Greater Bengaluru News9 : ರಾಜ್ಯದ ವಿವಿಧ ನಿಗಮ, ಮಂಡಳಿ ಹಾಗೂ ಅಭಿವೃದ್ಧಿ ಪ್ರಾಧಿಕಾರಗಳಿಗೆ 425ರಿಂದ 428 ಮಂದಿ ನೂತನ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಿಸಿರುವ ವಿಚಾರಕ್ಕೆ ಸಂಬಂಧಿಸಿದ ಗೊಂದಲಕ್ಕೆ ಮುಖ್ಯಮಂತ್ರಿ ಕಚೇರಿ ತೆರೆ ಎಳೆದಿದೆ.
ಈ ಹಿಂದೆ ನೇಮಕಗೊಂಡು ಎರಡು ವರ್ಷಗಳ ಅವಧಿ ಪೂರ್ಣಗೊಳಿಸಿರುವ ನಿರ್ದೇಶಕರು ಹಾಗೂ ಸದಸ್ಯರನ್ನು ಸೇವೆಯಿಂದ ಮುಕ್ತಗೊಳಿಸುವಂತೆ ಸಿಎಂ ಕಚೇರಿ ಸೂಚನೆ ನೀಡಿದೆ. ಇದರಿಂದ ಹಿಂದಿನ ನೇಮಕಾತಿ ಮುಂದುವರಿಯುತ್ತದೆಯೇ ಎಂಬ ಗೊಂದಲಕ್ಕೆ ಸ್ಪಷ್ಟನೆ ಸಿಕ್ಕಂತಾಗಿದೆ.
2 ವರ್ಷ ಪೂರೈಸಿದ ನಿರ್ದೇಶಕರಿಗೆ ಗೇಟ್ಪಾಸ್:
ಹಿಂದಿನ ಅವಧಿಯಲ್ಲಿ ನೇಮಕಗೊಂಡಿದ್ದ ನಿರ್ದೇಶಕರು ಮತ್ತು ಸದಸ್ಯರ ಅಧಿಕಾರಾವಧಿ ರದ್ದುಗೊಳಿಸದೇ ಹೊಸದಾಗಿ ನೇಮಕಾತಿ ಪಟ್ಟಿ ಪ್ರಕಟಿಸಲಾಗಿತ್ತು. ಇದರಿಂದ ಒಂದೇ ಸ್ಥಾನಕ್ಕೆ ಹಳೆಯ ಮತ್ತು ಹೊಸ ಸದಸ್ಯರು ನೇಮಕಗೊಂಡಿರುವ ಗೊಂದಲ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ಅವಧಿ ಪೂರ್ಣಗೊಳಿಸಿರುವ ನಿರ್ದೇಶಕರು ಹಾಗೂ ಸದಸ್ಯರನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಕಚೇರಿ ಸೂಚಿಸಿದೆ. ಇದರೊಂದಿಗೆ ಹಿಂದಿನ ಅವಧಿಯಲ್ಲಿ ನೇಮಕಗೊಂಡಿದ್ದವರ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪ್ರಕಟಿಸಿರುವ ಹೊಸ ಪಟ್ಟಿಯಲ್ಲಿರುವವರಿಗೆ ಅವಕಾಶ ಕಲ್ಪಿಸುವ ಪ್ರಕ್ರಿಯೆಗೆ ದಾರಿ ಸುಗಮವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಕಳೆದಿದ್ದರೂ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ನೇಮಕಾತಿ ಪ್ರಕ್ರಿಯೆ ಹಲವು ಬಾರಿ ಮುಂದೂಡಿಕೆಯಾಗಿತ್ತು. ಪಕ್ಷಕ್ಕಾಗಿ ದುಡಿದ ತಳಮಟ್ಟದ ಕಾರ್ಯಕರ್ತರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಬೇಕೆಂಬ ಬೇಡಿಕೆ ನಿರಂತರವಾಗಿ ಕೇಳಿಬರುತ್ತಿತ್ತು.
ಇತ್ತೀಚೆಗೆ ಸರ್ಕಾರ 425ರಿಂದ 428 ಮಂದಿ ನೂತನ ನಿರ್ದೇಶಕರು ಮತ್ತು ಸದಸ್ಯರ ನೇಮಕಾತಿ ಪಟ್ಟಿ ಪ್ರಕಟಿಸಿತ್ತು. ಆದರೆ ಹಿಂದಿನ ನಿರ್ದೇಶಕರು ಹಾಗೂ ಸದಸ್ಯರ ನೇಮಕಾತಿ ರದ್ದುಗೊಳಿಸದೇ ಹೊಸ ಪಟ್ಟಿ ಬಿಡುಗಡೆ ಮಾಡಿದ್ದರಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲೂ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅಧಿಕೃತ ಆದೇಶ ಹೊರಡಿಸುವ ಪ್ರಕ್ರಿಯೆ ವಿಳಂಬವಾಗಿತ್ತು. ಇದೀಗ ಸಿಎಂ ಕಚೇರಿಯ ಸೂಚನೆಯಿಂದ ಈ ಗೊಂದಲ ನಿವಾರಣೆಯಾಗಿದೆ
ನೂತನ ನೇಮಕಾತಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನವೂ ವ್ಯಕ್ತವಾಗಿತ್ತು. ಪಟ್ಟಿಯನ್ನು ಅಂತಿಮಗೊಳಿಸುವಾಗ ತಮ್ಮ ಅಭಿಪ್ರಾಯಗಳಿಗೆ ಸೂಕ್ತ ಮನ್ನಣೆ ನೀಡಿಲ್ಲ ಎಂದು ಕೆಪಿಸಿಸಿ ವಲಯದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ನೇಮಕಾತಿ ಪಟ್ಟಿಯಲ್ಲಿ ಆರ್ಎಸ್ಎಸ್ ಹಿನ್ನೆಲೆಯುಳ್ಳ ಕಾರ್ಯಕರ್ತರಿಗೂ ನಿರ್ದೇಶಕ ಸ್ಥಾನ ನೀಡಲಾಗಿದೆ ಎಂಬ ಆರೋಪವೂ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಆಡಳಿತಾತ್ಮಕ ಚಟುವಟಿಕೆಗಳನ್ನು ಚುರುಕುಗೊಳಿಸುವುದರ ಜೊತೆಗೆ ಪಕ್ಷದ ಕಾರ್ಯಕರ್ತರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸುವ ಉದ್ದೇಶದಿಂದ ಈ ನೇಮಕಾತಿಗಳನ್ನು ಮಾಡಲಾಗಿದೆ. ಇದೀಗ ಎರಡು ವರ್ಷಗಳ ಅವಧಿ ಪೂರ್ಣಗೊಳಿಸಿದ ಹಳೆಯ ನಿರ್ದೇಶಕರು ಮತ್ತು ಸದಸ್ಯರನ್ನು ಬಿಡುಗಡೆ ಮಾಡುವ ಸೂಚನೆಯೊಂದಿಗೆ ಹೊಸಬರ ನೇಮಕಾತಿಗೆ ಇದ್ದ ಪ್ರಮುಖ ಅಡ್ಡಿ ನಿವಾರಣೆಯಾದಂತಾಗಿದೆ.

