Greater Bengaluru News9 : ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ 11 ವರ್ಷದ ಬಾಲಕನೊಬ್ಬ ವಿದ್ಯುತ್ ತಂತಿ ಸ್ಪರ್ಶಿಸಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಸ್ಕಾಂನ ನೆಲಮಂಗಲ ಉಪವಿಭಾಗ ಹಾಗೂ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇವರಚಿಕ್ಕನಹಳ್ಳಿಯಲ್ಲಿ ನಡೆದಿದೆ.
ದರ್ಶನ್ (11) ಗಾಯಗೊಂಡ ಬಾಲಕ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಬಾಲಕನನ್ನು ಮನೆಗೆ ಕಳುಹಿಸಲಾಗಿದ್ದು, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಬಾಲಕನ ತಂದೆ ಕುಪ್ಪಣ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನೆಲಮಂಗಲ ಬೆಸ್ಕಾಂ ಉಪವಿಭಾಗದಲ್ಲಿ ಆಗಾಗ ಇಂತಹ ಘಟನೆಗಳು ನಡೆಯುತ್ತಿದ್ದರೂ ಬೆಸ್ಕಾಂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ ಅನ್ನೋದು ಸ್ಥಳೀಯ ಜನರ ಆಕ್ರೋಶವಾಗಿದೆ.
ದೀಪಾವಳಿ ಅಂಗಡಿ ಪೂಜೆಯ ಹಿನ್ನೆಲೆಯಲ್ಲಿ ಕುಪ್ಪಣ್ಣ ಅವರ ಇಬ್ಬರು ಮಕ್ಕಳು ದೇವರಚಿಕ್ಕನಹಳ್ಳಿಯಲ್ಲಿರುವ ತಂದೆಯ ಗ್ಯಾರೇಜ್‌ಗೆ ಬಂದಿದ್ದರು. ಈ ವೇಳೆ ರಾತ್ರಿ ಸುಮಾರು 8 ಗಂಟೆಗೆ ದರ್ಶನ್ ಕಟ್ಟಡದ ಮೇಲ್ಛಾವಣಿಯಲ್ಲಿರುವ ವಾಶ್‌ರೂಂಗೆ ತೆರಳಿದ್ದಾನೆ. ಆಗ ಕಟ್ಟಡದ ಸಮೀಪದಲ್ಲಿದ್ದ ಬೆಸ್ಕಾಂ ವಿದ್ಯುತ್ ತಂತಿ ಆತನ ಕೈಗೆ ತಗುಲಿದೆ. ಪರಿಣಾಮ ತೀವ್ರ ವಿದ್ಯುತ್ ಆಘಾತಕ್ಕೆ ಒಳಗಾದ ಬಾಲಕನ ಬಲಗೈ ಚರ್ಮ ಸುಟ್ಟುಹೋಗಿದ್ದು, ಎದೆ, ಬೆನ್ನು ಹಾಗೂ ತಲೆಯ ಕೂದಲಿಗೂ ಸುಟ್ಟ ಗಾಯಗಳಾಗಿವೆ.
ಘಟನೆ ನಡೆದ ತಕ್ಷಣ ತಂದೆ ಕುಪ್ಪಣ್ಣ ಮಗನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಈ ಅವಘಡಕ್ಕೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಕುಟುಂಬದ ಆರೋಪವಾಗಿದೆ. ಕಟ್ಟಡದ ಸಮೀಪ ಅಪಾಯಕಾರಿಯಾಗಿ ಹಾದುಹೋಗಿದ್ದ ವಿದ್ಯುತ್ ತಂತಿ ಬಗ್ಗೆ ಈ ಹಿಂದೆಯೇ ಕಟ್ಟಡದಲ್ಲಿದ್ದ ಅಂಗಡಿ ಮಾಲೀಕರು ಹಾಗೂ ಬಾಲಕನ ತಂದೆ ಬೆಸ್ಕಾಂ ಸಿಬ್ಬಂದಿಗೆ ದೂರು ನೀಡಿದ್ದರು ಎನ್ನಲಾಗಿದೆ. ಮಕ್ಕಳು ಆಟವಾಡುವಾಗ ವಿದ್ಯುತ್ ತಂತಿ ತಗುಲುವ ಅಪಾಯವಿದೆ. ಹೀಗಾಗಿ ತಂತಿಯನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಬೆಸ್ಕಾಂ ಸಿಬ್ಬಂದಿ, ‘ಸದ್ಯ ಇಲ್ಲಿ ಕೆಲಸ ನಡೆಯುತ್ತಿದೆ. ಕೆಲಸ ಮುಗಿದ ಬಳಿಕ ಸರಿಪಡಿಸುತ್ತೇವೆ. ಬೆಸ್ಕಾಂ ಕಚೇರಿಗೆ ಬಂದು ಮಾತನಾಡಿ’ ಎಂದು ಉಡಾಫೆಯ ಉತ್ತರ ನೀಡಿದ್ದರು ಎನ್ನಲಾಗಿದೆ. ಇದೀಗ ಅದೇ ವಿದ್ಯುತ್ ತಂತಿ ಬಾಲಕನ ಪಾಲಿಗೆ ಅಪಾಯವಾಗಿ ಪರಿಣಮಿಸಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಮಗನಿಗೆ ವಿದ್ಯುತ್ ಆಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿಲ್ಲ. ಚಿಕಿತ್ಸೆಗೆ ಯಾವುದೇ ನೆರವನ್ನೂ ನೀಡಿಲ್ಲ ಎಂದು ತಂದೆ ಕುಪ್ಪಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಬಾಲಕನ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕವೇ ವಿದ್ಯುತ್ ತಂತಿಯನ್ನು ತೆರವುಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ಕುಪ್ಪಣ್ಣ ನೀಡಿದ ದೂರಿನ ಆಧಾರದ ಮೇಲೆ ಬೇಗೂರು ಪೊಲೀಸರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇನ್ನು ಬಾಲಕನ ಗಾಯಗಳಿಗೆ ಬ್ಯಾಂಡೇಜ್ ಹಾಕಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ. ಆದರೆ, ಗಾಯಗಳು ಸಂಪೂರ್ಣ ಗುಣವಾಗುವ ಮೊದಲೇ ಮನೆಗೆ ಕಳುಹಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಒಟ್ಟಿನಲ್ಲಿ, ಅಪಾಯಕಾರಿ ವಿದ್ಯುತ್ ತಂತಿ ಬಗ್ಗೆ ಮೊದಲೇ ದೂರು ನೀಡಿದ್ದರೂ ಕ್ರಮ ಕೈಗೊಳ್ಳದಿರುವುದು ಬಾಲಕನ ಜೀವಕ್ಕೆ ಅಪಾಯ ತಂದಿದೆ ಎಂಬ ಕುಟುಂಬದ ಆರೋಪಕ್ಕೆ ಬೆಸ್ಕಾಂ ಅಧಿಕಾರಿಗಳು ಉತ್ತರ ನೀಡಬೇಕಿದೆ.

