ಅಧಿಕಾರಿಗಳು ನಡೆಸಬಹುದು
- 1 ಕೋಟಿ ರೂ. ಗಿಂತ ಹೆಚ್ಚಿನ ವಂಚನೆ ಪ್ರಕರಣಗಳು: ವಂಚನೆ, ಹಣ ದುರುಪಯೋಗ ಮತ್ತು ಆರ್ಥಿಕ ಅಪರಾಧಗಳ ಮೊತ್ತವು 1 ಕೋಟಿ ರೂಪಾಯಿಗಿಂತ ಹೆಚ್ಚಿದ್ದರೆ, ಅಂತಹ ಪ್ರಕರಣಗಳ ತನಿಖೆಯನ್ನು ಕಡ್ಡಾಯವಾಗಿ ಪೊಲೀಸ್ ಇನ್ಸ್ಪೆಕ್ಟರ್ (PI) ಅಥವಾ ಅದಕ್ಕಿಂತ ಮೇಲ್ಪಟ್ಟ ಶ್ರೇಣಿಯ ಅಧಿಕಾರಿಗಳೇ ನಡೆಸಬೇಕು.
ರಾಜ್ಯದ ಎಲ್ಲಾ ಘಟಕ ಅಧಿಕಾರಿಗಳು (Unit Officers) ಮತ್ತು ಪೊಲೀಸ್ ಅಧಿಕಾರಿಗಳು ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಂ ಆದೇಶದಲ್ಲಿ ತಿಳಿಸಿದ್ದಾರೆ.

